ಬೆಳಗಾವಿ: ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಮತ್ತು ಜೆಡಿಎಸ್ ಪಕ್ಷದ ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ಬಿಜೆಪಿ ಜನಸ್ಪಂದನಾ ಸಮಾವೇಶದಲ್ಲಿ ನಳೀನಕುಮಾರ್ ಕಟೀಲು (Karnataka BJP President Nalinkumar Kateel) ಭಾಷಣ ಮಾಡುತ್ತಾ, ಸಿದ್ದರಾಮಯ್ಯ (Siddaramaiah) ಕಣ್ಣೀರು ತರಿಸುವ ಸಿಎಂ, ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಣ್ಣೀರಲ್ಲೇ ಇರುವ ಸಿಎಂ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ (BS Yediyurappa) ರಾಜ್ಯದ ಜನರ ಕಣ್ಣೀರು (Crying) ಒರೆಸಿದ ಸಿಎಂ ಎಂದು ಅವರು ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಕುಮಾರಸ್ವಾಮಿ ಅನೈತಿಕ ಸಂಬಂಧ ಸರ್ಕಾರ ಇತ್ತು. ಒಂದು ವರ್ಷದ ಸರ್ಕಾರದಲ್ಲಿ ತಾಜ್ ಹೋಟೆಲ್ ನಲ್ಲಿ ಕುಳಿತಿದ್ದರು ಸಿಎಂ ಹೆಚ್‌ಡಿ ಕುಮಾರಸ್ವಾಮಿ. ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷಕ್ಕೆ ಹೋಗುವುದನ್ನು ಕಂಡಿದೀರಿ. ಆಡಳಿತ ಪಕ್ಷದಲ್ಲಿದ್ದ ಪವರ್‌ಫುಲ್ ನಾಯಕ ರಮೇಶ್ ಜಾರಕಿಹೊಳಿ ವಿರೋಧ ಪಕ್ಷಕ್ಕೆ ಬಂದ್ರು ಎಂದು ರಮೇಶ್ ಜಾರಕಿಹೊಳಿ ಅವರನ್ನು ನಳಿನ್‌ಕುಮಾರ್ ಕಟೀಲ್ ಹಾಡಿಹೊಗಳಿದರು.
ಮುಂದಿನ ಎಲೆಕ್ಷನ್ನಲ್ಲಿ BJP 150 ಸ್ಥಾನ ಗೆದ್ದು, ಸಿದ್ದರಾಮಯ್ಯಗೆ ರಾಜಕೀಯ ಸನ್ಯಾಸ ನೀಡುವ ಸಂಕಲ್ಪ ಮಾಡಿದ್ದೇವೆ. ಬೆಳಗಾವಿ ವಿಭಾಗದಲ್ಲಿ ರಮೇಶ್ ನೇತೃತ್ವದಲ್ಲಿ 18 ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ RSS ನಿಷೇಧಿಸಬೇಕೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆರ್ಎಸ್ಎಸ್ ಅಲ್ಲ, ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು. ಪಾತಕಿ ದಾವೂದ್ ಇಬ್ರಾಹಿಂ ಬಂಧಿಸಲು ಕಾಂಗ್ರೆಸ್ಗೆ ಆಗಲಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬಂಧಿಸಲು ಆಗಲಿಲ್ಲ. ಇಂತಹ ಸಿದ್ದರಾಮಣ್ಣ ಧಮ್ ಬಗ್ಗೆ ಕೇಳುತ್ತಾರೆಂದು ಕಟೀಲು ತಿರುಗೇಟು ನೀಡಿದರು.
