ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಮಾಸ್ಟರ್ ಮೈಂಡ್ ಸುನಿಲ್ ಕುನಗೋಳ್: ಯಾರು ಈ ಸ್ಟ್ರ್ಯಾಟಜಿ ಸ್ಟಾರ್?
ಇಡೀ ರಾಜ್ಯ ಕಾಂಗ್ರೆಸ್ ಸಂಭ್ರಮ ಪಡುವಂತೆ ಸುನೀಲ್ ಕುನಗೋಳು ಅವರ ಮಾಸ್ಟರ್ ಮೈಂಡ್ ರಾಜ್ಯ ರಾಜಕಾರಣದಲ್ಲಿ ವರ್ಕ್ ಆಗಿದೆ. ಹಾಗಾದ್ರೆ, ಯಾರು ಈ ಕಾಂಗ್ರೆಸ್ ಮಾಸ್ಟರ್ ಮೈಂಡ್ ಸುನೀಲ್ ಕುನಗೋಳು?
ಬೆಂಗಳೂರು: ಕರಾವಳಿಯಲ್ಲಿ ಮಾತ್ರ ಕಮಲ ಅರಳಿರುವುದು ಬಿಟ್ಟರೆ ಇನ್ನುಳಿದಂತೆ ಇಡೀ ರಾಜ್ಯ ಸಂಪೂರ್ಣ ಕಾಂಗ್ರೆಸ್ ಮಯವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕಂಪನ.ವಾಗಿದ್ದರೆ, ಕಿತ್ತೂರು ಕರ್ನಾಟಕದಲ್ಲೂ ಕೈಪಡೆಯದ್ದೇ ಅಬ್ಬರ. ಮಧ್ಯ ಕರ್ನಾಟಕ, ಮಲೆನಾಡು, ಹಳೇ ಮೈಸೂರು ಭಾಗದದಲ್ಲಿ ಕಾಂಗ್ರೆಸ್ನದ್ದೇ ಪಾರುಪತ್ಯ. ಕಾಂಗ್ರೆಸ್‌ನ ಈ ದೊಡ್ಡ ಗೆಲುವಿನ ಹಿಂದೆ ಸುನೀಲ್ ಕುನಗೋಳು ತಂತ್ರಗಾರಿಕೆ ಇದೆ. ಇಡೀ ರಾಜ್ಯ ಕಾಂಗ್ರೆಸ್ ಸಂಭ್ರಮ ಪಡುವಂತೆ ಸುನಿಲ್ ಕುನಗೋಳ್ ಅವರ ಮಾಸ್ಟರ್ ಮೈಂಡ್ ರಾಜ್ಯ ರಾಜಕಾರಣದಲ್ಲಿ ವರ್ಕ್ ಆಗಿದೆ. ಸಮಾವೇಶ, ಪಾದಯಾತ್ರೆಗಳದ್ದು ಒಂದು ಮುಖವಾದರೆ, ಡಿಜಿಟಲ್ ವಲಯ ಇನ್ನೊಂದು ಮುಖ. ಬಿಜೆಪಿ ಐಟಿ ಸೆಲ್ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕ್ಯಾಂಪೇನ್‌ಗಳನ್ನು ಮಾಡಿದೆ. ಇಲ್ಲಿಯವರೆಗೂ ಬಿಜೆಪಿ ತಂತ್ರಗಾರಿಕೆಗೆ ಟಕ್ಕರ್ ಕೊಡಲು ಒದ್ದಾಡುತ್ತಿದ್ದ ರಾಜ್ಯ ಕಾಂಗ್ರೆಸ್, ಪೇಸಿಎಂ ಕ್ಯಾಂಪೇನ್ ಮೂಲಕ ಜಿಗಿದೆದ್ದಿತ್ತು. ಇಡೀ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಈ ಅಭಿಯಾನದ ಮೂಲಕವೇ ಆರಂಭವಾಗಿತ್ತು. ಇದರ ಕ್ರೆಡಿಟ್ ಸುನೀಲ್ ಕುನಗೋಳು ಸಲ್ಲುತ್ತದೆ.
