Shivamogga: ಶಿವಮೊಗ್ಗ ನಗರ ಕ್ಷೇತ್ರ; ಯಾರಿದು ಬಿಜೆಪಿ ವರಿಷ್ಠರ ಗಮನ ಸೆಳೆದ ಡಾ. ಧನಂಜಯ ಸರ್ಜಿ? ಆಕಾಂಕ್ಷಿಗಳ ವಿವರ ಇಲ್ಲಿದೆ ನೋಡಿ

|

Updated on: Apr 12, 2023 | 6:02 PM

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಗುರುವಾರ ಅಥವಾ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದೆ.

Shivamogga: ಶಿವಮೊಗ್ಗ ನಗರ ಕ್ಷೇತ್ರ; ಯಾರಿದು ಬಿಜೆಪಿ ವರಿಷ್ಠರ ಗಮನ ಸೆಳೆದ ಡಾ. ಧನಂಜಯ ಸರ್ಜಿ? ಆಕಾಂಕ್ಷಿಗಳ ವಿವರ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ (Shivamogga Urban Constituency) ಬಿಜೆಪಿ (BJP) ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಗುರುವಾರ ಅಥವಾ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಎರಡು ದಿನಗಳ ಒಳಗಾಗಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದು, ಕುತೂಹಲ ಹೆಚ್ಚಿಸಿದೆ. ಆದರೆ, ಯಾರಿಗೇ ಟಿಕೆಟ್ ಸಿಕ್ಕಿದರೂ ಜಿಲ್ಲೆಯಲ್ಲಿ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೇಳುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವ, ಬಿಜೆಪಿಯ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಪುತ್ರ ಕಾಂತೇಶ್​​​ಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿಂದ ಮತ್ತು ಹೈಕಮಾಂಡ್ ಸೂಚನೆ ಮೇರೆಗೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಮುಂದಿನ ನಡೆ ಏನಿರಬಹುದು ಎಂಬುದು ಟಿಕೆಟ್ ಘೋಷಣೆಯಾದ ಬಳಿಕವಷ್ಟೇ ತಿಳಿದುಬರಬಹುದು.

ಪುತ್ರ ಕಾಂತೇಶ್​​ಗೆ ಎರಡನೇ ಪಟ್ಟಿಯಲ್ಲಾದರೂ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಈಶ್ವರಪ್ಪ ಇದ್ದಾರೆ. ಈ ಮಧ್ಯೆ, ಕಾಂತೇಶ್​ಗೆ ಟಿಕೆಟ್ ನೀಡುವುದಕ್ಕೆ ಎಂಎಲ್​ಸಿ ಆಯನೂರು ಮಂಜುನಾಥ್ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಡಾ. ಧನಂಜಯ ಸರ್ಜಿ ಮತ್ತು ಜ್ಯೋತಿ ಪ್ರಕಾಶ್ ಕೂಡ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿ ಇದ್ದಾರೆ. ಅಲ್ಲದೆ, ಮಾಜಿ ಎಂಎಲ್ ಸಿ ಭಾನುಪ್ರಕಾಶ ಪುತ್ರ ಹರಿಕೃಷ್ಣ ಮತ್ತು ದತ್ತಾತ್ರೆ ಕೂಡಾ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಹೊಸ ಮುಖ ಧನಂಜಯ ಸರ್ಜಿ ಮುಂಚೂಣಿಯಲ್ಲಿ

ಸಂಘ ಪರಿವಾರದ ಗಮನ ಸೆಳೆದಿರುವ ಹೊಸ ಮುಖ ಡಾ. ಧನಂಜಯ ಸರ್ಜಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ವಿದ್ಯಾರ್ಥಿ ದೆಸೆಯಿಂದ ಇಲ್ಲಿಯ ವರೆಗೆ ಆರ್​​ಎಸ್​​ಎಸ್​ನಲ್ಲಿ ಸಕ್ರಿಯ ಆಗಿರುವುದು ಸರ್ಜಿಗೆ ಪ್ಲಸ್ ಆಗಿದೆ. ಎಂಬಿಬಿಎಸ್ ಎಂಡಿ ಆಗಿ ಉನ್ನತ ಶಿಕ್ಷಣ ಹೊಂದಿರುವ ವೈದ್ಯ ಅವರಾಗಿದ್ದು, ಮಕ್ಕಳ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಸಮಾಜ ಸೇವೆ ಮತ್ತು ಮಕ್ಕಳ ಆರೋಗ್ಯ ಮತ್ತು ವಿಕಲಚೇತನ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಚಿಕಿತ್ಸೆ ನೀಡಿ ಗಮನ ಸೆಳೆದಿದ್ದಾರೆ. ಆರೈಕೆ ಸರ್ಜಿ ಫೌಂಡೇಶನ್ ಮೂಲಕ ಉಚಿತವಾಗಿ ಮಾಡುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳು ಸಂಘ ಪರಿವಾರದ ಮತ್ತು ವರಿಷ್ಠರ ಗಮನ ಸೆಳೆದಿದೆ ಎನ್ನಲಾಗಿದೆ.

