ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ (Nomination) ಸಲ್ಲಿಕೆಗೆ ಇಂದು ಕೊನೆಯ ದಿನ. ಬುಧವಾರ ತಡರಾತ್ರಿ 2 ಗಂಟೆ ಸಮಯಕ್ಕೆ ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು (Candidate List) ಪ್ರಕಟಿಸಿದೆ. ಹೀಗಾಗಿ ಇಂದು ಅವರೆಲ್ಲರೂ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಇಂದು ಅಮವಾಸ್ಯೆ ಹಿನ್ನೆಲೆ ಆಚಾರ-ವಿಚಾರ ನೋಡುವ ಬಹುತೇಕ ಮಂದಿ ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಂಚಿತ ಅಕಾಂಕ್ಷಿಗಳು ಬಂಡಾಯ ಎದ್ದಿದ್ದು ಅನೇಕ ಬದಲಾವಣೆಗಳಾಗುತ್ತಿವೆ. ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಇಂದು ಹಾಸನದಲ್ಲಿ ಹೆಚ್ಡಿ ದೇವೇಗೌಡ ಕುಟುಂಬ ಶಕ್ತಿ ಪ್ರದರ್ಶನ ಮಾಡಲಿದೆ. ಬನ್ನಿ ರಾಜಕೀಯ ವಲಯದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ನಲ್ಲಿ ಪಡೆಯಿರಿ.
ಐಟಿ ದಾಳಿ ವೇಳೆ ನಿವಾಸದಲ್ಲಿ ಸಾವಿರಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾದ ಹಿನ್ನೆಲೆ ಕೆಜಿಎಫ್ ಬಾಬು ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೆಜಿಎಫ್ ಬಾಬು ಮನೆ ಮೇಲಿನ ದಾಳಿ ವೇಳೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1925 ವೋಟರ್ ಐಡಿಗಳು ಪತ್ತೆಯಾಗಿದ್ದವು. 1925 ಚೆಕ್ಗಳ ಜೊತೆಯಲ್ಲಿ ವೋಟರ್ ಐಡಿಗಳನ್ನ ಶೇಖರಿಸಿಟ್ಟಿದ್ದರು. ವೋಟರ್ ಐಡಿಗಳು ಅಟ್ಯಾಚ್ ಆಗಿರುವ ಹೆಚ್ಡಿಎಫ್ಸಿ ಬ್ಯಾಂಕ್ ಅಕೌಂಟ್ನ 50200060873761 ನಂಬರಿನ ಚೆಕ್ಗಳು ಪತ್ತೆಯಾಗಿವೆ. ಪ್ರತೀ ಚೆಕ್ನಲ್ಲಿ 5000 ರೂ. ನಮೂದು ಮಾಡಲಾಗಿದೆ.
ಚಿಕ್ಕೋಡಿ: ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ, ಎಲ್ಲರಿಗೂ ಧನ್ಯವಾದ ತಿಳಿಸಿ ಮಾತು ಪ್ರಾರಂಭಿಸಿದರು. ಎರಡು ಬಾರಿ ನೀವು ನನ್ನನ್ನ ಆರಿಸಿ ಕೊಟ್ಟಿದ್ದಿರಿ, ಮೂರನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದೆನೆ. ನೀವು ಈ ಬಾರಿ ಚುನಾವಣೆಯಲ್ಲಿ ನನಗೆ ಲೀಡ್ ಕೊಡುವುದರ ಮೂಲಕ ನನಗೆ ಸಾಥ್ ನೀಡುತ್ತೀರಿ ಎಂಬ ವಿಶ್ವಾಸ ಇದೆ. ನೀವು ನಿಮ್ಮ ಮನೆ ಮಗಳಂತೆ ನೋಡಿ ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದಿರಿ, ನಿಮ್ಮ ಅಳಿಯ(ಅಣ್ಣಾಸಾಹೇಬ್ ಜೊಲ್ಲೆ) ಯನ್ನ ಆರಿಸಿ ದೆಹಲಿಗೆ ಕಳಿಸಿ ಸಂಸದರನ್ನಾಗಿಸಿದ್ದಿರಿ. ನಿಪ್ಪಾಣಿ ಕ್ಷೇತ್ರದಲ್ಲಿ 3000 ಕೋಟಿ ಕೆಲಸ ಆಗಿದೆ, ಇದಕ್ಕಿಂತಲೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತೆನೆ ಎಂದರು. ಕ್ಷೇತ್ರದ 8000 ವಿಧವಾ ಮಹಿಳೆಯರಿಗೆ ಪಿಂಚಣಿ ವ್ಯವಸ್ಥೆ ಮಾಡಿದ್ದೆನೆ. ನಾನು ನನ್ನ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೆಲಸ ಮಾಡಿದ್ದೆವೆ. ನನ್ನ ಕ್ಷೇತ್ರದ ಯುವಕರಿಗೆ ಮಹಿಳೆಯರಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತೆನೆ, ಉದ್ಯೋಗ ಕ್ಷೇತ್ರದಲ್ಲಿ ಅಣ್ಣಸಾಹೇಬ್ ಜೊಲ್ಲೆ ಹಾಗೂ ನಾನು ಹಿಂದೆ ಸರಿದಿಲ್ಲ, ನಮ್ಮ ಸಂಸ್ಥೆಗಳಲ್ಲಿ 2500 ಕ್ಕೂ ಹೆಚ್ಚು ಯುವರಿಗೆ ನೌಕರಿ ನೀಡಿದ್ದೆವೆ ಎಂದರು.
