ನಾಮಪತ್ರ ಸಲ್ಲಿಕೆ ಆರಂಭವಾಗಿ 6 ದಿನಕಳೆದಿದ್ದು ಅಬ್ಬರದ ಮೆರವಣಿಗೆಯೊಂದಿಗೆ ನಾಯಕರು ಉಮೆದುವಾರಿಕೆ ಸಲ್ಲಿಸುತ್ತಿದ್ದಾರೆ. ನಿನ್ನೆ (ಏ.18) ಕಾಂಗ್ರೆಸ್ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಲಭಿಸಿದೆ. ಇನ್ನು ಕೋಲಾರ ಮತ್ತು ಪುಲಕೇಶಿನಗರ ಟಿಕೆಟ್ ಫೈನಲ್ ಆಗಿಲ್ಲ. 5 ಬೆರಳುಗಳಂತೆ 5 ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದು, ಇಂದು ಕೊನೆ ಪಟ್ಟಿ ಹೊರಬರುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಪಾಳಯದಲ್ಲಿ ಹಿರಿ ತೆಲೆ ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯ ಸೋಲಿಲ್ಲದ ಸರದಾರ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಮತಗಳು ಇಬ್ಬಾಗವಾಗುವ ಸಾಧ್ಯತೆ ಇದೆ. ಇದು ಕಮಲ ಕಲಿಗಳಿಗೆ ತೆಲೆನೋವಾಗಿದೆ. ಇದನ್ನು ಕಡಿಮೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಗರಕ್ಕೆ ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
ಏಪ್ರಿಲ್ 27ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದ ಸ್ಥಳ ಇನ್ನೂ ನಿಗದಿಯಾಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರದಲ್ಲಿ ರೋಡ್ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.
ಲಿಂಗಾಯತ ಸಮುದಾಯದ 23 ಮುಖಂಡರ ಜೊತೆಗಿನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ಅಂತ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ 23 ಮುಖಂಡರು ಭಾಗಿಯಾಗಿದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ಕುಮಾರಕೃಪಾ ರಸ್ತೆಯ ‘ಕಾವೇರಿ’ ನಿವಾಸದಲ್ಲಿ ಸಭೆ ಲಿಂಗಾಯತ ಸಮುದಾಯದ 23 ಮುಖಂಡರ ಜೊತೆ ಸಭೆ ಆರಂಭವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ 23 ಮುಖಂಡರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಉಪಸ್ಥಿತರಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಬಿಎಸ್ವೈ ಸಭೆ ನಡೆಸುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಬುಧವಾರ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಕೆ.ಆರ್.ಪುರಂ ಕ್ಷೇತ್ರ-ಡಿ.ಕೆ.ಮೋಹನ್ ಬಾಬು, ಪುಲಿಕೇಶಿನಗರ ಕ್ಷೇತ್ರ-ಎ.ಸಿ.ಶ್ರೀನಿವಾಸ್, ಮುಳಬಾಗಿಲು ಕ್ಷೇತ್ರ-ಡಾ.ಬಿ.ಸಿ.ಮುದ್ದು ಗಂಗಾಧರ. ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡಿದ್ದು, ಯಾಸೀರ್ ಅಹ್ಮದ್ಖಾನ್ ಪಠಾಣ್ಗೆ ಶಿಗ್ಗಾಂವಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಾಸನ ತಾಲೂಕು ಕಚೇರಿಗೆ ಬುಧುವಾರ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಒಂದು ಪ್ರತಿ, ಪಕ್ಷೇತರವಾಗಿ ಮತ್ತೊಂದು ಪ್ರತಿ ಸಲ್ಲಿಕೆ ಮಾಡಲಾಗಿದೆ.
ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕೇಳಿದ್ದೆ, ಆದರೆ ಬಿಜೆಪಿ ಕೊಡಲಿಲ್ಲ. ಶಿವಮೊಗ್ಗ, ಮಾನ್ವಿ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಶಿವಮೊಗ್ಗದಲ್ಲಿ ಕೊಲೆ ಸುಲಿಗೆ ಆಗ್ತಿದೆ ಎಂದು ಆಯನೂರು ಮಂಜುನಾಥ್ ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಬಡವರ ಕುಟುಂಬ ರಕ್ಷಣೆ ಮಾಡಬೇಕಿದೆ. ನನ್ನ ನಿಲವು ಕೇಳಿ H.D.ಕುಮಾರಸ್ವಾಮಿ ಬಿ ಫಾರಂ ಕೊಟ್ಟಿದ್ದಾರೆ. ನಾನು ಶಿವಮೊಗ್ಗದಲ್ಲಿ ಪ್ರವಾಹದ ವಿರುದ್ಧ ಈಜುತ್ತೇನೆ ಅನ್ನಿಸುತ್ತೆ. ಮೋದಿ ಹೆಸರನ್ನು ಇವರೆಲ್ಲರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಹಾಸನ: JDS ಗೆಲ್ಲಬೇಕು, ಬಿಜೆಪಿ ಮತ್ತು ಕಾಂಗ್ರೆಸ್ ಸೋಲಬೇಕೆಂದು ಭವಾನಿ ರೇವಣ್ಣ ಶಪಥ ಮಾಡಿದ್ದಾರೆ. ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ವರೂಪ್ ಗೆಲ್ಲಿಸಲು ಶಪಥ ಮಾಡಿದ್ದಾರೆ. ಇಲ್ಲಿ ಸ್ವರೂಪ್ ಗೆಲ್ಲಲೇ ಬೇಕೆಂದು ರೋಷಾವೇಶದಿಂದ ಭಾಷಣ ಮಾಡಿದ್ದಾರೆ.
ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸಿದೆ. ಅವುಗಳ ವಿವರ ಹೀಗಿದೆ;
ಕರ್ನಾಟಕ ವಿಧಾನಸಭೆ ಚುನಾವಣೆಗೆ 59 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಹುಕ್ಕೇರಿ ಸೇರಿದಂತೆ 59 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ಎಂದು ಘೋಷಣೆ ಮಾಡಲಾಗಿದೆ.
ಪಟ್ಟಿಯ ಪೂರ್ಣ ವಿವರಗಳಿಗೆ ಈ ಸುದ್ದಿ ಓದಿ: Karnataka Assembly Election: ಜೆಡಿಎಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ
ರ್ನಾಟಕ ವಿಧಾನಸಭೆ ಚುನಾವಣೆಗೆ 40 ನಾಯಕರನ್ನೊಳಗೊಂಡ ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಶಿ ತರೂರ್, ರಮ್ಯಾ, ಉಮಾಶ್ರೀ, ಜಗದೀಶ್ ಶೆಟ್ಟರ್, ಸತೀಶ್ ಜಾರಕಿಹೊಳಿ, ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಡಾ.ಪರಮೇಶ್ವರ್, ರಣದೀಪ್ ಸಿಂಗ್ ಸುರ್ಜೇವಾಲ, ಚಿದಂಬರಂ ಸೇರಿ 40 ನಾಯಕರನ್ನು ಹೆಸರಿಸಲಾಗಿದೆ.
ಮಂಡ್ಯದಲ್ಲಿ ಒಬ್ಬರು ಸವಾಲೆಸೆದುಕೊಂಡು ಹೊರಟಿದ್ದಾರೆ. ನಾನು ಈಗಾಗಲೇ ಚನ್ನಪಟ್ಟಣದಲ್ಲಿ ಅರ್ಜಿ ಹಾಕಿದ್ದೇನೆ. ಸವಾಲು ಹಾಕಿ ಸೆಡ್ಡು ಹೊಡಿತಾರೆ ಅಂದ್ರೆ ದೇವೇಗೌಡರ ಕುಟುಂಬದ ಮೇಲಿನ ದ್ವೇಷ ತೋರಿಸುತ್ತದೆ. ನಾನು ಒಂದೇ ಕಡೆ ಸ್ಪರ್ಧಿಸುವುದು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಸಿದರು.
ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ಚಿತ್ರದುರ್ಗ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಿದರು. ಸಿಎಂ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಕಿಚ್ಚ ಸುದೀಪ್ ಸಾಥ್ ನೀಡಿದರು.
