ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆ (Karnataka Assembly Elections 2023) ಅಂತಿಮ ಹಂತ ತಲುಪಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಈಗಾಗಲೇ ಅಂತ್ಯಗೊಂಡಿದೆ. ಚುನಾವಣಾಪೂರ್ವ ಸಮೀಕ್ಷೆಗಳೂ ಈಗಾಗಲೇ ಪ್ರಕಟಗೊಂಡಿದ್ದು, ‘ಟಿವಿ9’ ಸಮೀಕ್ಷೆಯಲ್ಲಿ ಬಿಜೆಪಿಯು ರಾಜ್ಯದಲ್ಲಿ ಸರಳ ಬಹುಮತದ ಸನಿಹದ ಸ್ಥಾನಗಳನ್ನು ಪಡೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. 224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದೆ. ಮತದಾನದ ದಿನ ನಡೆಯುವ ಸಮೀಕ್ಷಾ ವರದಿ ಅಥವಾ ಎಕ್ಸಿಟ್ಪೋಲ್ (Exit Poll) ಇಂದೇ ಅಂದರೆ ಮೇ 10ರಂದು ಸಂಜೆ 6 ರಿಂದ 7 ಗಂಟೆಯ ಒಳಗಾಗಿ ಪ್ರಕಟಗೊಳ್ಳಲಿದೆ.
ರಾಜ್ಯದ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು, ಜೆಡಿಎಸ್ ಕೂಡ ಪೈಪೋಟಿ ನೀಡುತ್ತಿದೆ. ಈ ಬಾರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕೂಡ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದಂತೆ ಎಸ್ಡಿಪಿಐ, ಎಐಎಂಐಎಂ ಸೇರಿ ಇತರ ಸ್ಥಳೀಯ ಪಕ್ಷಗಳು, ಪಕ್ಷೇತರರು ಕಣದಲ್ಲಿದ್ದಾರೆ.
‘ಟಿವಿ9’ ಸುದ್ದಿವಾಹಿನಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಯು ಸರಳ ಬಹುಮತದ ಸನಿಹ ತಲುಪಲಿದೆ ಎಂಬುದು ಇತ್ತೀಚೆಗೆ ತಿಳಿದುಬಂದಿತ್ತು. ಕೇಸರಿ ಪಕ್ಷವು ಒಟ್ಟಾರೆಯಾಗಿ 105ರಿಂದ 110 ಸ್ಥಾನ ಪಡೆಯಬಹುದು. ಕಾಂಗ್ರೆಸ್ ಪಕ್ಷವು 90 ರಿಂದ 97 ಸ್ಥಾನ ಗಳಿಸಬಹುದು. ಜೆಡಿಎಸ್ 19 ರಿಂದ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಇತರರು 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿತ್ತು.
ಇದನ್ನೂ ಓದಿ: TV9 Pre-poll Survey: ರಾಜ್ಯದಲ್ಲಿ ಸರಳ ಬಹುಮತದ ಸನಿಹದತ್ತ ಬಿಜೆಪಿ, ಕಾಂಗ್ರೆಸ್ ಪೈಪೋಟಿ
ಇದಕ್ಕೂ ಮುನ್ನ ‘ಟಿವಿ9 ಕನ್ನಡ’ ಮತ್ತು ‘ಸಿವೋಟರ್’ ಸಹಭಾಗಿತ್ವದಲ್ಲಿ ನಡೆದಿದ್ದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೇಳಲಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ಶೇ 40 ರಷ್ಟು ಮತಹಂಚಿಕೆ ಪಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ಶೇ 33.9 ಮತ್ತು ಜೆಡಿಎಸ್ ಶೇ 18.8 ರಷ್ಟು ಮತ ಹಂಚಿಕೆ ಪಡೆಯಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಅಂತಿಮ ಹಂತದಲ್ಲಿ ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಬಿರುಸಿನ ಪ್ರಚಾರ ಪಕ್ಷಕ್ಕೆ ಪ್ಲಸ್ ಆಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರ ಕೇಸರಿ ಪಕ್ಷದ ಪ್ರಮುಖರದ್ದಾಗಿದೆ. ಇನ್ನು ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾವ ಮಾಡಿರುವುದು ಕಾಂಗ್ರೆಸ್ಗೆ ತುಸು ಹೊಡೆತ ನೀಡಬಹುದು ಎನ್ನಲಾಗುತ್ತಿದೆ.
ಮತದಾನದ ದಿನ ನಡೆಯುವ ಎಕ್ಸ್ಟ್ ಪೋಲ್ ಅಥವಾ ಒಪೀನಿಯನ್ ಪೋಲ್ ಏನು ಭವಿಷ್ಯ ನುಡಿಯುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Mon, 8 May 23