ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು-ಸೋಲು ಕಂಡವರು

|

Updated on: May 15, 2023 | 8:36 AM

ಯಾವ್ಯಾವ ಕ್ಷೇತ್ರಗಳ ಹಾವು-ಏಣಿಯಾಟದಲ್ಲಿ ಅಭ್ಯರ್ಥಿಗಳು ಕೂದಲೆಳೆ ಅಂತರಲ್ಲಿ ಗೆದ್ದಿದ್ದಾರೆ ಇಲ್ಲಿದೆ. ಜಯನಗರ, ಚಿಂಚೋಳಿ, ಗಾಂಧಿ ನಗರ, ಜಗಳೂರು, ಜಯನಗರ, ಮಾಲೂರು, ಮೂಡಿಗೆರೆ ಮತ್ತು ಶೃಂಗೇರಿ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಡಿಮೆ ಅಂತರದಿಂದ ಗೆದ್ದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು-ಸೋಲು ಕಂಡವರು
ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​
Follow us on

ಬೆಂಗಳೂರು: ಮೇ.10 ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ (Karnataka Assembly Election) ಚುನಾವಣೆ ನಡೆದಿದ್ದು, 13 ರಂದು ಫಲಿತಾಂಶ (Result) ಪ್ರಕಟಗೊಂಡಿತ್ತು. ಕಾಂಗ್ರೆಸ್​ (Congress) 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಬಿಜೆಪಿ (BJP) 66 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಹೀನಾಯವಾಗಿ ಸೋತಿದೆ. ಇನ್ನು ಜೆಡಿಎಸ್ (JDS)​ 19 ಕ್ಷೇತ್ರಗಳಲ್ಲಿ ಜಯಕಂಡು ತೃಪ್ತಿಪಟ್ಟಿದೆ. ಈ ಬಾರಿ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಫೈಟ್ ಇದ್ದು, ಬಹುತೇಕ ಕ್ಷೇತ್ರಗಳಲ್ಲಿ ನಾನಾ-ನೀನಾ ಎನ್ನುವ ಕುಸ್ತಿಗೆ ಈ ಚುನಾವಣೆ ಸಾಕ್ಷಿಯಾಗಿದೆ. ಮೇ.13ರಂದು ಮತ ಎಣಿಕೆ ನಡೆದು ಹೊರಬಿದ್ದ ಫಲಿತಾಂಶ ಗೆದ್ದ ಹಾಗೂ ಸೋತ ಅಭ್ಯರ್ಥಿಗಳಿಗೂ ಶಾಕ್ ಕೊಟ್ಟಿದೆ. ಯಾಕಂದ್ರೆ ಗೆದ್ದವರು ಕೊನೇ ಸುತ್ತಿನ ಕೌಂಟಿಂಗ್​ನಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆದ್ದರೇ, ಇನ್ನೇನು ಗೆದ್ದೇ ಬಿಟ್ಟೆವು ಅಂತ ತುದಿಗಾಲಿನಲ್ಲಿ ನಿಂತಿದ್ದವರು  ಸೋತಿದ್ದಾರೆ.

ಯಾವ್ಯಾವ ಕ್ಷೇತ್ರಗಳ ಹಾವು-ಏಣಿಯಾಟದಲ್ಲಿ ಅಭ್ಯರ್ಥಿಗಳು ಕೂದಲೆಳೆ ಅಂತರಲ್ಲಿ ಗೆದ್ದಿದ್ದಾರೆ, ಇಲ್ಲಿದೆ ಮಾಹಿತಿ

