ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡುತ್ತಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಪ್ರಬಲ ಲಿಂಗಾಯತ ಸಮುದಾಯದ ಜಪ ಮಾಡುತ್ತಿವೆ. ವಿಧಾನಸಭೆ ಚುನಾವಣೆ ಸಂಬಂಧ ಬಿಜೆಪಿ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹಾಲಿ ಶಾಸಕ ರಾಮದಾಸ್ ಮತ್ತು ರಘುಪತಿ ಭಟ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಬಂಡಾಯವೆದ್ದು, ಕಾಂಗ್ರೆಸ್ ಸೇರಿದ್ದಾರೆ. ಲಿಂಗಾಯತ ಸಮುದಾಯದ ಪ್ರಬಲ ಮುಖಂಡರು ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ಪ್ಲಸ್ ಆದ್ರೆ ಬಿಜೆಪಿಗೆ ಮೈನಸ್ ಆಗಿದೆ. ಇನ್ನು ಪುಲಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ ಬಂಡಾಯವೆದ್ದ ಅಖಂಡ ಶ್ರೀನಿವಾಸ ಮೂರ್ತಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇನ್ನು ರಾಜ್ಯಾದ್ಯಂತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಇಂದು ಕೂಡ ಹಲವರು ಸಲ್ಲಿಸಲಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್ ಇಲ್ಲಿದೆ.
ಗದಗ: ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು. ಆದರೆ ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ರಾಜೀನಾಮೆ ಸಲ್ಲಿಸಿದ್ದರೂ ಅಂಗೀಕಾರವಾಗಿಲ್ಲ. ಹೀಗಾಗಿ ಈಗಲೂ ಅವರು ಸರ್ಕಾರಿ ನೌಕರ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತಮ್ಮ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ಆದರೆ ಅದು ಕೂಡ ಅಂಗೀಕಾರವಾಗಿಲ್ಲ ಎಂದು ಪ್ರತದಲ್ಲಿ ಉಲ್ಲೇಖಿಸಿದ್ದಾರೆ.
ಹುಬ್ಬಳ್ಳಿ: ನಮ್ಮದು ಕೇಡರ್ ಬೇಸ್ಡ್ ಪಾರ್ಟಿ ಎಂದು ಹೇಳಿದ ಜೆಪಿ ನಡ್ಡಾ, ನಮ್ಮ ಪಕ್ಷ ದೇಶದಲ್ಲಿ ಒಂದೇ ಕಾನೂನು ಇರಬೇಕು ಅಂದಿತ್ತು. ಇದೇ ಕಾರಣಕ್ಕೆ ಆರ್ಟಿಕಲ್ 370 ಕಿತ್ತೊಗೆದಿದ್ದೇವೆ. ಇದೀಗ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಮ್ಮದೇನಿದ್ದರೂ ಅಭಿವೃದ್ದಿ ರಾಜಕೀಯ. ನಮ್ಮ ಇತಿಹಾಸ ಗೌರವಶಾಲಿಯಾಗಿದೆ. 1300 ಜನ ಶಾಸಕರು ದೇಶದಲ್ಲಿದ್ದಾರೆ. ಅತಿ ಹೆಚ್ಚು ಸಂಸದರು ನಮ್ಮ ಪಕ್ಷದವರಿದ್ದಾರೆ. ನಮ್ಮ ದೇಶ ಈಗ ಐದನೇ ದೊಡ್ಡ ಆರ್ಥಿಕ ದೇಶವಾಗಿದೆ. ನಮ್ಮದೀಗ ಆತ್ಮ ನಿರ್ಭರ ಭಾರತವಾಗಿದೆ. ಮೊಬೈಲ್ನಿಂದ ಮೆಡಿಸನ್ವರೆಗೆ ಎಲ್ಲವೂ ದೇಶದಲ್ಲಿಯೇ ತಯಾರಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು ರಸ್ತೆ ಅಭಿವೃದ್ಧಿಯಾಗಿದೆ. ಧಾರವಾಡದಲ್ಲಿ ಐಐಟಿ ಕೂಡ ಆಗಿದೆ. ಮುಂಚೆ ಮುಂಬೈ ಸೇರಿದಂತೆ ಎಲ್ಲೆಲ್ಲೋ ಇದ್ದವು. ಇವತ್ತು ಧಾರವಾಡದಲ್ಲಿಯೇ ಐಐಟಿ ಆಗಿದೆ. ಇದಕ್ಕೆಲ್ಲ ಕಾರಣ ಜನರು ಬಿಜೆಪಿಗೆ ಮತ ಹಾಕಿದ್ದು. ನೀವೆಲ್ಲ ವಂದೇ ಭಾರತ್ ರೈಲಿನಲ್ಲಿ ಟಿಕೆಟ್ ಪಡೆದು ಹತ್ತಿ ಆಗ ನಿಮಗೆ ನವಭಾರತದ ದರ್ಶನವಾಗುತ್ತದೆ. ಅದೆಲ್ಲ ವರ್ಲ್ಡ್ ಕ್ಲಾಸ್ ರೈಲು ಎಂದರು.