ಇದನ್ನೂ ಓದಿ: ಕರುನಾಡಲ್ಲೇ ಆವರಿಸಿದ ಕಾಂಗ್ರೆಸ್ ಸುನಾಮಿ, ಕರಾವಳಿಯಲ್ಲಿ ಮಾತ್ರ ಅರಳಿದ ಕಮಲ
ತೀರಾ ಕೆಲವೊಂದು ಸೀಟ್‌ಗಳನ್ನು ಬಿಟ್ಟರೆ, ಕರ್ನಾಟಕ ಕಾಂಗ್ರೆಸ್ ಈ ಬಾರಿ ಬಹುತೇಕವಾಗಿ ಸುನೀಲ್ ಕುನಗೋಳು ಟೀಮ್ ಮಾಡಿದ್ದ ಸರ್ವೇಯ ಆಧಾರದಲ್ಲಿಯೇ ಅಭ್ಯರ್ಥಿಗಳನ್ನು ಅಂತಿಮ ಮಾಡಿತ್ತು. ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡದಂತೆ, ಹಿಂದು-ಮುಸ್ಲಿಂ ಕುರಿತಾದ ವಿಚಾರ ಮುನ್ನಲೆಗೆ ತರದಂತೆ ಈ ಟೀಮ್ ಸಲಹೆಯನ್ನೂ ನೀಡಿತ್ತು. ಅದರೊಂದಿಗೆ ಕೆಲವೊಂದು 70 ಸೀಟ್‌ಗಳಲ್ಲಿ ಕಾಂಗ್ರೆಸ್‌ನ ಸ್ಪರ್ಧೆ ನೆಪಮಾತ್ರ ಎನ್ನುವುದನ್ನೂ ಈ ಟೀಮ್ ತಿಳಿಸಿಬಿಟ್ಟಿತ್ತು. ಈ ಎಲ್ಲದರ ಯಶಸ್ಸು ಈಗ ಸಿಕ್ಕಿದೆ. ಇಡೀ ರಾಜ್ಯ ಕಾಂಗ್ರೆಸ್ ಸಂಭ್ರಮ ಪಡುವಂತೆ ಸುನೀಲ್ ಕುನಗೋಳು ಅವರ ಮಾಸ್ಟರ್ ಮೈಂಡ್ ರಾಜ್ಯ ರಾಜಕಾರಣದಲ್ಲಿ ವರ್ಕ್ ಆಗಿದೆ.
ಐಟಿ ಹಬ್ ಬೆಂಗಳೂರಿಗೆ ಐಟಿ ರೀತಿಯಲ್ಲೇ ಯೋಚನೆ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತಿವಿದಿರುವ ಅಭಿಯಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಖ್ಯಾತ ಡಿಜಿಟಲ್ ವ್ಯಾಲೆಟ್ ಕಂಪನಿಯ ಹೆಸರನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿತ್ತು. ರಾಜ್ಯ ಸರ್ಕಾರದ ಕಮಿಷನ್ ಆರೋಪದ ಜನರಿಗೆ ರೀಚ್ ಮಾಡುವಲ್ಲಿ ಸೋಲುತ್ತಿದ್ದ ಕಾಂಗ್ರೆಸ್, ಪೇಸಿಎಂ ಮೂಲಕ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅದಕ್ಕೂ ಮುನ್ನ ನಿಮ್ಮಹತ್ರ ಇದ್ಯಾ ಉತ್ತರ ಅನ್ನೋ ಕ್ಯಾಂಪೇನ್‌ಅನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಅದಾದ ನಂತರ 40% ಸರ್ಕಾರ ಅನ್ನೋ ಕ್ಯಾಂಪೇನ್ ಅನ್ನು ಕಾಂಗ್ರೆಸ್ ಮಾಡಿತ್ತು. ಇದಾದ ಬಳಿಕ, ಈ ವಿಚಾರ ಜನರಿಗೆ ಇನ್ನಷ್ಟು ಡೀಪ್ ಆಗಿ ವಿಚಾರ ತಲುಪಬೇಕು ಎನ್ನುವ ಗುರಿಯಲ್ಲಿ ಪೇಸಿಎಂ ಕ್ಯಾಂಪೇನ್ ಮಾಡಿದ ಯಶಸ್ಸು ಕಂಡಿತ್ತು.