ಮತ ಎಣಿಕೆ ವೇಳೆ ರಾಜ್ಯದ ಗಮನ ಸೆಳೆದಿರೋ ಕ್ಷೇತ್ರವೇ ಜಯನಗರ. ಕಳೆದ ಬಾರಿ ಶಾಸಕಿ ಆಗಿ ಆಯ್ಕೆಯಾಗಿದ್ದ ಸೌಮ್ಯಾ ರೆಡ್ಡಿ ನಿನ್ನೆಯ ಫಲಿತಾಂಶದಲ್ಲಿ ಅಚ್ಚರಿಯ ಸೋಲು ಕಂಡಿದ್ದಾರೆ. ಮೊದಲ ಫಲಿತಾಂಶ ಹೊರಬೀಳುತ್ತಿದ್ದಂತೆ ಸೌಮ್ಯ ರೆಡ್ಡಿ ಅವರು ಗೆದ್ದಿದ್ದಾರೆ ಅಂತಾ ಘೋಷಿಸಲಾಗಿತ್ತು. ಬಳಿಕ ಮರು ಎಣಿಕೆ ಮಾಡುವಂತೆ ಪ್ರತಿಸ್ಪರ್ಧಿ ಬಿಜೆಪಿಯ ಸಿಕೆ ರಾಮಮೂರ್ತಿ ಅವರು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದರು. ಮನವಿ ಬಳಿಕ ನಾಲ್ಕು ಬಾರಿ ಮರು ಮತ ಎಣಿಕೆ ನಡೆದಿದ್ದು, ಸಿಕೆ ರಾಮಮೂರ್ತಿ ಕೇವಲ 16 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಅವರ ವಿರುದ್ಧ ಗೆದ್ದಿದ್ದಾರೆ ಅಂತ ಫಲಿತಾಂಶ ಪ್ರಕಟವಾಯಿತು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿಯೂ ನಡೆದಿದೆ. ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ಸೌಮ್ಯಾ ರೆಡ್ಡಿ ಅವರು ಕಣ್ಣೀರು ಹಾಕುತ್ತಾ ಮನೆಯತ್ತ ತೆರಳಿದರು.

ಬಿಜೆಪಿ – ಸಿ.ಕೆ.ರಾಮಮೂರ್ತಿ (57,797)

ಕಾಂಗ್ರೆಸ್ – ಸೌಮ್ಯಾ ರೆಡ್ಡಿ (57,781)

ಅಂತರ – 16 ಮತಗಳು

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮರು ಮತ ಎಣಿಕೆ ಡ್ರಾಮಾ ನಡೆದಿದೆ. ಕ್ಷೇತ್ರದ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ವಿರುದ್ಧ ಕೇವಲ 105 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆದರೆ ತಕ್ಷಣ ಚುನಾವಣಾ ಆಯೋಗದ ಮೊರೆ ಹೋದ ಸಪ್ತಗಿರಿಗೌಡ ಅವರು ಮರು ಮತ ಎಣಿಕೆಗೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಸಪ್ತಗಿರಿಗೌಡ ಅವರು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ಚುನಾವಣಾ ಆಯೋಗ, ಕೊನೆಯದಾಗಿ ದಿನೇಶ್ ಗುಂಡೂರಾವ್ ವಿಜೇತ ಅಂತ ಘೋಷಿಸಿತ್ತು. ಹೀಗೆ ಕೇವಲ 105 ಮತಗಳ ಅಂತರದಲ್ಲಿ ದಿನೇಶ್ ಗುಂಡೂರಾವ್ ಗೆದ್ದಿದ್ದಾರೆ.

ಕಾಂಗ್ರೆಸ್ – ದಿನೇಶ್ ಗುಂಡೂರಾವ್ (54,118)

ಬಿಜೆಪಿ – ಸಪ್ತಗಿರಿ ಗೌಡ (54,013)

ಅಂತರ – 105 ಮತಗಳು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲೂ ಕಾಂಗ್ರೆಸ್​​ನ ಟಿಡಿ ರಾಜೇಗೌಡ ಹಾಗೂ ಬಿಜೆಪಿಯ ಜಿಎನ್ ಜೀವರಾಜ್ ನಡುವೆಯೂ ಭಾರೀ ಹಣಾಹಣಿ ನಡೆದಿತ್ತು. ಪ್ರತಿಯೊಂದು ಸುತ್ತಿನಲ್ಲೂ ಇಬ್ಬರ ನಡುವೆ ಹಾವು ಏಣಿಯಾಟ ನಡೆಯುತ್ತಲೇ ಇತ್ತು. ಕೊನೆಗೆ ಕೇವಲ 201 ಮತಗಳ ಅಂತರದಲ್ಲಿ ಡಿಎನ್ ಜೀವರಾಜ್​ ಅವರನ್ನು ಮಣಿಸಿ ರಾಜೇಗೌಡರು ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ – ಟಿ.ಡಿ.ರಾಜೇಗೌಡ (59,171)

