ಮಾದರಿ ನೀತಿ ಸಂಹಿತೆ ಜಾರಿ: 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ

|

Updated on: Apr 10, 2023 | 7:12 AM

ವಿಧಾನಸಭೆ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿರಿಸಿದೆ. ಮಾರ್ಚ್​​ 29 ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ, ಇಲ್ಲಿಯವರೆಗು ಒಟ್ಟು 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿ: 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ
ಚುನಾವಣಾ ಆಯೋಗ
Follow us on

ಬೆಂಗಳೂರು: ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ (Election Commission) ಅಕ್ರಮ ನಡೆಯದಂತೆ ಹದ್ದಿನ ಕಣ್ಣಿರಿಸಿದೆ. ನಗದು ವಹಿವಾಟುಗಳ ಮೇಲೆ ಚುನಾವಣಾ ಆಯೋಗ ನಿಗಾ ಇರಿಸಿದ್ದು ಚೆಕ್​ಪೋಸ್ಟ್​​ಗಳನ್ನು ನಿರ್ಮಿಸಲಾಗಿದೆ. ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಸಾಗಿಸುತ್ತಿದ್ದ ಗಿಫ್ಟ್​​ಗಳನ್ನೂ ಕೂಡ ಆಯೋಗ ಜಪ್ತಿ ಮಾಡಿಕೊಂಡಿದೆ. ಇದರಂತೆ ಕಳೆದ 10 ದಿನಗಳಲ್ಲಿ ಚುನಾವಣಾ ಆಯೋಗ ಬರೊಬ್ಬರಿ 100 ಕೋಟಿಯಷ್ಟು ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ.

ದೈನೆಂದಿನ ಬುಲೆಟಿನ್​ ಪ್ರಕಾರ, ಮಾರ್ಚ್​​ 29 ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ ಇಲ್ಲಿಯವರೆಗು ಒಟ್ಟು 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇವಲ 10 ದಿನಗಳಲ್ಲಿ 36.8 ಕೋಟಿ ರೂ. ಹಣ, 15.46 ಕೋಟಿ ರೂ. ಬೆಲೆಯ ಉಚಿತ ವಸ್ತುಗಳು, 30 ಕೋಟಿ ರೂ. ಬೆಲೆಯ 5.2 ಲಕ್ಷ ಲೀಟರ್​ ಮದ್ಯ, 15 ಕೋಟಿ ರೂ. ಬೆಲೆಯ ಬಂಗಾರ ಮತ್ತು 2.5 ಕೋಟಿ ರೂ. ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: 18-19 ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಏರಿಕೆ: ಶೇ 36ರಷ್ಟು ಹೊಸ ನೊಂದಣಿ

ರವಿವಾರ (ಏ.09) ಯಾದಗಿರಿ ಜಿಲ್ಲೆಯಲ್ಲಿ 34 ಲಕ್ಷ ರೂ. ಹಣ, 21 ಲಕ್ಷ ರೂ. ಮೌಲ್ಯದ 56 ಟಿವಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕ್ಷೇತ್ರದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ವಶಪಡಿಸಿಕೊಂಡಿದೆ. ಹೀಗೆ ಅಬಕಾರಿ ಇಲಾಖೆಯ ಅಧಿಕಾರಿಗಳು 1.62 ಕೋಟಿ ರೂ ಮೌಲ್ಯದ 54,282 ಲೀಟರ್​​ನಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಆಯೋಗವು ಪಾರದರ್ಶಕತೆಗೆ ಒತ್ತು ನೀಡುತ್ತಿದ್ದು, ಸೂಕ್ತ ದಾಖಲೆಗಳಿಲ್ಲದ ನಗದು ಮತ್ತು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಂಚಲು ರವಾನಿಸಲಾಗುತ್ತಿದ್ದ ವಸ್ತುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

224 ಸದಸ್ಯರ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಸಂಬಂಧ ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