ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಇದೇ ಮೊದಲ ಬಾರಿಗೆ ಆನ್ ಲೈನ್​ ಮೂಲಕ ಸಲ್ಲಿಸಲು ಅವಕಾಶ

|

Updated on: Apr 13, 2023 | 7:43 AM

ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾಗಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಇದೇ ಮೊದಲ ಬಾರಿಗೆ ಆನ್ ಲೈನ್​ ಮೂಲಕ ಸಲ್ಲಿಸಲು ಅವಕಾಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದ 224 ಕ್ಷೇತ್ರಗಳ ವಿಧಾನಸಭೆ ಚುನಾವಣೆಗೆ (Karnataka Assembly Elctions 2023) ಇಂದಿನಿಂದ(ಏಪ್ರಿಲ್ 13) ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್‌ 20ರವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ. ಇನ್ನು ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16 ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಏಳು ದಿನಗಳಲ್ಲಿ ಎರಡು ದಿನ ಸರ್ಕಾರಿ ರಜೆ ಇರಲಿದ್ದು, ಐದು ದಿನಗಳು ಮಾತ್ರ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಇದೇ ಮೊದಲ ಬಾರಿಗೆ ಆನ್ ಲೈನ್​ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಚುನಾವಣೆ ಆಯೋಗದ ವೆಬ್​ಸೈಟ್​ನಲ್ಲಿ ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಕಾಂಗ್ರೆಸ್‌ 166 ಕ್ಷೇತ್ರಗಳಿಗೆ, ಬಿಜೆಪಿ 212 ಹಾಗೂ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ‘ಬಿ’ ಫಾರಂ ವಿತರಣೆ ಆರಂಭಿಸಿವೆ. ಆದರೆ, ಎಲ್ಲ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಲಾರಂಭಿಸಿದೆ. ಇನ್ನೊಂದೆಡೆ ಟಿಕೆಟ್​ ಕೈತಪ್ಪಿದ್ದರಿಂದ ಎಲ್ಲ ಪಕ್ಷಗಳಲ್ಲೂ ಬಂಡಾಯದ ಬಿಸಿ ಹೊತ್ತಿ ಉರಿಯುತ್ತಿದೆ. ಇದರ ಮಧ್ಯೆಯೂ ಟಿಕೆಟ್‌ ಖಾತರಿಯಾಗಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಶುಭ ದಿನ ಮತ್ತು ಶುಭ ಮಹೂರ್ತ ನಿಗದಿ ಮಾಡಿಕೊಳ್ಳುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಎಷ್ಟು ಜನರಿಗೆ  ಪ್ರವೇಶ?

ನಾಮಪತ್ರಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ.  ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸಬಹುದು. ಆದ್ರೆ,  ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ.

ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ನಿಗದಿ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆಯೋಗವು ವೆಚ್ಚದ ಮಿತಿಯನ್ನು ನಿಗದಿಗೊಳಿಸಿದ್ದು, ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂ.ವರೆಗೆ ಚುನಾವಣಾ ವೆಚ್ಚವನ್ನು ನಿಗದಿಗೊಳಿಸಿದೆ. ಅಭ್ಯರ್ಥಿಗಳು ವೆಚ್ಚ ಮಾಡುವ ಮೊತ್ತದ ಮೇಲೆ ನಿಗಾವಹಿಸಲು 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕಾಗಿ ರಾಜ್ಯದೆಲ್ಲೆಡೆ 3.51 ಲಕ್ಷ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ 17,276 ಮಂದಿಯನ್ನು ಸೂಕ್ಷ್ಮ ವೀಕ್ಷಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಕಡ್ಡಾಯವಾಗಿ ಚುನಾವಣೆ ಖರ್ಚು ವೆಚ್ಚದ ಲೆಕ್ಕವನ್ನು ಅಧಿಕಾರಿಗಳಿಗೆ ನೀಡುವುದು ಕಡ್ಡಾಯವಾಗಿದೆ.

ಮತದಾರರ ಅಂಕಿ-ಸಂಖ್ಯೆ

ಈಗಾಗಲೇ ಚುನಾವಣೆಗೆ ಅವಶ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 146 ವೆಚ್ಚ ನಿರ್ವಹಣಾ ವೀಕ್ಷಕರು, 120 ಸಾಮಾನ್ಯ ವೀಕ್ಷಕರು ಸೇರಿದಂತೆ 37 ಪೊಲೀಸ್‌ ವೀಕ್ಷಕರನ್ನು ನಿಯೋಜಿಸಲಾಗಿದೆ. ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ 5.24 ಕೋಟಿ ಮತದಾರರಿದ್ದು, 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆ ಮತದಾರರಿದ್ದಾರೆ. 18-19 ವರ್ಷದೊಳಗಿನ ಯುವ ಮತದಾರರು 9.58 ಲಕ್ಷ ನೋಂದಣಿಯಾಗಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟಮತದಾರರು 12.15 ಲಕ್ಷ ಮಂದಿ ಇದ್ದಾರೆ. 100 ವರ್ಷ ದಾಟಿರುವ 16,976 ಮತದಾರರಿದ್ದಾರೆ. 5.60 ಲಕ್ಷ ಅಂಗವಿಕಲ ಮತದಾರರಿದ್ದು, ಒಂದು ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತ ಮತದಾರರಿದ್ದಾರೆ. 41,312 ತೃತೀಯ ಲಿಂಗಿಗಳಿದ್ದು, ಈ ಪೈಕಿ ತಾವು ತೃತೀಯ ಲಿಂಗಿಗಳು ಎಂದು ಗುರುತಿಸಿಕೊಂಡವರು 4751 ಮಂದಿ ಇದ್ದಾರೆ.

  • ಇಂದಿನಿಂದ ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ
  • ಏ.21ರಂದು ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ
  • ನಾಮಪತ್ರ ವಾಪಸ್​ ಪಡೆಯಲು ಏ.24ರಂದು ಕೊನೆಯ ದಿನ
  • ಮೇ.10ರಂದು ಒಂದೇ ಹಂತದಲ್ಲಿ ಮತದಾನ
  • ಮೇ 13ರಂದು ಮತ ಎಣಿಕೆ

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