Karnataka Assembly Poll 2023: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 120 ಕ್ಷೇತ್ರಗಳ ಟಿಕೆಟ್​ ಅಂತಿಮ

|

Updated on: Mar 09, 2023 | 10:14 AM

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಟಿಕೆಟ್​ ಹಂಚಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ನಿನ್ನೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 120 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.

Karnataka Assembly Poll 2023: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 120 ಕ್ಷೇತ್ರಗಳ ಟಿಕೆಟ್​ ಅಂತಿಮ
Follow us on

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದ ಅಖಾಡದಲ್ಲಿ ಮತಪ್ರಚಾರ ಜೋರಾಗಿದೆ. ರಣಬಿಸಿಲಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತಿದ್ದಾರೆ. ಮತ್ತೊಂದೆಡೆ ಮೂರು ಪಕ್ಷಗಳಲ್ಲಿ ಟಿಕೆಟ್​ ಹಂಚಿಕೆ ಪ್ರಕ್ರಿಯೆ ಸಹ ನಡೆದಿದೆ. ಜೆಡಿಎಸ್​ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಇದೀಗ ಕಾಂಗ್ರೆಸ್​​ನ(Congress) ಮೊದಲ ಪಟ್ಟಿ ಸಿದ್ಧವಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ(Congress Screening Committee )ಮೊದಲ ಹಂತದಲ್ಲಿ 120 ಕ್ಷೇತ್ರಗಳ ಟಿಕೆಟ್​ ಅಂತಿಮಗೊಳಿಸಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ, ಇಂದು ಬೆಂಗಳೂರಿಗೆ ಕೇಂದ್ರ ಚುನಾವಣಾ ಆಯೋಗ ತಂಡ ಭೇಟಿ

ರಾಜ್ಯ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯ ನಾಯಕರು ನಿನ್ನೆ(ಮಾ.08) ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ನಿನ್ನೆ(ಮಾ.08) ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಸೇರಿಕೊಂಡು 120 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು, ಈ ಪಟ್ಟಿಯನ್ನು ಪಟ್ಟಿಯನ್ನು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರು ಹೈಕಮಾಂಡ್​ಗೆ ನೀಡಲಿದ್ದಾರೆ. ಇನ್ನುಳಿದಂತೆ 104 ಸ್ಥಾನಗಳಿಗೆ ಎರಡರಿಂದ ಮೂರು ಹೆಸರುಗಳು ಪ್ರಸ್ತಾಪವಾಗಿದ್ದು, ಈ ಬಗ್ಗೆ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಬಳಿಕ ದೆಹಲಿಗೆ ಕೈ ಅಭ್ಯರ್ಥಿಗಳ ಪಟ್ಟಿ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಕೆಲವು ಭಾಗಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರು ಪಕ್ಷಕ್ಕೆ ಸೇರುವ ಸಾಧ್ಯತೆ ಇರುವುದರಿಂದ ನಂತರ ನಿರ್ಧಾರ ತೆಗೆದುಕೊಳ್ಳುವ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮಾರ್ಚ್ 27 ರ ನಂತರ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೊದಲ ಪಟ್ಟಿಯಲ್ಲಿ ಯಾರ್ಯಾರು?