ಹುಬ್ಬಳ್ಳಿ: ಇತ್ತೀಚೆಗೆ ಬಿಜೆಪಿಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ನೀಡಿದರು. ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಶೆಟ್ಟರ್ ಅವರು ಸುರ್ಜೇವಾಲರನ್ನು ಸನ್ಮಾನಿಸಿದರು.
ಬೆಳಗಾವಿ: ಬಿ.ಎಲ್.ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಆರೋಪ ವಿಚಾರವಾಗಿ ಮಾತನಾಡಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷ ತೊರೆದಾಗ ಸ್ವಾಭಾವಿಕವಾಗಿ ಹೀಗೆ ಆರೋಪ ಮಾಡುತ್ತಾರೆ. ಪಕ್ಷ ಬಿಟ್ಟು ಹೋದ ಮೇಲೆ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೆ ಪಕ್ಷದಲ್ಲಿ ಇದ್ದಾಗಲೇ ಹೇಳಬೇಕಿತ್ತು ಎಂದರು. ಬಿಎಲ್ ಸಂತೋಷ್ ಮನೆ, ಮಠ ಬಿಟ್ಟು ಪಕ್ಷ ಹಾಗೂ ರಾಷ್ಟ್ರಸೇವೆ ಮಾಡುತ್ತಿದ್ದಾರೆ. ಅವರ ಬಗ್ಗೆ ಈ ರೀತಿ ಮಾತಾಡುತ್ತಿರುವುದು ಪಾಪದ ಕೆಲಸ ಎಂದರು. ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಲವು ವರ್ಷಗಳ ಕಾಲ ಪಕ್ಷದಲ್ಲಿ ಇದ್ದವರು. ಹೀಗಾಗಿ ಶೆಟ್ಟರ್ ಬಗ್ಗೆ ನಾನು ಏನೂ ಮಾತಾಡಲ್ಲ. ಕಾಂಗ್ರೆಸ್ ಕೇವಲ 9 ತಿಂಗಳು ಲಿಂಗಾಯತರನ್ನು ಸಿಎಂ ಮಾಡಿತ್ತು. ವೀರೇಂದ್ರ ಪಾಟೀಲ್‌ರಿಗೆ ಯಾವ ರೀತಿ ಅಪಮಾನ ಮಾಡಿತ್ತು. ಜಾತಿ, ಧರ್ಮ ಒಡೆದು ಜಗಳ ಹಚ್ಚಿ ರಾಜಕಾರಣ ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗಿದೆ ಎಂದರು.
ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ಈ ನಡುವೆ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಕೂಡ ಹೈಕೋರ್ಟ್ ವಜಾ ಗೊಳಿಸಿದೆ. ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಇದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಅವರು, ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ, ಇನ್ನು ನನ್ನನ್ನು ಬಿಡುತ್ತಾರಾ? ಯಾರು ಏನೇ ಮಾಡಿದರೂ ಡಿಕೆ ಶಿವಕುಮಾರ್ ಸರೆಂಡರ್ ಆಗಲ್ಲ ಎಂದು ಹೇಳಿದರು.
ಮಂಡ್ಯ: ಕಾಂಗ್ರೆಸ್ ಸಮಾವೇಶದಲ್ಲಿ ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಗದರಿದರು. ನಂತರ ಮಾತನಾಡುತ್ತಾ ದಿವಂಗತ ಅಂಬರೀಷ್ ಹೆಸರು ಪ್ರಸ್ಥಾಪಿಸಿದರು. ಮಂಡ್ಯದಲ್ಲಿ 10 ರಿಂದ 16 ಮಂದಿ ಟಿಕೆಟ್ಗಾಗಿ ಅರ್ಜಿ ಹಾಕಿದ್ದರು. 10 ಜನ ಅಭ್ಯರ್ಥಿಗಿಂತ ತುಂಬಾ ಸೀನಿಯರ್ ಆಗಿದ್ರು ಅರ್ಹತೆ ಕೂಡ ಇತ್ತು. ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡ ಬೇಕು ಎಲ್ಲರನ್ನ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಸರ್ವರಿಗೂ ಸಮಬಾಳು ಸಮಪಾಲು ರೀತಿ ಇರಬೇಕು. ಯಾರ ಸ್ವಾಭಿಮಾನ ಧಕ್ಕೆ ಬರಬಾರದು ಎಂದರು.