ಈ ದೇಶದಲ್ಲಿ ಭಯೋತ್ಪಾದನಾ ನಿಯಂತ್ರಣ ಮಾಡಿದ್ದು ನರೇಂದ್ರ ಮೋದಿ, ಅಮಿತ್ ಶಾ. ಅವರಿಗೆ ಅಭಿನಂದನೆ ಸಲ್ಲಿಸುವೆ. 2014ರ ಬಳಿಕ ಭಯೋತ್ಪಾದಕತೆ ನಿಯಂತ್ರಣ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಯಾವುದೇ ಹಳ್ಳಿಗಳಲ್ಲಿ ಬಾಂಬ್ ಸ್ಫೋಟ ಆಗಲಿಲ್ಲ. ಭಯೋತ್ಪಾದಕರಿಗೆ ಪ್ರೇರಣೆ, ಪ್ರೋತ್ಸಾಹ ಕೊಟ್ಟಿದ್ದು ಕಾಂಗ್ರೆಸ್. ನೆಹರು ಸರ್ಕಾರದಿಂದ ಮನಮೋಹನ ಸಿಂಗ್ ವರೆಗೆ ಭ್ರಷ್ಟಾಚಾರ ಆರೋಪ ಇಲ್ಲದ ಒಬ್ಬರೇ ಒಬ್ಬ ಪ್ರಧಾನಿ ಅಂದ್ರೆ ಲಾಲ್ ಬಹಾದ್ದೂರ್ ಶಾಸ್ತ್ರಿ. ಪಂಚಭೂತಗಳಲ್ಲಿ ಹಗರಣ ಮಾಡಿದವರು ಕಾಂಗ್ರೆಸ್. ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾವ ಕಾರಣಕ್ಕೆ ಬೇಲ್‌ನಲ್ಲಿದ್ದಾರೆ. ನಿಮ್ಮ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಏಕೆ ಬೇಲ್‌ನಲ್ಲಿದ್ದಾರೆ. ನಿಮ್ಮ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದು ಏಕೆ? ಇತಿಹಾಸ ಓದಲು ಹೋಗಿದ್ದರಾ? ಎಂದು ಕಾಂಗ್ರೆಸ್ ವಿರುದ್ಧ ನಳಿನ್‌ಕುಮಾರ್ ಕಟೀಲು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಣ್ಣ ಈ ರಾಜ್ಯದ ಪೇಮೆಂಟ್ ಸಿಎಂ. ಸೋನಿಯಾ ಗಾಂಧಿಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆದ್ರು. ಈ ರಾಜ್ಯದ ನರಹಂತಕ ಸಿಎಂ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ವಿರುದ್ಧ ನಳಿನ್‌ಕುಮಾರ್ ಕಟೀಲು ನೇರವಾಗಿ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಣ್ಣ ದೇವೆಗೌಡರ ಗರಡಿಯಲ್ಲಿದ್ರು. ಈ ರಾಜ್ಯದಲ್ಲಿ ಇಂದಿರಾ ಗಾಂಧಿ, ಕಾಂಗ್ರೆಸ್ ಬಗ್ಗೆ ಅತೀ ಕೆಟ್ಟದಾಗಿ ಬೈಯ್ದಿದ್ದು ಸಿದ್ದರಾಮಣ್ಣಾ. ಪೇಮೆಂಟ್ ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರು. ಹೀಗಾಗಿ ಅವರು ಈ ರಾಜ್ಯದ ಪೇಮೆಂಟ್ ಮುಖ್ಯಮಂತ್ರಿ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಶಾಮನೂರು ಶಿವಶಂಕರಪ್ಪ ಸಿಎಂ ಆಗಲಿಲ್ಲ. ಹೋರಾಟ ಮಾಡಿ ಬಂದ ಡಿಕೆಶಿ ಮುಖ್ಯಮಂತ್ರಿ ಆಗಬೇಕಿತ್ತು, ಆಗಲಿಲ್ಲ. ಸಿದ್ರಾಮಣ್ಣಾ ಪೇಮೆಂಟ್ ಮಾಡಿ ಮುಖ್ಯಮಂತ್ರಿಯಾಗಿದ್ದನ್ನೇ ಡಿಕೆಶಿ ಬರೆದಿದ್ದಾರೆ ಎಂದು ಕಾಂಗ್ರೆಸ್ ಪೇ ಸಿಎಂ ಅಭಿಯಾನಕ್ಕೆ ನಳಿನ್‌ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಸ್ಥಳೀಯ ಶಾಸಕ ರಮೇಶ್ ಜಾರಕಿಹೊಳಿ ಮೌನ-ಗರಂ
ಈ ಮಧ್ಯೆ, ಸಚಿವ ಸ್ಥಾನ ಸಿಗದಿರುವುದಕ್ಕೆ ರಮೇಶ್ ಜಾರಕಿಹೊಳಿ ಮೌನ ಮತ್ತು ವರಿಷ್ಠರ ಮೇಲಿನ ಮುನಿಸು ಮುಂದುವರಿದಿದೆ. ಬೃಹತ್ ಸಮಾವೇಶ ಆಯೋಜಿಸಿದರೂ ರಮೇಶ್ ಜಾರಕಿಹೊಳಿ ತುಟಿಬಿಚ್ಚಿಲ್ಲ. ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು ಹೇಳಿದರೂ ಗೋಕಾಕ ಬಿಜೆಪಿ ಜನಸ್ಪಂದನಾ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ರಮೇಶ್ ಜಾರಕಿಹೊಳಿ ಮಾತನಾಡಿಲ್ಲ. ತನ್ಮೂಲಕ ಸಚಿವ ಸ್ಥಾನ ಸಿಗದ ಹಿನ್ನೆಲೆ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸಮಾವೇಶ ಬಳಿಕ ಮಾಧ್ಯಮಗಳಿಗೂ ಪ್ರತಿಕ್ರಿಯಿಸಲು ರಮೇಶ್ ಜಾರಕಿಹೊಳಿ ನಕಾರ ಸೂಚಿಸಿದ್ದಾರೆ.
Published On - 8:29 pm, Wed, 28 September 22