ಬಿಜೆಪಿ – ಡಿ.ಎನ್. ಜೀವರಾಜ್ (58,970)

ಅಂತರ – 201 ಮತಗಳು

ಉತ್ತರಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರಲ್ಲೂ ನೆಕ್ ಟು ನೆಕ್ ಫೈಟ್ ನಡೆದಿತ್ತು. ಬಿಜೆಪಿ ಅಭ್ಯರ್ಥಿ ದಿನಕರ್ ಕೇಶವ್ ಶೆಟ್ಟಿ ಹಾಗೂ ಜೆಡಿಎಸ್​​ನ ಸೂರಜ್ ನಾಯಕ್ ನಡುವಿನ ಹಣಾಹಣಿಯಲ್ಲಿ 676 ಮತಗಳ ಅಂತರದಲ್ಲಿ ಬಿಜೆಪಿಯ ದಿನಕರ್ ಕೇಶವ್ ಶೆಟ್ಟಿ ಗೆದ್ದು ಬೀಗಿದ್ದಾರೆ.

ಬಿಜೆಪಿ – ದಿನಕರ್ ಕೇಶವ್ ಶೆಟ್ಟಿ (59,965)

ಜೆಡಿಎಸ್ – ಸೂರಜ್ ನಾಯಕ್ (59,289)

ಅಂತರ – 676 ಮತಗಳು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದಲ್ಲೂ ತೀವ್ರ ಹಣಾಹಣಿ ನಡೆದಿತ್ತು. ಕಾಂಗ್ರೆಸ್​ನ ನಯನಾ ಮೋಟಮ್ಮ ಅವರು ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರನ್ನು ಸೋಲಿಸಿದ್ದಾರೆ. ಕೇವಲ 722 ಮತಗಳ ಅಂತರದಲ್ಲಿ ಗೆದ್ದಿದ್ದು, ಚೊಚ್ಚಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಕಾಂಗ್ರೆಸ್ – ನಯನ ಮೋಟಮ್ಮ (50,843)

ಬಿಜೆಪಿ – ದೀಪಕ್ ದೊಡ್ಡಯ್ಯ (50,121)

ಅಂತರ-722

ಹೈವೋಲ್ಟೇಜ್ ಕಣವಾದ ಚಿಂಚೋಳಿ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಫೈಟ್ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಅವರ ವಿರುದ್ಧ ಬಿಜೆಪಿಯ ಅವಿನಾಶ್ ಜಾಧವ್ ಅವರು 858 ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ – ಅವಿನಾಶ್ ಜಾಧವ್ (69,963)

ಕಾಂಗ್ರೆಸ್ – ಸುಭಾಷ್ ರಾಥೋಡ್ (69,105)

ಅಂತರ – 858

ಜಗಳೂರು ಕ್ಷೇತ್ರದಲ್ಲೂ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೇವಲ 874 ಮತಗಳ ಅಂತರದಲ್ಲಿ ಬಿಜೆಪಿಯ ಎಸ್.ವಿ. ರಾಮಚಂದ್ರ ಅವರ ವಿರುದ್ಧ ಕಾಂಗ್ರೆಸ್​​ನ ಬಿ.ದೇವೇಂದ್ರಪ್ಪ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ – ಬಿ.ದೇವೇಂದ್ರಪ್ಪ (50,765)

ಬಿಜೆಪಿ – ಎಸ್.ವಿ. ರಾಮಚಂದ್ರ (49,891)

ಅಂತರ – 874 ಮತಗಳು

ಹೀಗೆ ಹಲವು ಕ್ಷೇತ್ರಗಳಲ್ಲಿ ನಡೆದ ಭಾರೀ ಪೈಪೋಟಿ ಕೊನೆಗೂ ಒಬ್ಬರನ್ನು ವಿಜಯಶಾಲಿನ್ನಾಗಿ ಮಾಡಿದೆ. ಕಳೆದ ಬಾರಿ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೇ ಅತಿ ಕಡಿಮೆ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಜೆಡಿಎಸ್‌ನ ಬಿ. ನಾಗರಾಜು ಅವರನ್ನು 1,43,023 ಮತಗಳಿಂದ ಸೋಲಿಸುವ ಮೂಲಕ ಅತಿ ದೊಡ್ಡ ಗೆಲುವು ಸಾಧಿಸಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