ಹುಬ್ಬಳ್ಳಿ: ಸರ್ವೆ ಪ್ರಕಾರ ಕಾಂಗ್ರೆಸ್ ಪಕ್ಷ 130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೇರೆ ಜಿಲ್ಲೆಯಿಂದಲೂ ಚುಣಾವಣಾ ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ದೊಡ್ಡದಾಗಿದೆ. ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ನನ್ನ ವಿಚಾರ ಬಗ್ಗೆ ಮಾತನಾಡಲು ಈಶ್ವರಪ್ಪಗೆ ಒತ್ತಡ ಇರಬಹುದು. ಮೊನ್ನೆ ನಮಗೆ ಪತ್ರ ಬರೆದಿದ್ದರು, ಇದು ಪಕ್ಷದ ಒತ್ತಡ ಎಂದರು.
ಬೆಳಗಾವಿ: ದೇಶಕ್ಕೆ ಅಪಮಾನ ಮಾಡಿದವರು, ಪ್ರತ್ಯೇಕವಾದಿಗಳು ಕಾಂಗ್ರೆಸ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ ಎಂದು ಹೇಳಿದ ಅರುಣ್ ಸಿಂಗ್, ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಸೋಲಾಗುವುದು ನಿಶ್ಚಿತ. ನಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ನಮ್ಮ ಪ್ರಚಾರ ಶುರುವಾದ ಮೇಲೆ ಕಾಂಗ್ರೆಸ್ನವರು ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಎಲ್ಲಿ ಪ್ರಚಾರಕ್ಕೆ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಮತಗಳು ಕಡಿಮೆಯಾಗುತ್ತವೆ. ಪ್ರಧಾನಿ ಮೋದಿ ಪ್ರಚಾರ ಮಾಡಿದರೆ ಬಿಜೆಪಿ ಮತಗಳು ಹೆಚ್ಚಾಗುತ್ತವೆ ಎಂದರು.
ಬಿಜೆಪಿ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಅರುಣ್ ಸಿಂಗ್ ಅಸ್ಪಷ್ಟ ಉತ್ತರ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಯಾಚನೆ ನಡೆಸುತ್ತೇವೆ. ಕಾಮನ್‌ಮ್ಯಾನ್ ಬೊಮ್ಮಾಯಿ ನೇತೃತ್ವದಲ್ಲಿ ಎಲೆಕ್ಷನ್ ಎದುರಿಸುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ನಮ್ಮ ಪ್ರಚಾರ ಸಮಿತಿಯ ಅಧ್ಯಕ್ಷ ಎಂದರು. ಇದೇ ವೇಳೆ ಬಸವರಾಜ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದರು.
ಬೆಳಗಾವಿ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತುಕಡೇ ತುಕಡೇ ಗ್ಯಾಂಗ್‌ನವರಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಂತಹ 10 ಜನರು ಇದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶ ದ್ರೋಹ ಕೇಸ್, ಮಹಿಳೆಯರಿಗೆ ಅಪಮಾನ ಮಾಡಿದವರು, ಗಲಭೆಕೋರರ ಜೊತೆ ಕೈ ಜೋಡಿಸಿದವರು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಕಲ್ಯಾಣ ಕರ್ನಾಟಕ ಭಾಗದ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿತ್ತು. ಕಾನೂನು ಕೇವಲ ಪೇಪರ್ ಮೇಲಿದ್ದರೆ ಯಾರಿಗೂ ಲಾಭವಿಲ್ಲಾ. ಕಾನೂನು ಜಾರಿಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುತ್ತಾರೆ. ಆದರೆ ಹಿಂದುಳಿದವರು ಹಿಂದೆ ಇದ್ದಾರೆ, ಅವರು ಮಾತ್ರ ಮುಂದೆ ಹೋಗಿದ್ದಾರೆ. ದೀನದಲಿತರಿಗೆ ಕೂಡಾ ಕಾಂಗ್ರೆಸ್, ಸಿದ್ದರಾಮಯ್ಯ ಏನು ಮಾಡಲಿಲ್ಲ. ನಮಗೆ ಜೇನು ಕಚ್ಚಿದರೂ ಪರವಾಗಿಲ್ಲ, ಹಿಂದುಳಿದ ವರ್ಗದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ತಾವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಮೀಸಲಾತಿ ರದ್ದು ಮಾಡುವುದಾಗಿ ಹೇಳುತ್ತಿದೆ. ಕಾಂಗ್ರೆಸ್ನವರಿಗೆ ನೇರವಾಗಿ ಸವಾಲು ಹಾಕುತ್ತೇನೆ ನೇರವಾಗಿ ಬಂದು ಮೀಸಲಾತಿ ವಿರೋಧ ಮಾಡಲಿ, ಖರ್ಗೆ ಅವರು ಯಾಕೆ ಸುಮ್ಮನಿದ್ದಾರೆ?, ಅವರಿಗೆ ಒಪ್ಪಿಗೆ ಇರುವುದರಿಂದಲೇ ಸುಮ್ಮನಿದ್ದಾರೆ ಎಂದರು.