ಸಾಧು ಲಿಂಗಾಯತ ಮತಗಳೇ ನಿರ್ಣಾಯಕ

ಡಾ. ಧನಂಜಯ ಸರ್ಜಿ ಸಾಧು ಲಿಂಗಾಯತರೂ ಆಗಿರುವುದು ಸಕಾರಾತ್ಮಕ ಅಂಶವಾಗಿದೆ. ಶಿವಮೊಗ್ಗ ನಗರದಲ್ಲಿ ಅತೀ ಹೆಚ್ಚು ಸಾಧು ಲಿಂಗಾಯತ ಮತಗಳಿವೆ. ಇದೇ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಆಗಲಿವೆ. ಆದರೆ, ಮಗನಿಗಾಗಿ ಈಶ್ವರಪ್ಪ ಸ್ಥಾನ ಬಿಟ್ಟುಕೊಟ್ಟ ಕಾರಣ ಅದನ್ನು ನಿಭಾಯಿಸುವುದೂ ವರಿಷ್ಠರಿಗೆ ಸವಾಲಾಗಿದೆ.

ಕಾಂತೇಶ್ ಪ್ಲಸ್ ಪಾಯಿಂಟ್ ಏನು?

ಈಶ್ವರಪ್ಪ ಅವರ ಪಕ್ಷ ನಿಷ್ಠೆಗೆ ವರಿಷ್ಠರು ಕಾಂತೇಶ್​​ಗೆ ಟಿಕೆಟ್ ನೀಡುವ ಸಾಧ್ಯತೆಯೇ ಹೆಚ್ಚಿದೆ ಎಂದೂ ಹೇಳಲಾಗುತ್ತಿದೆ. ಕೊನೇ ಕ್ಷಣದಲ್ಲಿ ಈಶ್ವರಪ್ಪ ರಾಜಕೀಯ ಚದುರಂಗದಾಟ ಆಡಿದ್ದಾರೆ. ಕುರುಬ ಸಮಾಜದ ಟ್ರಂಪ್ ಕಾರ್ಡ್ ಅವರ ಪುತ್ರನಿಗೆ ವರದಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಎಸ್​ವೈ ಆಪ್ತ ಜ್ಯೋತಿ ಪ್ರಕಾಶ್

ಈ ಮಧ್ಯೆ, ಬಿಎಸ್ ಯಡಿಯೂರಪ್ಪ ಆಪ್ತ ಲಿಂಗಾಯತ ಗಾಣಿಗ ಸಮಾಜದ ಜ್ಯೋತಿ ಪ್ರಕಾಶ್ ಕೂಡಾ ರೇಸ್​​ನಲ್ಲಿದ್ದಾರೆ. ಬಿಎಸ್​​​ವೈ ಪ್ರಭಾವದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿ ಅವರಿದ್ದಾರೆ. ಟಿಕೆಟ್ ಪಕ್ಕಾ ಆಗಿದೆ ಎಂಬುದಾಗಿ ಆಪ್ತರ ಜತೆ ಮಂಗಳವಾರ ಹೇಳಿದ್ದರು. ಇವರೆಲ್ಲರ ನಡುವೆ ಬ್ರಾಹ್ಮಣ ಸಮುದಾಯದ ದತ್ತಾತ್ರೆ ಮತ್ತು ಯುವಕ ಹರಿಕೃಷ್ಣ ಹೆಸರೂ ಕೇಳಿಬಂದಿದೆ. ಇವರಿಬ್ಬರೂ ಸಂಘ ಪರಿವಾರದ ಹಿನ್ನೆಲೆಯವರು.

ಎರಡು ದಿನಗಳ ಒಳಗಾಗಿ 2ನೇ ಪಟ್ಟಿ; ಬೊಮ್ಮಾಯಿ

ಗುರುವಾರ ಅಥವಾ ಶುಕ್ರವಾರ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಧರ್ಮಸ್ಥಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೆ.ಎಸ್. ಈಶ್ವರಪ್ಪ ಪಕ್ಷ ಸಂಘಟನೆ ಮುಂದುವರಿಸುತ್ತಾರೆ. ಅವರು ಕೇವಲ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