ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ಮಟ್ಟಹಾಕಲು ವಿಶೇಷ ತಂಡ: ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ

|

Updated on: May 01, 2023 | 2:44 PM

ರಾಷ್ಟ್ರೀಯತೆ ಮತ್ತು ಧಾರ್ಮಿಕ ಮೂಲಭೂತವಾದದ ಬಗ್ಗೆ ಬಲವಾದ ನಿಲುವು ಹೊಂದಿರುವ ಬಿಜೆಪಿ, ಇದೀಗ ತನ್ನ ಪ್ರಣಾಳಿಕೆಯಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆ ದಳ ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ಮಟ್ಟಹಾಕಲು ವಿಶೇಷ ತಂಡ: ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ
ಬಿಜೆಪಿ ಪ್ರಣಾಳಿಕೆ ಬಿಡುಗಡೆ
Follow us on

ಬೆಂಗಳೂರು: ಬಿಜೆಪಿಯು ತನ್ನ ಬಹು ನಿರೀಕ್ಷಿತ ಪ್ರಣಾಳಿಕೆಯನ್ನು ಪ್ರಜಾ ಪ್ರಣಾಳಿಕೆಯ (BJP Manifesto) ಹೆಸರಿನಲ್ಲಿ  ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು(ಮೇ 01 ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮತದಾರರನ್ನು ಓಲೈಸಲು ಸಾಕಷ್ಟು ಭರವಸೆಗಳನ್ನು ನೀಡಿದೆ. ಇದುವೆಗೆ ಮಾಡಿದ ಸಾಧನೆಗಳ ಜೊತೆಗೆ ಮುಂದೆ ಬಿಜೆಪಿ ಸರ್ಕಾರ ಬಂದರೆ ಮಾಡುವ ಭರವಸೆಗಳನ್ನು ನೀಡಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ನಡೆಯುವ ಧಾರ್ಮಿಕ ಕಲಹಗಳನ್ನು ಮಟ್ಟಹಾಕುವ ಭರವಸೆಯನ್ನು ಪ್ರಣಾಳಿಕೆ ತಿಳಿಸಿದೆ.

ರಾಜ್ಯದಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ಮಟ್ಟಹಾಕಲು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹತ್ವದ ಭರವಸೆಯನ್ನು ನೀಡಿದೆ. ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಾಣಿ ಜಾರಿ ಮಾಡುವ ಬಗ್ಗೆಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಹಾಗೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಡಿ ಕರ್ನಾಟಕ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆ ದಳ(ಕೆ-ಸ್ವಿಫ್ಟ್) ಎಂಬ ವಿಶೇಷ ಪಡೆ ರಚಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

ಇದನ್ನೂ ಓದಿ: BJP Manifesto: ಉಚಿತ ಗ್ಯಾಸ್, ನಂದಿನಿ ಹಾಲು ಸೇರಿದಂತೆ ಬಿಜೆಪಿ ಪ್ರಜಾ ಪ್ರಣಾಳಿಕೆ ಮುಖ್ಯಾಂಶಗಳು ಇಲ್ಲಿವೆ

2021ರಲ್ಲಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿ ರಾಷ್ಟ್ರೀಯತೆ ಮತ್ತು ಧಾರ್ಮಿಕ ಮೂಲಭೂತವಾದದ ಬಗ್ಗೆ ಬಲವಾದ ನಿಲುವನ್ನು ತೆಗೆದುಕೊಂಡಿದೆ. ಇದೀಗ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವುದಾಗಿ ಹೇಳಿದೆ. ಇನ್ನು ಪ್ರಮುಖವಾಗಿ ಕರ್ನಾಟಕ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆ ದಳ(ಕೆ-ಸ್ವಿಫ್ಟ್) ಎಂಬ ವಿಶೇಷ ಪಡೆ ರಚಿಸುತ್ತೇವೆ ಎನ್ನುವ ಭರವಸೆ ನೀಡಿದೆ.

2021ರಲ್ಲಿ ವ್ಯಾಪಕ ವಿರೋಧದ ನಡುವೆಯೂ ಗೋ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಆಗಿನ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಅಂಗೀಕರಿಸಿದ ಮಸೂದೆಯಲ್ಲಿ ಗೋಗಳಲ್ಲಿ ವಧೆ ಮಾಡುವುದು, ಅಕ್ರಮವಾಗಿ ಸಾಗಿಸುವುದು ಮತ್ತು ವ್ಯಾಪಾರ ಮಾಡುವುದು ಕಾನೂನುಬಾಹಿರವಾಗಿದೆ. ರಾಜ್ಯ ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ 160 ಕ್ಕೂ ಹೆಚ್ಚು ಕೋಮು ಘಟನೆಗಳು ವರದಿಯಾಗಿವೆ.

Published On - 2:36 pm, Mon, 1 May 23