ಟಿಕೆಟ್​ ಗೊಂದಲ: ಹೈಕಮಾಂಡ್​ ಬುಲಾವ್, ದೆಹಲಿಗೆ ಹೋಗುವ ಮುನ್ನ ಮಹತ್ವದ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್

ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಇನ್ನು ದೆಹಲಿಗೆ ಹೋಗುವ ಮುನ್ನ ಶೆಟ್ಟರ್​ ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಟಿಕೆಟ್​ ಗೊಂದಲ: ಹೈಕಮಾಂಡ್​ ಬುಲಾವ್, ದೆಹಲಿಗೆ ಹೋಗುವ ಮುನ್ನ ಮಹತ್ವದ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್
ಜಗದೀಶ್​ ಶೆಟ್ಟರ್​
Follow us
ರಮೇಶ್ ಬಿ. ಜವಳಗೇರಾ
|

Updated on:Apr 12, 2023 | 8:13 AM

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೊನೆಗೂ ಅಳೆದು ತೂಗಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ಹಾಲಿ ಶಾಸಕರಿಗೆ ಹೈಕಮಾಂಡ್ ಕೊಕ್​ ನೀಡಿದೆ. ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆಗೂ ಸಹ ಮೊದಲ ಪಟ್ಟಿಯಲ್ಲಿ ಟಿಕೆಟ್​ ನೀಡಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶೆಟ್ಟರ್​ ಅವರನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ದಿಢೀರ್ ಬುಲಾವ್ ನೀಡಿದೆ. ಅದರಂತೆ ಜಗದೀಶ್ ಶೆಟ್ಟರ್​ ಇಂದು(ಏಪ್ರಿಲ್​​ 12) ದೆಹಲಿಗೆ ತೆರಳುತ್ತಿದ್ದು, ಅದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಟಿಕೆಟ್​ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Jagadish Shettar: ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಕರೆ; ಏನಂದರು ಜಗದೀಶ್ ಶೆಟ್ಟರ್?

ದೆಹಲಿಗೆ ಹೋಗುವ ಮುನ್ನ ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ನಾಯಕರು ದೆಹಲಿಗೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಯಡಿಯೂರಪ್ಪ ಅವರನ್ನ ಭೇಟಿಯಾಗಬೇಕಿತ್ತು. ಆದ್ರೆ ಬೇಗ ಹೋಗಬೇಕಾಗಿರುವ ಕಾರಣ ಬೆಂಗಳೂರ ಏರ್​ಪೋರ್ಟ್ ನಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ಮಂತ್ರಿ ಸ್ಥಾನ ಸಿಗದಿದ್ದರೂ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕೆಲಸ ಮಾಡುವುದಕ್ಕೆ ಮಂತ್ರಿ ಸ್ಥಾನವೇ ಬೇಕು ಅಂತೇನಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಯಕರಿಂದ ಪಾಸಿಟಿವ್ ರೆಸ್ಪಾನ್ಸ್ ಬರಬಹುದು ಎಂದು ಟಿಕೆಟ್​ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಪಕ್ಷದಲ್ಲಿ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಷ್ಟೋ ಕೆಲಸಗಳನ್ನು ನಮ್ಮ ಸಚಿವರ ಮೂಲಕ ಮಾಡಿಸಿದ್ದೇನೆ. ರಾಜಕಾರಣದಲ್ಲಿ ಗೌರವಯುತವಾಗಿ ನಿವೃತ್ತಿಯಾಗಬೇಕು. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ಬಿಜೆಪಿ ಟಿಕೆಟ್ ಸಿಕ್ಕವರಲ್ಲಿ 75-76 ವರ್ಷದವರು ಇದ್ದಾರೆ. ಅವರನ್ನು ಸೀನಿಯರ್ಸ್ ಎನ್ನುವುದಿಲ್ವಾ ಎಂದು ಪ್ರಶ್ನಿಸಿದ ಜಗದೀಶ್​ ಶೆಟ್ಟರ್, ರಾಷ್ಟ್ರೀಯ ನಾಯಕರ ಭಾವನೆ‌ ಮೇಲೆ ನನ್ನ ನಿರ್ಧಾರ ಆಗುತ್ತೆ ಎಂದು ಸ್ಪಷ್ಟಪಡಿಸಿದರು.

ಹುಬ್ಬಳ್ಳಿ ಸೆಂಟ್ರಲ್​ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಿಕೊಂಡು ಬಂದಿದ್ದು, ಈ ಬಾರಿ ಹೊಸ ಮುಖಕ್ಕೆ ಟಿಕೆಟ್​ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಿದೆ. ಆದ್ರೆ, ಶೆಟ್ಟರ್, ಈ ಬಾರಿ​ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ ಸೆಂಟ್ರಲ್​ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಸದ್ಯಕ್ಕೆ ಕಾಯ್ದಿರಿಸಿದೆ.

ಜಗದೀಶ್ ಶೆಟ್ಟರ್​ ಅವರನ್ನು ಮನವೊಲಿಸಿ ಹೊಸ ಮುಖಕ್ಕೆ ನೀಡುವ ಪ್ಲಾನ್ ಹೈಕಮಾಂಡ್ ಮಾಡಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್​, ಜಗದೀಶ್​ ಶೆಟ್ಟರ್​ ಅವರನ್ನು ಮನವೊಲಿಸಲು ಕೂಡಲೇ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅದರಂತೆ ಶೆಟ್ಟರ್​ ದೆಹಲಿಯತ್ತ ಹೊರಟ್ಟಿದ್ದು, ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Wed, 12 April 23