ರಾಮನಗರ: ಸಂಸದ ಡಿಕೆ ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿದ್ದರು. ಇದೀಗ ಇಂದು(ಏಪ್ರಿಲ್ 20) ಡಿಕೆ ಸುರೇಶ್ ಸಹ ನಾಮಪತ್ರ ಸಲ್ಲಿಸಿದ್ದಾರೆ. ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಸಹ ಅವರು ಮೊನ್ನೇ ಏಪ್ರಿಲ್ 17ರಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ಇಂದು ಅವರ ಸಹೋದರ ಡಿಕೆ ಸುರೇಶ್ ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಅಚ್ಚರಿಗೆ ಕಾರಣವಾಗಿದೆ.
ಮೈಸೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ವರುಣಾ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾಂಗ್ರೆಸ್ನ ಮಾಸ್ ಲೀಡರ್ ಸಿದ್ದರಾಮಯ್ಯ ಅವರು ಅಖಾಡದಲ್ಲಿದ್ದು, ಇವರನ್ನು ರಾಜಕೀಯವಾಗಿ ಹಣಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಹೌದು, ಬಿಜೆಪಿ ಸಂಘಟನಾ ಚತುರ ಎನಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಇದರಿಂದಾಗಿ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಬರುವುದಿಲ್ಲ ಅನ್ನೋ ಊಹಾಪೋಹಗಳಿಗೆ ತೆರೆಬಿದ್ದಂತಾಗಲಿದೆ.
ಮೇ 10ರಂದು ನಡೆಯುವ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಚುನಾವಣಾ ಆಯೋಗ ನೀಡಿದ್ದ ಸಮಯ ಅಂತ್ಯಗೊಂಡಿದೆ. ಸದ್ಯ ಚುನಾವಣಾಧಿಕಾರಿ ಕಚೇರಿ ಒಳಗಿರುವವರಿಗೆ ಮಾತ್ರ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಇದೀಗ ಸಮಯವೂ ಅಂತ್ಯಗೊಂಡಿದೆ. ನಾಳೆ ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ನಡೆಸಲಿದ್ದಾರೆ. ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 10ರಂದು 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರದಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ನಾಮಪತ್ರ ಸಲ್ಲಿಕೆ ಮಾಡಿದರು. ಇವರಿಗೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಂಸದೆ ಸುಮಲತಾ ಅವರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸಂಸದರು, ಅಶೋಕ್ ಜಯರಾಮ್ ಅವರ ಜೊತೆ ತೆರಳಿ ಅವರ ನಾಮಪತ್ರವನ್ನ ಸಲ್ಲಿಸಿದ್ದೇವೆ. ಈ ಬಾರಿ ಮಂಡ್ಯದಲ್ಲಿ ಜನರು ಬದಲಾವಣೆಯನ್ನ ಬಯಸಿದ್ದಾರೆ. ಮಂಡ್ಯದಲ್ಲಿ ಈಗ ಬಿಜೆಪಿಯ ಪರ ಒಲವು ಹೆಚ್ಚಿದೆ. ಮಂಡ್ಯದಲ್ಲಿ ಇಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಖಂಡಿತವಾಗಿ ಈ ಬಾರಿ ಬಿಜೆಪಿಗೆ ಮಂಡ್ಯದಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ ಎಂದರು.
ಹಾಸನ: ತೆರೆದ ವಾಹನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೆಚ್.ಪಿ.ಸ್ವರೂಪ್ ಪರ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪ್ರೀತಂಗೌಡ ಮಾರಕವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೀತಂಗೌಡನನ್ನು ಸೋಲಿಸಿಯೇ ತೀರಬೇಕು. ನಿಮ್ಮ ಮುಂದೆ ಬಂದು ನಿಂತಿದ್ದೇನೆ, ಯಾವುದೇ ಮುಲಾಜಿಲ್ಲದೆ ಬಿಜೆಪಿ ಅಭ್ಯರ್ಥಿ ಸೋಲಿಸುವಂತೆ ಕರೆ ನೀಡಿದರು. ಬಿಜೆಪಿಯ ಪ್ರೀತಂಗೌಡನನ್ನು ಈ ಜಿಲ್ಲೆಯಿಂದ ತೆಗೆಯಲೇ ಬೇಕು. ಸ್ವರೂಪ್ ಗೆಲ್ಲಬೇಕು, ಪ್ರೀತಂಗೌಡ ಸೋಲಬೇಕು. ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಿದ್ದೆ. ಹೆಚ್.ಡಿ.ದೇವೇಗೌಡ ಕುಟುಂಬ ಯಾರಿಗೂ ಮೋಸ ಮಾಡಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮತ್ತೆ 2ಬಿ ಮೀಸಲಾತಿ ಜಾರಿ ಮಾಡಲಾಗುವುದು ಎಂದರು.