120 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಟಾಪ್ ಲೀಡರ್ಸ್​ ಹೆಸರುಗಳು ಇವೆ ಎಂದು ತಿಳಿದುಬಂದಿದೆ. ಟಾಪ್​ ಲೀಡರ್ಸ್ ಅಂದ್ರೆ ಕೆಲ ಹಾಲಿ ಶಾಸಕರ ಹೆಸರುಗಳು ಮೊದಲ ಪಟ್ಟಿಯಲ್ಲಿವೆ. ಡಿಕೆ ಶಿವಕುಮಾರ್, ಕೃಷ್ಣ ಬೈರೇಗೌಡ, ರಾಮಲಿಂಗರೆಡ್ಡಿ, ಹ್ಯಾರೀಸ್, ಆರ್​.ವಿ. ದೇಶಪಾಂಡೆ, ಕೆ.ಜೆ ಜಾರ್ಜ್​, ಜಮೀರ್ ಅಹಮ್ಮದ್​ ಖಾನ್ ಹೀಗೆ ಹಾಲಿ ಹಾಗೂ ಪ್ರಭಾವಿ ನಾಯಕರುಗಳ ಹೆಸರುಗಳು ಮೊದಲ ಪಟ್ಟಿಯಲ್ಲಿದೆ. ಇನ್ನು ಒಂದು ಕ್ಷೇತ್ರದಲ್ಲಿ ಒಬ್ಬರೇ ಟಿಕೆಟ್​ ಆಕಾಂಕ್ಷಿ ಇರುವ ಅಭ್ಯರ್ಥಿಗಳ ಹೆಸರು ಸಹ ಮೊದಲ ಪಟ್ಟಿಯಲ್ಲೇ ಪ್ರಕಟವಾಗಲಿದೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಫಸ್ಟ್​ ಲಿಸ್ಟ್​ನಲ್ಲಿ ಯಾರ್ಯಾರಿಗೆ ಟಿಕೆಟ್​ ಸಿಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ವಿಧಾನ ಪರಿಷತ್ ಸದಸ್ಯರ ಬಗ್ಗೆಯೂ ಚರ್ಚೆ

ಮುಂದೆ ಸರ್ಕಾರ ಬಂದರೆ 4 ರಿಂದ 8 ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆಯಾಗಿದೆ. ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್​ ನೀಡುವ ಬದಲು ಹಿರಿಯ ಹಾಗೂ ಪ್ರಬಲ ಸಮುದಾಯದ ವಿಧಾನ ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ಆಗಿದ್ದು, ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ವಿಧಾನ ಪರಿಷತ್ ಸದಸ್ಯರನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸದ್ಯಕ್ಕೆ ಶೇ.75 ರಷ್ಟು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ನಂತರ ಕೇಂದ್ರ ನಾಯಕರಿಗೆ ಪಟ್ಟಿಯನ್ನು ಕಳುಹಿಸಲಾಗುವುದು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ 65 ಸ್ಥಾನಗಳನ್ನು ದಾಟುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಕಾಂಗ್ರೆಸ್ ನಾಯಕರ ನಡುವೆ ಸಂಧಾನ

ಇನ್ನು ಸಭೆಯಲ್ಲಿ ವಿಜಯಪುರ ಕಾಂಗ್ರೆಸ್ ನಾಯಕರ ನಡುವೆ ಸಂಧಾನ ನಡೆಯಿತು. ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ನಡುವೆ ವೈಮನಸ್ಸು ಇದ್ದು, ಸಭೆಯಲ್ಲಿ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂಬಿ ಪಾಟೀಲ್ ಅವರಿಂದ ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ಮೊದಲಿಂದಲೂ ಅಂತರ ಕಾಪಾಡಿಕೊಂಡಿದ್ದರು. ಅಲ್ಲದೇ ಬಸವನ ಬಾಗೇವಾಡಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಶಿವಾನಂದ ಪಾಟೀಲ್, ಬಬಲೇಶ್ವರ ಕ್ಷೇತ್ರದ ಟಿಕೆಟ್ ಅರ್ಜಿ ಹಾಕುವ ಮೂಲಕ ಎಂಬಿ ಪಾಟೀಲ್​ ಸೆಡ್ಡು ಹೊಡೆದಿದ್ದರು. ಇದನ್ನು ಗಮನಿಸಿದ್ದ ಬಿಜೆಪಿ ಶಿವಾನಂದ ಪಾಟೀಲ್ ರನ್ನು ಸೆಳೆಯಲು ಬಿಜೆಪಿ ತೆರೆ ಮರೆಯ ಕಸರತ್ತು ನಡೆಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು ಮೂವರು ನಾಯಕರ ನಡುವೆ ಸಂಧಾನ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್, ಸುರ್ಜೆವಾಲ, ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಸಂಧಾನವಾಗಿದ್ದು, ನಾಯಕರ ಮಾತಿಗೆ ಮೂವರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಈ ಮೂವರಿಗೆ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುವರಿ ಸೀಟ್ ಗೆಲ್ಲಲು ಟಾಸ್ಕ್ ನೀಡಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:08 am, Thu, 9 March 23