ಯಾರು ಈ ಮಾಸ್ಟರ್ ಮೈಂಡ್ ಸುನೀಲ್ ಕುನಗೋಳು?
ಯಾರಿವರು ಸುನಿಲ್ ಕನುಗೋಳು: ಸೋಷಿಯಲ್ ಮೀಡಿಯಾ ಸ್ಟ್ರ್ಯಾಟಜಿ ಟೀಮ್‌ನಲ್ಲಿದ್ದರೂ, ಸುನಿಲ್ ಕುನಗೋಳ್ ಯಾವುದೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ. ಪ್ರಶಾಂತ್ ಕಿಶೋರ್ ಹಾಗೂ ಇವರು ಜೊತೆಯಾಗಿ ಕೆಲಸ ಮಾಡಿದ್ದರೂ, ಇಬ್ಬರ ಕಾರ್ಯವೈಖರಿ ವಿಭಿನ್ನ. ಪ್ರಶಾಂತ್ ಹೆಚ್ಚಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಸುನಿಲ್ ಅದ್ಯಾವ ಗೋಜಿಗೂ ಹೋಗೋದಿಲ್ಲ. 2014ರಲ್ಲಿ ಇಬ್ಬರೂ ಬೇರೆಯಾಗುವುದಕ್ಕೂ ಮುನ್ನ ಒಟ್ಟಿಗೆ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ಚುನಾವಣೆಗೆ ಕನುಗೋಳು ಕಂಪನಿ ಮೈಂಡ್‌ಶೇರ್ ಅನಾಲಿಟಿಕ್ಸ್ ಸೇವೆಯನ್ನು ಕಾಂಗ್ರೆಸ್ ನೇಮಿಸಿಕೊಂಡಿದೆ.
ಹೌದು.. ಚುನಾವಣಾ ತಂತ್ರಗಾರನನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಕಾಂಗ್ರೆಸ್ ನೇಮಿಸಿಕೊಂಡಿತ್ತು. ಎರಡು ತಿಂಗಳ ನಂತರ, ಸೋನಿಯಾ ಗಾಂಧಿಯವರು ಸುನಿಲ್ ಕುನಗೋಳ್ ಅವರನ್ನು ಪಕ್ಷದ 2024 ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಿದ್ದರು. ಈ ಹಿಂದೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದ್ದ ಸುನಿಲ್ ಕುನಗೋಳ್ ಅವರು 2014 ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯ ಎಬಿಎಂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿ ಬಿಜೆಪಿ ಗೆಲುವು ಕಾಣಲು ಸಾಧ್ಯವಾಯ್ತು.
ಕರ್ನಾಟಕದವರಾದ ಸುನಿಲ್ ಕುನಗೋಳ್ ಅವರು ಚೆನ್ನೈನಲ್ಲಿ ಬೆಳೆದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಿರ್ಣಾಯಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆ ಸಹಾಯಕವಾಗಿದೆ. ಮುಂದೆ ತೆಲಂಗಾಣದಲ್ಲಿ ಕಾಂಗ್ರೆಸ್‌ನ ರಾಜಕೀಯ ಭವಿಷ್ಯವನ್ನು ಮರುಸ್ಥಾಪಿಸುವುದು, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳುವುದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ಯುವುದು ಮತ್ತು ಮುಖ್ಯವಾಗಿ, ಕಾಂಗ್ರೆಸ್ ಅನ್ನು ಪ್ರಧಾನಿ ವಿರುದ್ಧ ಪ್ರಬಲ ಮತ್ತು ಗೆಲ್ಲುವ ಸ್ಪರ್ಧಿಯನ್ನಾಗಿ ಮಾಡುವುದು ಸುನಿಲ್ ಕಾನುಗೋಲು ಅವರ ಪ್ರಮುಖ ಕಾರ್ಯ ಯೋಜನೆಯಾಗಿದೆ.
Published On - 8:54 am, Sun, 14 May 23