ಬೆಂಗಳೂರು: ಎಲೆಕ್ಷನ್ ಅಖಾಡದಲ್ಲಿ ಈಗ ಮೀಸಲಾತಿಯದ್ದೇ ಸುದ್ದಿ. ಮುಸ್ಲಿಮರಿಗೆ ನೀಡಲಾಗಿದ್ದ 4 ಪರ್ಸೆಂಟ್ ಜಾತಿ ಮೀಸಲಾತಿಯನ್ನ ರದ್ದು ಮಾಡಿ ಅದನ್ನು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ತಲಾ 2 ಪರ್ಸೆಂಟ್ ಹಂಚಿಕೆ ಮಾಡಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ವಿಚಾರ ಇದೀಗ ಚುನಾವಣೆಯ ವಿಷಯ ವಸ್ತು ಆಗಿದೆ. ಬಿಜೆಪಿ ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದರೂ ಕೂಡಾ, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಬಿಜೆಪಿ ತನ್ನ ನಿರ್ಧಾರವನ್ನ ಸಮರ್ಥಿಸಿಕೊಳ್ತಿದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಹಜವಾಗಿಯೆ ವಿರೋಧಿಸಿದೆ. ಈ ವಿಚಾರ ಚುನಾವಣೆ ಹೊತ್ತಲ್ಲಿ ಯಾವ ಪಕ್ಷಕ್ಕೆ ಲಾಭ ಆಗಬಹುದು? ಯಾರಿಗೆ ನಷ್ಟ ಆಗಬಹುದು? ಎನ್ನುವ ಲೆಕ್ಕಾಚಾರಗಳು ನಡೆದಿವೆ. ಒಂದು ವೇಳೆ ಮೀಸಲಾತಿ ಅಸ್ತ್ರ ಸಕ್ಸಸ್ ಆಗಿದ್ದರೆ, ಅಧಿಕಾರದ ಗದ್ದುಗೆ ಏರುವುದು ಖಚಿತ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಎಸ್‌ಸಿ ಮೀಸಲಾತಿ ಕೋಟಾವನ್ನು ಶೇಕಡಾ 15 ರಿಂದ 17 ಕ್ಕೆ ಮತ್ತು ಎಸ್‌ಟಿಗಳಿಗೆ ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸಿದೆ. ಇದು ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದ ಒಟ್ಟಾರೆ ಶೇಕಡಾ 50ರ ಮೀಸಲಾತಿ ಮಿತಿಯನ್ನು ದಾಟಿದೆ. ಲಿಂಗಾಯತರು ಕರ್ನಾಟಕದ ಜನರಲ್ಲಿ ಸರಿಸುಮಾರು 17 ಪ್ರತಿಶತದಷ್ಟಿದ್ದರೆ, ಒಕ್ಕಲಿಗರು ಸುಮಾರು ಶೇಕಡಾ 14ರಷ್ಟಿದ್ದಾರೆ. ಎರಡೂ ಸಮುದಾಯಗಳು ರಾಜ್ಯದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಯಶಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
ಮುಸ್ಲಿಮರ ಮತ ನಮಗೆ ಬೇಕಾಗಿಲ್ಲ ಎಂದು ಬಿಜೆಪಿ ನಾಯಕ ಸ್ಪಷ್ಟವಾಗಿ ಹೇಳಿದ್ದಾರೆ. ಮುಸ್ಲಿಮರಿಗೂ ಕೂಡಾ ಬಿಜೆಪಿಯನ್ನ ಕಂಡರೆ ಅಷ್ಟಕ್ಕಷ್ಟೇ ಅನ್ನೋದು ಓಪನ್ ಸೀಕ್ರೆಟ್.. ಹೀಗಾಗಿ, ಮುಸ್ಲಿಮರ ವೋಟು ಸಿಗದಿದ್ದರೂ ಪರವಾಗಿಲ್ಲ ಎನ್ನುವ ನಿಲುವಿಗೆ ಅಂಟಿಕೊಂಡಂತೆ ಬಿಜೆಪಿಯ ನೀತಿ ನಿರೂಪಣೆ ಕಂಡು ಬಂದಿದೆ. ಈ ಮಾತಿಗೆ ಪೂರಕ ಎನ್ನುವ ರೀತಿ ಇತ್ತೀಚೆಗೆ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಕೊಟ್ಟಿದ್ದ ಜಾತಿ ಮೀಸಲಾತಿಯನ್ನ ರದ್ದು ಮಾಡಿತ್ತು. ಮುಸ್ಲಿಮರಿಗೆ ಕೊಡಲಾಗಿದ್ದ 4 ಪರ್ಸೆಂಟ್ ಮೀಸಲಾತಿಯನ್ನ ರಾಜ್ಯದ ಬಹುಸಂಖ್ಯಾತ ಸಮುದಾಯಗಳಾದ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ತಲಾ 2 ಪರ್ಸೆಂಟ್ ಹಂಚಿಕೆ ಮಾಡಲಾಗಿತ್ತು. ಚುನಾವಣೆ ಘೋಷಣೆಗೆ ಮುನ್ನ ಬಿಜೆಪಿ ಸರ್ಕಾರ ಕೈಗೊಂಡ ಈ ನಿರ್ಧಾರವನ್ನ ಚುನಾವಣಾ ಅಖಾಡದಲ್ಲೂ ಬಿಜೆಪಿ ನಾಯಕರು ಸಮರ್ಥಿಸಿಕೊಳ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಮುಸ್ಲಿಂ ಮೀಸಲು ರದ್ದು ಉತ್ತಮ ಕಾರ್ಯ ಎಂದಿದ್ದಾರೆ. ಮುಸ್ಲಿಮರಿಗೆ ಕೊಟ್ಟಿದ್ದ ಮೀಸಲಾತಿಯನ್ನ ರದ್ದು ಮಾಡಿರೋದ್ರಿಂದ ಹಿಂದೂ ಕೋಮಿನ ಧೃವೀಕರಣ ಆಗಬಹುದು, ಬಿಜೆಪಿಗೆ ಲಾಭ ಆಗಬಹುದು ಅನ್ನೋದು ಕೇಸರಿ ನಾಯಕರ ತಂತ್ರಗಾರಿಕೆ.
ಒಟ್ಟಿನಲ್ಲಿ ಚುನಾವಣಾ ಹೊತ್ತಲ್ಲೇ ಬಿಜೆಪಿ ಮೀಸಲಾತಿ ಅಸ್ತ್ರ ಪ್ರಯೋಗಿಸಿದ್ದು, ಅದು ಯಾವ ರೀತಿ ವರ್ಕೌಟ್ ಆಗುತ್ತೆ ಎನ್ನುವುದು ಸಂಜೆ ಹೊತ್ತಿಗೆ ಎಲ್ಲಾ ಚಿತ್ರಣ ಸಿಗಲಿದೆ.