ಹಾವೇರಿ: ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರು ನಾಮ ಪತ್ರ ಸಲ್ಲಿಕೆಗೆ ಹೊಗುತ್ತಿದ್ದಾರೆ. ಇವರ ನಾಮಪತ್ರ ಸಲ್ಲಿಕೆ ಕೆವಲ ಶಾಸಕ ಸ್ಥಾನಕ್ಕಾಗಿ ಅಲ್ಲ. ಈ ರಾಜ್ಯವನ್ನು ಹೊಸ ದಿಕ್ಕಿಗೆ ಒಯ್ಯುವ ಕಾರ್ಯ ಆಗಲಿದೆ. ನಿಮ್ಮಲ್ಲಿರುವ ಆತ್ಮ ವಿಶ್ವಾಸ, ಉತ್ಸಾಹ ನೋಡಿದರೇ ಬೊಮ್ಮಾಯಿ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳುವ ಮೂಲಕ ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಮತ್ತೆ ಸಿಎಂ ಆಗುವ ಸುಳಿವು ನೀಡಿದ್ದಾರೆ.
ಶಿಗ್ಗಾಂವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಂದ್ರೆ ಕಮಿಷನ್. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ. ಕಾಂಗ್ರೆಸ್ ನಾಯಕರು ಎಟಿಎಂ ಇದ್ದಂತೆ. ವಂದೇ ಭಾರತ ರೈಲು ಇಲ್ಲಿ ಓಡಾಡುತ್ತಿದೆ. ರಾಜ್ಯದಲ್ಲಿ ಅನೇಕ ಹೊಸ ರೈಲುಗಳು ಸಂಚಾರ ಮಾಡುತ್ತಿವೆ. ರಾಜ್ಯದಲ್ಲಿ ರೈಲು ಸಂಚಾರಗಳ ಸಂಖ್ಯೆ ಹೆಚ್ಚಿಗೆ ಆಗಬೇಕಾದರೇ ಬಿಜೆಪಿಗೆ ಮತ ಕೊಡಿ. ಆಯುಷ್ಮಾನ ಭಾರತ ಯೋಜನೆಯಿಂದ ಬಡವರಿಗೆ ಅನಕೂಲ ಆಗುತ್ತಿದೆ.
ಈ ಯೋಜನೆ ಮುಂದುವರೆಯಲು ಬಿಜೆಪಿ ಮತ ಹಾಕಿ. ಸಿದ್ದರಾಮಯ್ಯ ಪಿಎಫ್ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೆವೆ ಎಂದು ಹೇಳುತ್ತಿದ್ದಾರೆ. ಪಿಎಫ್ಐ ಬ್ಯಾನ್ ಮಾಡಿದ್ದರಿಂದ ರಾಜ್ಯದಲ್ಲಿ ಕ್ರೈಮ್ ಸಂಖ್ಯೆ ಕಡಿಮೆ ಆಗಿದೆ. ಬೊಮ್ಮಾಯಿಯವರಿಂದ ರಾಜ್ಯದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ ಎಂದು ಬೊಮ್ಮಾಯಿ ಸರ್ಕಾರವನ್ನು ಹಾಡಿ ಹೊಗಳಿದರು.