ವಿಜಯನಗರ: ಬಿಜೆಪಿ ಟಿಕೇಟ್ ವಂಚಿತ ಆಕ್ಷಾಂಕಿಯಾಗಿದ್ದ ಕೋಡಿಹಳ್ಳಿ ಭೀಮಣ್ಣ ಕೊನೆ ಕ್ಷಣದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ.
ಕೂಡ್ಲಿಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೂಡ್ಲಿಗಿಯ ಕೊತ್ತಲ ಆಂಜನೇಯ ದೇಗುಲದಿಂದ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೂಡ್ಲಿಗಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೇಟ್ ಆಕ್ಷಾಂಕಿಯಾಗಿದ್ದ ಭೀಮಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಚಾಮರಾಜನಗರದಿಂದ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಚಾಮರಾಜನಗರ, ಮೈಸೂರಿನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ. ಕಾರ್ಯಕ್ರಮದ ರೂಪರೇಷೆ, ದಿನಾಂಕದ ಬಗ್ಗೆ ಚರ್ಚೆ ನಡೆದಿದೆ. ಶೀಘ್ರವೇ ಪ್ರಧಾನಿ ಮೋದಿ ಪ್ರಚಾರದ ಬಗ್ಗೆ ದಿನಾಂಕ ಪ್ರಕಟವಾಗಲಿದೆ ಎಂದರು.
ಬೆಳಗಾವಿ: ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ತೊರೆದ ವಿಚಾರವಾಗಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷ ಬಿಡುವ ಮುನ್ನ ಇಬ್ಬರು ನಾಯಕರು ಯೋಚಿಸಬೇಕಿತ್ತು. ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರಾಗುತ್ತಾರೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣಕ್ಕಾಗಿ ಕೆಲಸ ಮಾಡುವ ಪಕ್ಷ. ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ. ಮಾತ್ರವಲ್ಲದೆ, ಭಾರತ, ಭಾರತದ ಪ್ರಜಾಪ್ರಭುತ್ವಕ್ಕೆ ಬೈಯುವ ರಾಹುಲ್ ಗಾಂಧಿಯವರ ಪಕ್ಷಕ್ಕೆ ಹೋಗೋದು ಅಂದರೆ ಏನು? ಎಂದರು.
ಬೆಳಗಾವಿ: ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶನ ಮಾಡಿದೆ. ಇಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಅಭ್ಯರ್ಥಿ ರಮಾಕಾಂತ ಕೊಂಡೊಸ್ಕರ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ನಡೆದ ಮೆರವಣಿಗೆಯಲ್ಲಿ ಪುಂಡರು ‘ಜೈ ಮಹಾರಾಷ್ಟ್ರ’ ಎಂಬ ಫಲಕ ಪ್ರದರ್ಶನ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆದಿದ್ದು, ನಾಡದ್ರೋಹಿ ಘೋಷಣೆಯನ್ನೂ ಕೂಗಿದ್ದಾರೆ.
ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್ ಬಾಬು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಕೆಜಿಎಫ್ ಬಾಬು ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಖೂಬಾ ಭಾಗಿಯಾಗಿದ್ದು ಭಾಲ್ಕಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಪರ ಸಿಎಂ ಮತಯಾಚಿಸುತ್ತಿದ್ದಾರೆ.
ಕಾಂಗ್ರೆಸ್ಸಿಗರು ಗಂಟೆಗೊಂದು, ಗಳಿಗೆಗೊಂದು ದಾಳ ಉರುಳಿಸುತ್ತಾರೆ. ಕಾಂಗ್ರೆಸ್ನವರ ಈ ದಾಳ ಏನೂ ನಡೆಯಲ್ಲ ಎಂದ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರ ಮಾತನಾಡಿದ ಅವರು, ನಾಳೆ ದಿನ ಹೆಚ್ಚು ಕಡಿಮೆ ಆದ್ರೆ ಏನು ಮಾಡಬೇಕೆಂಬ ಬಗ್ಗೆ, ಲಿಂಗಾಯತ ಸಮುದಾಯ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿದ್ದೇವೆ. ಮುಂದಿನ ಸಿಎಂ ಬಗ್ಗೆ ಬಿಎಸ್ವೈ, ಬೊಮ್ಮಾಯಿ ಚರ್ಚೆ ಮಾಡ್ತಾರೆ. ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡಲು ಆಗುವುದಿಲ್ಲ. ವೀರಶೈವರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ ಮಾಡಿದ್ದು, ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗರ್ಹಿ ಹೆಸರು ಇರುವ ಹಿನ್ನೆಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.‘ಇಮ್ರಾನ್ ಪ್ರತಾಪ್ ಗರ್ಹಿ ಉತ್ತರ ಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಜೊತೆಗೆ ನನ್ನ ಗುರು ಎಂದು ಗರ್ಹಿ ಹೇಳಿಕೊಳ್ಳುತ್ತಿದ್ದ. ಇಂತಹವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕ ಮಾಡಿದೆ ಎನ್ನುವ ಮೂಲಕ ಕಿಡಿಕಾರಿದ್ದಾರೆ.
ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದು ಸತ್ಯ. ಅಭ್ಯರ್ಥಿ ಘೋಷಣೆಯಾದ ನಂತರ ಸ್ವರೂಪ್ ಬೆಂಬಲಿಸಿದ್ದೇನೆ ಎಂದು ಹಾಸನ ನಗರದಲ್ಲಿ ಟಿವಿ9ಗೆ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದರು. ಹೊಳೆನರಸೀಪುರದಲ್ಲಿ ರೇವಣ್ಣ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ಶಾಸಕ ಪ್ರೀತಂಗೌಡ ವರ್ತನೆ ಸರಿಯಿಲ್ಲ. ಮಹಿಳೆ ಅನ್ನೋದನ್ನು ಲೆಕ್ಕಿಸದೇ ಪ್ರೀತಂಗೌಡ ಸವಾಲು ಹಾಕಿದ್ದರು. ಬೇರೆಯವರಿಗೆ ಚಾಲೆಂಜ್ ಹಾಕುವ ಸಂಸ್ಕಾರ ನಮಗೆ ಇಲ್ಲ. ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ. ಯಾವತ್ತೂ ನಮ್ಮ ಕುಟುಂಬದಲ್ಲಿ ಬಿರುಕು ಮೂಡಲು ಸಾಧ್ಯವಿಲ್ಲ. ಹೆಚ್.ಡಿ.ದೇವೇಗೌಡರ ಕುಟುಂಬ ಒಗ್ಗಟ್ಟಿನಿಂದ ಇದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆಲ್ಲಬೇಕು ಎಂದರು.
ಶಿವಮೊಗ್ಗ ನಗರ ಕ್ಷೇತ್ರದ JDS ಅಭ್ಯರ್ಥಿ ಆಯನೂರು ಮಂಜುನಾಥ್ ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಸ್ಥಳೀಯ JDS ಮುಖಂಡರು ಸಾಥ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣೀಟ್ಟಿದ್ದಾರೆ. ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ‘ಕೈ’ ಕಾರ್ಯಕರ್ತ ರೇವಣಸಿದ್ದಪ್ಪ ಜಂಪಾ ವಿರುದ್ಧ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಏಪ್ರಿಲ್ 6ರಂದು ಕೊಡೆಕಲ್ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಘಟನೆ ಕುರಿತು ರೇವಣಸಿದ್ದಪ್ಪ ಜಂಪಾ ವಾಟ್ಸಾಪ್ ಪೋಸ್ಟ್ ಮಾಡಿದ್ದರು. ‘ದಿ ಬಾಸ್’ ವಾಟ್ಸಾಪ್ ಗ್ರೂಪ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದರು.
ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಲಿಂಗಸುಗೂರು ಎಸ್ ಸಿ ಮೀಸಲು ಕ್ಷೇತ್ರಕ್ಕೆ ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡುವ ಬೇಡಿಕೆಗೆ ಎಳ್ಳು ನೀರು ಬಿಡಲಾಗಿದೆ. ಖರ್ಗೆ ಬಣದ ಆರ್.ರುದ್ರಯ್ಯರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ಹಾಲಿ ಶಾಸಕ ಡಿಎಸ್ ಹೂಲಗೇರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯದ ಬಳಿಕ ಅಂದ್ರೆ ಏಪ್ರಿಲ್ 27ರಂದು ದೆಹಲಿಯಿಂದಲೇ ಪ್ರಧಾನಿ ಮೋದಿ ಆನ್ಲೈನ್ ಭಾಷಣ ಮಾಡಲಿದ್ದಾರೆ. ರಾಜ್ಯದ ಎಲ್ಲಾ ಬಿಜೆಪಿ ಶಕ್ತಿಕೇಂದ್ರ ಸೇರಿದಂತೆ ರಾಜ್ಯದ 5000 ಸ್ಥಳಗಳಲ್ಲಿ ಮೋದಿ ಭಾಷಣ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಏಪ್ರಿಲ್ 29ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 180 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮೋದಿಯ 1 ಕಾರ್ಯಕ್ರಮದಲ್ಲಿ 10 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ರೋಡ್ ಶೋ, ಱಲಿ, ಸಾರ್ವಜನಿಕ ಸಭೆ ಆಯೋಜಿಸಲು ರೂಪರೇಷೆ ಸಿದ್ಧವಾಗುತ್ತಿದೆ. ಏ.29ರಂದು ಬೀದರ್, ದಾವಣಗೆರೆ, ಚಿತ್ರದುರ್ಗ, ಬೆಂಗಳೂರಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಬೀದರ್, ದಾವಣಗೆರೆ, ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ನಾಳೆ ಮಧ್ಯಾಹ್ನ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಹಿನ್ನೆಲೆ ನಾಳೆ ಸಂಜೆ ಅಥವಾ ರಾತ್ರಿ ಅಮಿತ್ ಷಾ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ.
ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೆ ಶಿವಮೊಗ್ಗ BJP ಟಿಕೆಟ್ ತಪ್ಪಿದೆ. ಈ ಬಗ್ಗೆ ಶಿವಮೊಗ್ಗದಲ್ಲಿ ಕಾಂತೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಟಿಕೆಟ್ ಸಿಗದ ಹಿನ್ನೆಲೆ ಅಭಿಮಾನಿಗಳಿಗೆ ಬೇಸರ ಆಗಿದೆ. ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಹೇಳಿಕೆ. ಟಿಕೆಟ್ ಸಿಗದಿದ್ದಕ್ಕೆ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಒತ್ತಾಯ ಮಾಡಿದ್ದಾರೆ. ತಂದೆ, ಸಂಘಟನೆ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಜವಾಬ್ದಾರಿ ನೀಡುವ ವಿಶ್ವಾಸವಿದೆ. ಬರುವ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗುವ ವಿಶ್ವಾಸ ಇದೆ ಎಂದರು.
ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರಿಗೆ ಮಂಗಳೂರು ಉತ್ತರ ‘ಕೈ’ ಟಿಕೆಟ್ ಕೈ ತಪ್ಪಿದಕ್ಕೆ ಅಸಮಾಧಾನಗೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಆರೋಪ ಮಾಡಿದ್ದಾರೆ. ‘ಕೈ’ ಟಿಕೆಟ್ಗಾಗಿ ಇನಾಯತ್ ಅಲಿ 2 ಕೋಟಿ ರೂ. ಕೊಟ್ಟಿದ್ದಾರೆ. ಡಿಕೆಶಿ ಕೇಸ್ನಲ್ಲಿ ಇನಾಯತ್ ತಮ್ಮನನ್ನು ಇಡಿ ವಿಚಾರಣೆ ಮಾಡಿತ್ತು. ಹಾಗಾಗಿ ಇನಾಯತ್ ಅಲಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗಿದೆ. 6 ತಿಂಗಳ ಹಿಂದೆ ಜಿಲ್ಲೆಗೆ ಬಂದ ಗುತ್ತಿಗೆದಾರನಿಗೆ ಟಿಕೆಟ್ ಮಾರಾಟ ಮಾಡಲಾಗಿದೆ. BJP ವಿರುದ್ಧ ಭ್ರಷ್ಟಾಚಾರ ಮಾತಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ. ವಾಮಮಾರ್ಗ ಉಪಯೋಗಿಸಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಮೊಯಿದ್ದೀನ್ ಬಾವಾ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಎಸ್.ಗುರುಚರಣ್ JDS ಸೇರ್ಪಡೆಯಾಗಿದ್ದಾರೆ. H.D.ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರಿದ್ದಾರೆ. ಎಸ್.ಗುರುಚರಣ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರನ ಪುತ್ರ.
ವರುಣದಲ್ಲಿ ಸಿದ್ದರಾಮಯ್ಯಗೆ ಭಯ, ಅನಿಶ್ಚಿತತೆ ಕಾಡ್ತಿದೆ. ವರುಣಾದಿಂದ ಹಲವು ಬಾರಿ ನಿಂತು ಗೆದ್ದಿದ್ದಾರೆ. ಅವ್ರು ಸ್ವಂತ ಬಲದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಬೇಕೇ ವಿನಃ ಈ ರೀತಿ ಬಿಜೆಪಿ, ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿವೆ ಎಂಬ ಮಾತು ಸರಿಯಲ್ಲ. ನನ್ನ ಕ್ಷೇತ್ರ ಶಿಗ್ಗಾಂನಲ್ಲೂ ಕಾಂಗ್ರೆಸ್ ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿವೆ. ಆದರೆ ಇವರ ತಂತ್ರಗಾರಿಕೆಯಿಂದ ನನಗೇನು ವ್ಯತ್ಯಾಸ ಆಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ JDS ಅಭ್ಯರ್ಥಿ ವೈಎಸ್ವಿ ದತ್ತಾ ವಿರುದ್ಧ 41 ಚೆಕ್ಬೌನ್ಸ್ ಕೇಸ್ಗಳು ದಾಖಲಾಗಿವೆ. ರಾಜ್ಯ, ಹೊರ ರಾಜ್ಯಗಳಲ್ಲಿ ದತ್ತಾ ವಿರುದ್ಧ 2014ರಿಂದ 2023ರವರೆಗೆ 41 ಚೆಕ್ಬೌನ್ಸ್ ಪ್ರಕರಣ ದಾಖಲಾಗಿದೆ. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 41 ಕೇಸ್ಗಳಿರುವ ಬಗ್ಗೆ ವೈಎಸ್ವಿ ದತ್ತಾ ಮಾಹಿತಿ ನೀಡಿದ್ದಾರೆ. ಹಾಘೂ ಶೃಂಗೇರಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಬಳಿ 8 ಲಕ್ಷ ರೂ. ಸಾಲ ಸೇರಿಸಿ ಒಟ್ಟು 93.19 ಲಕ್ಷ ರೂ. ಸಾಲ ಮಾಡಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರಿಗೆ ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನ. ಹೀಗಾಗಿ ಬಹುತೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಅದರಲ್ಲೂ ಏಪ್ರಿಲ್ 20ರಂದು ವರ್ಷದ ಮೊದಲ ಅಮವಾಸ್ಯೆ ಹಿನ್ನೆಲೆ ಆಚಾರ-ವಿಚಾರ ಪಾಲಿಸುವ ಬಹುತೇಕ ಅಭ್ಯರ್ಥಿಗಳು ಏಪ್ರಿಲ್ 19ರ ಬುಧವಾರದಂದೇ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಕೊನೆಯ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಕೂಡ ಅನೇಕ ಪ್ರಮುಕ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಏಪ್ರಿಲ್ 21ರಿಂದ ನಾಮಪತ್ರಗಳ ಪರಿಶೀಲನೆ ನಡೆಯುತ್ತೆ. ಬಳಿಕ ಏಪ್ರಿಲ್ 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರಿಗೆ ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನ#karnatakaassemblyelection2023live #NominationDay #Congress #JDS #bjpkarnatakahttps://t.co/V0SyLXWiNT
— TV9 Kannada (@tv9kannada) April 20, 2023
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹಾಗೂ ಮೌಢ್ಯಕ್ಕೆ ಸೆಡ್ಡು ಹೊಡೆಯಲು ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ. ಇಂದು ರಾಹುಕಾಲದಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಮಧ್ಯಾಹ್ನ 1.30 ರಿಂದ ಮಧ್ಯಾಹ್ನ 3 ಗಂಟೆಯವರೆಗಿನ ರಾಹುಕಾಲದಲ್ಲಿ ಸರಳವಾಗಿ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇನಾಯತ್ ಅಲಿಗೆ ಕಾಗ್ರೆಸ್ ಟಿಕೆಟ್ ಘೋಷಣೆ ಹಿನ್ನೆಲೆ
ಟಿಕೆಟ್ ಕೈತಪ್ಪಿದ್ದಕ್ಕೆ ಮೊಯಿದ್ದೀನ್ ಬಾವ ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಶಾಸಕ ಮೊಯಿದ್ದೀನ್ ಬಾವ ಜೆಡಿಎಸ್ ಸೇರುವ ಸಾಧ್ಯತೆ ಇದೆ.
ಏಪ್ರಿಲ್ 28ರಂದು ಕೋಲಾರದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಮೋದಿ ಕಾರ್ಯಕ್ರಮಕ್ಕಾಗಿ ಸಿದ್ದತೆ ನಡೆಯುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ನಮೋ ಪ್ರಚಾರ ನಡೆಸಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಮೇ 3 ಕ್ಕೆ ರಾಮನಗರ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಚನ್ನಪಟ್ಟಣ ಹೊರವಲಯ ಮತ್ತಿಕೆರೆ ಬಳಿ ಸ್ಥಳ ಗುರುತಿಸಲಾಗಿದ್ದು ಸುಮಾರು 40 ಎಕರೆ ಜಾಗದಲ್ಲಿ ಸಮಾವೇಶ ನಡೆಸಲಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 1.50 ಕೋಟಿ ಹಣ ಜಪ್ತಿ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ರಾಮದುರ್ಗ ತಾಲೂಕಿನ ತುರನೂರು ಬಳಿ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ. ನಿನ್ನೆ ಅಪಾರ ಬೆಂಬಲಿಗರ ಜೊತೆ ಚಿಕ್ಕರೇವಣ್ಣ ನಾಮಪತ್ರ ಸಲ್ಲಿಸಿದ್ದರು. ಇನ್ನು ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಚುನಾವಣಾಧಿಕಾರಿಗಳು ದಾಳಿ ನಡೆಸಿ ಕಾರಿನಲ್ಲಿ ಸಾಗಿಸುತ್ತಿದ್ದ ಒಂದೂವರೆ ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ನ 6ನೇ ಹಾಗೂ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ(ಏಪ್ರಿಲ್ 19) 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ, ಬಳಿಕ ಮಧ್ಯ ರಾತ್ರಿ ಫೈನಲ್ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಫೈನಲ್ ಪಟ್ಟಿ ಬಿಡುಗಡೆ@INCKarnataka #KarnatakaElections2023 #karnataka #PoliticsToday #Candidateshttps://t.co/9Z4gSKkuK5
— TV9 Kannada (@tv9kannada) April 20, 2023
Published On - 9:41 am, Thu, 20 April 23