ಉಡುಪಿ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ನಗದನ್ನು ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಚೆಕ್‌ಪೋಸ್ಟ್ ಪೊಲೀಸರು ಜಪ್ತಿ (seized) ಮಾಡಿದ್ದಾರೆ. ದಾಖಲೆ ಇಲ್ಲದೆ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಬೊಲೆರೊ ವಾಹನದಲ್ಲಿ ಹಣ ಸಾಗಿಸುತ್ತಿದ್ದರು. ಚುನಾವಣಾಧಿಕಾರಿ ಮದನ್ ಮೋಹನ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಬ್ಯಾಂಕ್ ಲೆಟರ್ ವಶಪಡಿಸಿಕೊಂಡಿದ್ದಾರೆ. ಸಾಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಲಕ್ಷ ರೂ. ನಗದನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಬಸ್‌ನಲ್ಲಿ ತಪಾಸಣೆ ವೇಳೆ ಪತ್ತೆ ಆಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಪ್ಪಾಣಿಗೆ ಬಸ್ ಆಗಮಿಸುತ್ತಿತ್ತು. ತಪಾಸಣೆ ವೇಳೆ ಮಹಾರಾಷ್ಟ್ರ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಾಸಾಹೇಬ್ ಪಾಟೀಲ್ ಬಳಿ 8 ಲಕ್ಷ ಹಣ ಪತ್ತೆ ಆಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, 9 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ 8 ಲಕ್ಷ ನಗದು ಪತ್ತೆಯಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ದಾಖಲೆ ಇಲ್ಲದಿರುವುದು ತಿಳಿದುಬಂದಿದೆ. ಹೀಗಾಗಿ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ. ಇತ್ತ ಚಿಕ್ಕಾಲಗುಡ್ಡ ಚೆಕ್ಪೋಸ್ಟ್ನಲ್ಲೂ ಒಂದು ಕಾರನ್ನು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 1 ಲಕ್ಷ ನಗದು ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ. ಸದ್ಯ ಚುನಾವಣಾ ಅಧಿಕಾರಿಗಳು ಎರಡು ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.5 ಕೆಜಿ ಚಿನ್ನಾಭರಣ ಜಪ್ತಿ, ಬೆಳಗಾವಿಯಲ್ಲಿ 9 ಲಕ್ಷ ವಶಕ್ಕೆ
ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಚೆಕ್ಪೋಸ್ಟ್ಗಳಲ್ಲಿ 20 ಲಕ್ಷ ರೂಪಾಯಿ ನಗದು, ಲಕ್ಷಾಂತರ ಮೌಲ್ಯದ ಗಿಫ್ಟ್‌ಗಳನ್ನು ಜಪ್ತಿ ಮಾಡಲಾಗಿದೆ. ಕಡೂರು ಚೆಕ್‌ಪೋಸ್ಟ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು, ತರೀಕೆರೆ ಚೆಕ್‌ಪೋಸ್ಟ್‌ನಲ್ಲಿ 3 ಲಕ್ಷಕ್ಕೂ, ಲಕ್ಕವಳ್ಳಿ ಎಂ.ಎನ್.ಕ್ಯಾಂಪ್‌ನಲ್ಲಿ ಒಂದು ಲಕ್ಷ ನಗದು ಸೀಜ್ ಮಾಡಲಾಗಿದೆ. ಕೊರಿಯರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 7.5 ಲಕ್ಷ ಮೌಲ್ಯದ 760 ಜೀನ್ಸ್ ಪ್ಯಾಂಟ್ ಮತ್ತು ಬೀರೂರಿನಲ್ಲಿ 68 ಸಾವಿರಕ್ಕೂ ಮೌಲ್ಯದ 47 ಕುಕ್ಕರ್, 77 ಸೀರೆಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗಾಗಿ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಕಣ್ಣೀರಿಡುತ್ತಲೇ ಬೆಂಬಲಿಗರನ್ನು ಸಮಾಧಾನಿಸುತ್ತಿರುವ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್ಎ ರಾಮದಾಸ್
ಮಾರ್ಚ್ 29ರಿಂದ ಈವರೆಗೆ ಬೆಂಗಳೂರಲ್ಲಿ 53.83 ಕೋಟಿ ರೂಪಾಯಿಗೂ ಅಧಿಕ ಹಣ, ಮದ್ಯ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಬರೋಬ್ಬರಿ 1187 ಎಫ್ಐಆರ್ ದಾಖಲಾಗಿವೆ. 8.26 ಕೋಟಿ ರೂ. ನಗದು, 22.16 ಕೋಟಿ ರೂ. ಮೌಲ್ಯದ ಮದ್ಯ, 9.51 ಕೋಟಿ ರೂ. ಮೌಲ್ಯದ ಡ್ರಗ್ಸ್, 4.73 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಕೋಟಿ ರೂ. ಮೌಲ್ಯದ ಉಡುಗೊರೆ ಮತ್ತು 4.27 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Sat, 15 April 23