ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ಶನಿವಾರ ಫಲಿತಾಂಶವೂ ಪ್ರಕಟಗೊಳ್ಳಲಿದೆ. ಈ ಮಧ್ಯೆ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಹೆಚ್ಚಿನ ವರದಿಗಳು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ದೊರೆತಿದ್ದರೆ ಇನ್ನು ಕೆಲವು ಕಾಂಗ್ರೆಸ್ ಸರಳ ಬಹುಮತದ ಸನಿಹ ತಲುಪಲಿದೆ ಎಂದು ಭವಿಷ್ಯ ನುಡಿದಿವೆ. ಇನ್ನು ಕೆಲವು ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿವೆ. ಕೆಲವೇ ಕೆಲವು ಸಮೀಕ್ಷೆಗಳು ಬಿಜೆಪಿ ಸರಳ ಬಹುಮತದ ಸನಿಹ ತಲುಪಲಿವೆ ಎಂದು ಹೇಳಿವೆ. 2018ರ ವಿಧಾನಸಭೆ ಚುನಾವಣೆಯ ನಂತರ ಎಕ್ಸಿಟ್ ಪೋಲ್ಗಳು ಏನು ಹೇಳಿದ್ದವು? ಫಲಿತಾಂಶ ಏನಾಯಿತು ಎಂಬ ಮಾಹಿತಿ ಇಲ್ಲಿದೆ.
2018ರ ಪಬ್ಲಿಕ್ ಟಿವಿ ಮತಗಟ್ಟೆ ಸಮೀಕ್ಷೆ ವರದಿ ಬಿಜೆಪಿಗೆ 85ರಿಂದ 90 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್ಗೆ 90 -95 ಹಾಗೂ ಜೆಡಿಎಸ್ಗೆ 40 – 45, ಇತರರಿಗೆ 0 – 6 ಸ್ಥಾನ ದೊರೆಯಬಹುದು ಎಂದು ಹೇಳಿತ್ತು. ಇಂಡಿಯಾ ಟುಡೇ ಸಮೀಕ್ಷೆಯು ಬಿಜೆಪಿಗೆ 78 ರಿಂದ 86 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್ಗೆ 90 – 101 ಹಾಗೂ ಜೆಡಿಎಸ್ಗೆ 34 – 43, ಇತರರಿಗೆ 2 – 12 ಸ್ಥಾನ ದೊರೆಯಬಹುದು ಎಂದು ಹೇಳಿತ್ತು.
ಬಿಜೆಪಿಗೆ 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್ಗೆ 91 ಹಾಗೂ ಜೆಡಿಎಸ್ಗೆ 40, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು.
ಇದನ್ನೂ ಓದಿ: TV9 CVoter Exit Poll: ಟಿವಿ9 ಸಿವೋಟರ್ ಎಕ್ಸಿಟ್ ಪೋಲ್ ಪ್ರಕಟ; ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ? ಇಲ್ಲಿದೆ ವಿವರ
ಬಿಜೆಪಿಗೆ 79 – 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್ಗೆ 92 – 102 ಹಾಗೂ ಜೆಡಿಎಸ್ಗೆ 34 – 42, ಇತರರಿಗೆ 1 – 7 ಸ್ಥಾನ ದೊರೆಯಬಹುದು ಎಂದು ಎಬಿಪಿ ನ್ಯೂಸ್ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು. ಬಿಜೆಪಿಗೆ 85 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್ಗೆ 96 ಹಾಗೂ ಜೆಡಿಎಸ್ಗೆ 38, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಇಂಡಿಯಾ ಟಿವಿ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿತ್ತು.
ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಕ್ಸಿಟ್ ಪೋಲ್ಗಳ ಲೆಕ್ಕಾಚಾರ ಎಲ್ಲ ತಲೆಕೆಳಗಾಗಿತ್ತು. ಬಿಜೆಪಿಗೆ 104 ಸ್ಥಾನ ದೊರೆತರೆ ಕಾಂಗ್ರೆಸ್ಗೆ 80, ಜೆಡಿಎಸ್ 37 ಹಾಗೂ ಇತರರಿಗೆ 3 ಸ್ಥಾನ ದೊರೆತಿದ್ದವು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