ಹಾವೇರಿ: ಶಿಗ್ಗಾಂವಿಯಲ್ಲಿ ಪ್ರಚಾರ ಆರಂಭಿಸಿದ್ದಕ್ಕೆ ಬಹಳ ಖುಷಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿಯವರು ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಭಾರತೀಯನಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ ಎಂದು ಶಿಗ್ಗಾಂವಿಯಲ್ಲಿ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಹಾವೇರಿ: ಸಿಎಂ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಅಂತಾ ಊಹಾಪೋಹ ಇತ್ತು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನಾನು ತೀರುಕೊಂಡ ಮೇಲೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ: ಸತತ 15 ವರ್ಷ ನೀವು ನನಗೆ ಆಶೀರ್ವಾದ ಮಾಡಿದ್ದೀರಿ. ನಮ್ಮ ನಿಮ್ಮ ನಡುವೆ ಬೇರೆ ಯಾವುದೇ ಶಕ್ತಿ ಬರಲು ಸಾಧ್ಯವಿಲ್ಲ. ಶಿಗ್ಗಾಂವಿ ಕ್ಷೇತ್ರದ ಜನರ ಪ್ರೀತಿಗೆ ನಾನು ಸೋತಿದ್ದೇನೆ. ಶಿಗ್ಗಾಂವಿ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇನೆ. ರಾಜ್ಯದಲ್ಲಿ 125ಕ್ಕಿಂತ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೇವೆ. ನಾನು ಸಿಎಂ ಆಗಿ ವಿದ್ಯಾರ್ಥಿಗಳು, ರೈತರಿಗಾಗಿ ಯೋಜನೆ ಜಾರಿ ಮಾಡಿದ್ದೇನೆ ಎಂದು ಬಿಜೆಪಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆಗು ಮುನ್ನ ಶಿಗ್ಗಾಂವಿಯಲ್ಲಿ ಬಿಜೆಪಿಯ ಬೃತ್ ಸಮಾವೇಶ ನಡೆದಿದೆ. ಶಿಗ್ಗಾಂವಿ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು,
ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ, ನಟ ಸುದೀಪ್, ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ್ ನಿರಾಣಿ ಭಾಗಿಯಾಗಿದ್ದಾರೆ
ಹಾವೇರಿ: ಶಿಗ್ಗಾಂವಿಯಲ್ಲಿ ಇಂದು (ಏ.19) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಶಕ್ತಿ ಪ್ರದರ್ಶನ ನಡೆದಿದೆ. ಚೆನ್ನಮ್ಮ ಸರ್ಕಲ್ನಿಂದ ಸಮಾವೇಶದ ಸ್ಥಳದವರೆಗೂ ರೋಡ್ ಶೋ ನಡೆದಿದೆ. ಈ ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ನಟ ಸುದೀಪ್, ಸಿಎಂ ಬೊಮ್ಮಾಯಿ, ಜೆಪಿ ನಡ್ಡಾ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು, ನಟ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಸಿಳ್ಳೆ ಕೆಕೆ ಹಾಕುತ್ತಿದ್ದಾರೆ. ಇನ್ನು ಮೆರವಣಿಗೆ ತುಂಬೆಲ್ಲ ನಟ ಸುದೀಪ್ ಭಾವಚಿತ್ರವಿರುವ ಬಾವುಟಗಳು ರಾರಾಜಿಸುತ್ತಿವೆ. ನಟ ಸುದೀಪ್ ಅವರನ್ನು ನೋಡಲು ಸುತ್ತ-ಮುತ್ತದ ಹಳ್ಳಿಯ ಯುವಕರು ಮತ್ತು ಯುವತಿಯರು ಆಗಮಿಸಿದ್ದಾರೆ.
ಹಾವೇರಿ: ಇದು ವಿಜಯೋತ್ಸವ. ಇಲ್ಲಿ ಸಂಭ್ರಮ ಕಾಣಿಸುತ್ತಿದೆ. ಈಗಾಗಲೇ ಗೆದ್ದಾಗಿದೆ ಇದು ವಿಜಯೋತ್ಸವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಚಿತ್ರದುರ್ಗ:ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹೊಸದುರ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗೂಳಿಹಟ್ಟಿ ಶೇಖರ್ ಇಂದು (ಏ.19) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ಬೆಂಬಲಿಗರ ಜೊತೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ ಹಿನ್ನಲೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಿಂದ ರೋಡ್ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಮಲ್ಲಿಕಾರ್ಜುನ ಶಾಮನೂರು, ಪತ್ನಿ ಶಿಲ್ಪಾ ಶೆಟ್ಟರ್, ರಜತ್ ಉಳ್ಳಾಗಡ್ಡಿ ಮಠ ಸಾಥ್ ನೀಡಿದ್ದಾರೆ. ರೋಡ್ ಶೋ ನಂತರ ನಾಮಪತ್ರ ಸಲ್ಲಿಸಲಿದ್ದಾರೆ.
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಏ.19) ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಬೃಹತ್ ರೋಡ್ ಶೋ ನಡೆಸಿದ್ದಾರೆ. ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋಗೆ ಚಾಲನೆ ನೀಡಲಾಯಿತು. ರಾಣಿ ಚೆನ್ನಮ್ಮ ವೃತ್ತದಿಂದ ರೋಡ್ಶೋ ಆರಂಭವಾಗಿದೆ.
