ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karntaka Assembly Election 2023) ದಿನಾಂಕ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಲ್ಲಿದೆ. ಈ ಹಿನ್ನೆಲೆ ರಾಜ್ಯದೆಲ್ಲಡೆ ಚುನಾವಣಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಚುನಾವಣಾ ಅಕ್ರಮ ಕಂಡುಬಂದರೇ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಹಣ, ಹೆಂಡ ಮತ್ತು ಉಡುಗೊರೆಗಳನ್ನು ಮತದಾರರಿಗೆ ಹಂಚಲಾಗುತ್ತದೆ. ಇದಕ್ಕೆ ಬ್ರೇಕ್ ಹಾಕಲೆಂದು ಚುನಾವಣಾ ಆಯೋಗ (Election Commission) ಮುಂದಾಗಿದೆ. ಕಳೆದ 24 ಗಂಟೆಗಳಲ್ಲಿ ಚುನಾವಣಾ ಆಯೋಗ 17.36 ಕೋಟಿ ರೂ. ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾರ್ಚ್.29 ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಆಯೋಗ 126.14 ಕೋಟಿ ರೂ. ಹಣ ಮತ್ತು ವಸ್ತುಗಳನ್ನು ಜಪ್ತಿ ಮಾಡಿದೆ.
ಮುಖ್ಯ ಚುನಾವಣಾಧಿಕಾರಿ ನೀಡಿರುವ ಅಂಕಿಅಂಶಗಳ ಪ್ರಕಾರ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಜಪ್ತಿಯಾಗಿದ್ದು, ಫ್ಲೈಯಿಂಗ್ ಸ್ಕ್ವಾಡ್ ತಂಡ 2.4 ಕೋಟಿ ರೂ. ಮೌಲ್ಯದ 9.56 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಲ್ಲಿ 2.10 ಕೋಟಿ ರೂ., ಕೊಪ್ಪಳ ಕ್ಷೇತ್ರದಲ್ಲಿ 1.66 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದಲ್ಲಿ 1.42 ಕೋಟಿ ರೂ. ನಗದನ್ನು ಚುನಾವಣಾ ಅಧಿಕಾರಿಗಳು ಕಬ್ಜ ಮಾಡಿಕೊಂಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮ ಹೆಚ್ಚುತ್ತಿದ್ದು, ದಿನಕ್ಕೆ ಸರಾಸರಿ ವಶಪಡಿಸಿಕೊಳ್ಳುವಿಕೆಯು ಇಲ್ಲಿಯವರೆಗೆ ಸುಮಾರು 10 ಕೋಟಿ ರೂ. ಏರಿಕೆ ಕಂಡಿದೆ. ನಿನ್ನೆ (ಏ.11)ರ ಅಂಕಿಅಂಶಗಳ ಪ್ರಕಾರ ಒಟ್ಟು 9.77 ಕೋಟಿ ರೂ. ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2.47 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ, 2.10 ಕೋಟಿ ರೂ. ಮೌಲ್ಯದ ಮದ್ಯ ಮತ್ತು ಉಡುಗೊರೆ ಹಾಗೂ 1.63 ಕೋಟಿ ರೂ. ಹಣ ಪತ್ತೆಯಾಗಿದೆ.
ಇದನ್ನೂ ಓದಿ: ಮಾದರಿ ನೀತಿ ಸಂಹಿತೆ ಜಾರಿ: 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ
ಸಿವಿಜಿಲ್ ಆ್ಯಪ್ ಮೂಲಕ ಚುನಾವಣಾಧಿಕಾರಿಗಳು 2,190 ದೂರುಗಳನ್ನು ಸ್ವೀಕರಿಸಿದ್ದು, ಎನ್‌ಜಿಆರ್‌ಎಸ್ ಪೋರ್ಟಲ್ ಮೂಲಕ 3605 ದೂರುಗಳು ಬಂದಿವೆ.
ಮಾರ್ಚ್ 29ರಿಂದ ಈವರೆಗೆ ಬೆಂಗಳೂರಲ್ಲಿ 53.83 ಕೋಟಿ ರೂ. ಹಣ, ಮದ್ಯ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಬರೋಬ್ಬರಿ 1187 ಎಫ್ಐಆರ್ ದಾಖಲಾಗಿವೆ. 8.26 ಕೋಟಿ ರೂ. ನಗದು, 22.16 ಕೋಟಿ ರೂ. ಮೌಲ್ಯದ ಮದ್ಯ, 9.51 ಕೋಟಿ ರೂ. ಮೌಲ್ಯದ ಡ್ರಗ್ಸ್, 4.73 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಕೋಟಿ ರೂ. ಮೌಲ್ಯದ ಉಡುಗೊರೆ ಮತ್ತು 4.27 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:10 am, Wed, 12 April 23