ಶಿವಮೊಗ್ಗ: ಶಿಕಾರಿಪುರ ಬಿಜೆಪಿ ಅಭ್ಯರ್ಥಿಯಾಗಿ ಬಿವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಶಿಕಾರಿಪುರದಲ್ಲಿ ಬೃಹತ್ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗುತ್ತಾರೆ. ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನ ಬಿಎಸ್ ಯಡಿಯೂರಪ್ಪ, ಬಿವೈ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ನನಗೂ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ. ಶಿಕಾರಿಪುರದ ಜತೆ ಬೇರೆ ಕ್ಷೇತ್ರಗಳಲ್ಲೂ 1 ವಾರ ಪ್ರಚಾರ ಮಾಡುವೆ ಎಂದು ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಹುಬ್ಬಳ್ಳಿ: ಬಿಜೆಪಿಯವರು ಬೆಳಗಾದರೆ ಲಿಂಗಾಯತ ಪರ ಎನ್ನುತ್ತಾರೆ. ಆದರೆ ಯಡಿಯೂರಪ್ಪ ಅವರ ಪರಿಸ್ಥಿತಿ ಏನಾಯ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರ ಕಥೆ ಏನಾಯ್ತು. ಬಿಜೆಪಿಯವರು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲ್ಲ ಎನ್ನಲು ಕಾರಣ ಹೇಳಲಿ. ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಲ್ಲಿ ಅನ್ಯಾಯ ಆಗಿದ್ದಕ್ಕೆ ಕಾಂಗ್ರೆಸ್ ಸೇರಿದ್ದಾರೆ. ಜಗದೀಶ್ ಶೆಟ್ಟರ್ ಗೆದ್ದು ಬರುವ ವಿಶ್ವಾಸ ಇದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಬೆಂಗಳೂರು: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮತಗಳ ಕ್ರೋಢೀಕರಣಕ್ಕೆ ಬಿಜೆಪಿ ಹೈಕಮಾಂಡ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ
ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಪ್ರಚಾರದ ಕಣ್ಣಕ್ಕೆ ಇಳಿಯಲಿದ್ದಾರೆ.
ಬೆಂಗಳೂರು: ಪದ್ಮನಾಭನಗರ ಅಭ್ಯರ್ಥಿಯಾಗಿ ರಘುನಾಥನಾಯ್ಡು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ರಘುನಾಥನಾಯ್ಡು ನಾಮಪತ್ರ ಸಲ್ಲಿಸುತ್ತಾರೆ. ನಮ್ಮ ಅಭ್ಯರ್ಥಿ ರಘುನಾಥ ನಾಯ್ಡು ಗೆಲ್ಲುವ ವಾತಾವರಣ ಇದೆ. ಹಾಗೇ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಸಹ ನಾಮಪತ್ರ ಸಲ್ಲಿಸುತ್ತಾರೆ. ಬಿಜೆಪಿ, ಜೆಡಿಎಸ್ನವರು ಚೆಸ್ ಆಟ ಆಡುತ್ತಿದ್ದಾರೆ, ನಾವೂ ಆಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎರಡು ದಿನ ಹುಬ್ಬಳ್ಳಿ ಪ್ರವಾಸದಲ್ಲಿದ್ದು, ಇಂದು (ಏ.18) ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೆಪಿ ನಡ್ಡಾ ಅವರಿಗೆ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.
ಹುಬ್ಬಳ್ಳಿ: ಶಿಗ್ಗಾಂವಿಯಲ್ಲಿ ಇಂದು (ಏ.19) ನಾನು ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರು, ನಟ ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಭಾಗಿಯಾಗುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬೆಂಗಳೂರು: ಚುನಾವಣೆ ಪ್ರಚಾರ ನನಗೇನು ಹೊಸದಲ್ಲ. ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೇನೆ. ಶಿಗ್ಗಾಂವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ. ಶಿಗ್ಗಾಂವಿಗೆ ತೆರಳುವ ಮುನ್ನ ನಟ
ಸಿಎಂ ಬೊಮ್ಮಾಯಿ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ. ಪಾದಯಾತ್ರೆ, ರೋಡ್ ಶೋ ಎಲ್ಲವೂ ಇರುತ್ತೆ. ಮೇ 7ರವರೆಗೆ ಚುನಾವಣಾ ಪ್ರಚಾರ ಇರುತ್ತೆ ಅಂತ ಹೇಳಿದ್ದಾರೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಬೆಂಗಳೂರು: ಕ್ಯಾಂಪೇನಿಂಗ್ ನನಗೇನು ಹೊಸದಲ್ಲ. ಇವತ್ತು ಶಿಗ್ಗಾಂವಿ ಆರಂಭ ಮಾಡುತ್ತಿದ್ದೇವೆ. ಪಾದಯಾತ್ರೆ, ರೋಡ್ ಶೋ ಎಲ್ಲಾ ಇರುತ್ತೆ. 7 ನೇ ತಾರೀಖಿನವರೆಗೂ ಪ್ರಚಾರ ಇರುತ್ತೆ ಅಂತ ಹೇಳಿದ್ದಾರೆ. ಯಾರ ಪರವಾಗಿ ಪ್ರಚಾರ ಮಾಡಬೇಕು, ಹೇಗೆ ಪ್ರಚಾರ ಮಾಡಬೇಕು ಅನ್ನೋದನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೀಂ ಬ್ಲ್ಯೂ ಪ್ರಿಂಟ್ ರೆಡಿ ಮಾಡುತ್ತಾರೆ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನನಗೆ ಬೇರೆ ಕಡೆಯಿಂದಲೂ ಪ್ರಚಾರ ಮಾಡುವಂತೆ ಕೇಳುತ್ತಿದ್ದರು. ಪ್ರತಿ ಬಾರಿಯೂ ಕೇಳುತ್ತಾರೆ, ಅದರಂತೆ ಈ ಬಾರಿಯೂ ಕೇಳಿದ್ದಾರೆ. ಆದರೆ ಈ ಸಾರಿ ನಾನು ಇದನ್ನೇ ಆಯ್ಕೆ ಮಾಡಿದ್ದೇನೆ. ಈಗಾಗಗಲೇ ಕಾರಣನೂ ಹೇಳಿದ್ದೇನೆ ಎಂದರು.
ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ. ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅವರು ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಳಗಾವಿ: ಜಿಲ್ಲೆಯ ಸವದತ್ತಿಯಲ್ಲಿ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಚುನಾವಣಾ ಅಧಿಕಾರಿಗಳು 42.92 ಲಕ್ಷ ರೂ. ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸವದತ್ತಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸವದತ್ತಿಯ ಸಂಭವ ಟಿಂಬರ್ ಯಾರ್ಡ್ ಗೋದಾಮಿನ ಮೇಲೆ ದಾಳಿ ಮಾಡಿದ್ದು 23 ಲಕ್ಷ 84 ಸಾವಿರದ 272 ರೂ. ಮೌಲ್ಯದ 1012 ಹೊಲಿಗೆ ಯಂತ್ರ, 4.56 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳ 1200 ಟೇಬಲ್‌ಗಳು, 11 ಲಕ್ಷ 27 ಸಾವಿರ 840 ರೂ. ಮೌಲ್ಯದ 1060 ಐರನ್ ಸ್ಟ್ಯಾಂಡ್, 3.24 ಲಕ್ಷ ಮೌಲ್ಯದ 2160 ಟಿಫಿನ್ ಬಾಕ್ಸ್‌ಗಳು ಪತ್ತೆಯಾಗಿವೆ. ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾ ಭಾವಚಿತ್ರದ ಟಿಫಿನ್ ಬಾಕ್ಸ್‌ಗಳು ಇದ್ದವು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಧ್ಯಾಹ್ನ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿ ವಾಹಿನಿಗಳ ಪ್ರತಿನಿಧಿಯಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಕೈಯಲ್ಲಿ ಮೈಕ್ ಹಿಡಿದು ಗಲ್ಲಿ ಗಲ್ಲಿಯಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸೊಪ್ಪಿನಕೆರೆ ಸೇರಿದಂತೆ ಹತ್ತಾರು ಕಡೆ ಸುತ್ತಾಡಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Published On - 7:43 am, Wed, 19 April 23