ಹುಬ್ಬಳ್ಳಿ: ಎಲ್ಲರೂ ಕಮಲವನ್ನು ಅರಳಿಸಬೇಕಿದೆ ಎಂದು ಹೇಳಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ನಾವು ಯಾರೊಂದಿಗೆ ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ? ಒಂದು ಕಡೆ ಮೋದಿ ನಿರಂತರವಾಗಿ ದೇಶದ ಸಲುವಾಗಿ ಹೋರಾಡುತ್ತಿದ್ದಾರೆ. ಅವರ ಎದುರಿಗೆ ನಿಂತವರು 70 ವರ್ಷಗಳ ಕಾಲ ಒಡೆದು ಆಳಿದವರು, ಅವರೆಲ್ಲ ತಮ್ಮ ಪರಿವಾರದ ಸಲುವಾಗಿ ಕೆಲಸ ಮಾಡಿದವರು. ಇಂದಿಗೂ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. ನಮ್ಮದು ರಾಷ್ಟ್ರವಾದದ ಚಿಂತನೆಯ ಪಕ್ಷ. ಮತ್ತೊಂದು ಕಡೆ ಅವರದ್ದು ಪರಿವಾರ ವಾದದ ಚಿಂತನೆಯ ಪಕ್ಷ. ಕರ್ನಾಟಕವನ್ನು ಹೇಗೆ ಲೂಟಿ ಮಾಡಬೇಕೆಂದು ಅವರು ಯೋಚಿಸುತ್ತಿದ್ದಾರೆ. ಬಿಜೆಪಿ ಶಾಲು ಹಾಕಿದವರೆಲ್ಲ ಭಾಗ್ಯಶಾಲಿಗಳು. ಏಕೆಂದರೆ ನೀವು ಜಗತ್ತಿನ ದೊಡ್ಡ ಪಕ್ಷದ ಸದಸ್ಯರು ಎಂದರು. ಐದೈದು ಪೀಳಿಗೆ ಕಳೆದು ಹೋದವು. ರಾಜಕೀಯ ಪರಿಕಲ್ಪನೆಯನ್ನು ಮೋದಿ ಬದಲಾಯಿಸಿದ್ದಾರೆ. ನಮ್ಮದು ವಿಕಾಸ ವಾದದ ರಾಜನೀತಿಯಾಗಿದೆ ಎಂದರು.
ಧಾರವಾಡ: ಕಾಂಗ್ರೆಸ್ ಸರಕಾರ ಪಿಎಫ್‌ಐ ಕೇಸು ವಾಪಸ್ ಪಡೆದಿತ್ತು. ಅವರದ್ದು ಇದೇ ಕೆಲಸ, ಸಿದ್ದರಾಮಯ್ಯ ಅವರ ಕೆಲಸವೇ ಅದು. ಅವರನ್ನು ಸೋಲಿಸಬೇಕೆಂದರೆ ಕಮಲ ಅರಳಿಸಲೇಬೇಕು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಒಡೆದು ಆಳುವುದು ಅಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿರುವ ಪಂಜಾಬ್ ಸಿಎಂ ಭಗವಂತ ಮಾನ್ ಅವರು ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದರು. ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಗಳ ಆಪ್ ಅಭ್ಯರ್ಥಿಗಳಾದ ಎಂ.ಅರವಿಂದ, ವಿಕಾಸ ಸೊಪ್ಪಿನ, ಬಸವರಾಜ ತೇರದಾಳ ಪರ ಹಳೇ ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ಪ್ರಚಾರ ನಡೆಸಿದರು.
ಆನೇಕಲ್: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಷ್ಮಾ ರಾಜಗೋಪಾಲರೆಡ್ಡಿ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಪತಿ ರಾಜಗೋಲಾರೆಡ್ಡಿ ಕೂಡ ಜೆಡಿಎಸ್ ಸೇರಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕಾಂಗ್ರೆಸ್ನ ಆರ್.ಕೆ.ರಮೇಶ್‌ಗೆ ನೀಡಲಾಗಿದೆ. ಸುಷ್ಮಾ ರಾಜಗೋಪಾಲರೆಡ್ಡಿ 2018ರಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜೊತೆಗಿದ್ದರು. ಬಳಿಕ ಮಾತನಾಡಿದ ಸತೀಶ್, ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ. ಯಾವ ರೀತಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ ಅದರ ಮೇಲೆ ಲೀಡ್ ಇರುತ್ತದೆ. ಲೀಡ್ ಮೆಂಟೇನ್ ಮಾಡುವುದು ನಮ್ಮ ಕೈಯಲ್ಲಿಲ್ಲ ಕಾರ್ಯಕರ್ತರ ಕೈಯಲ್ಲಿದೆ ಎಂದರು. ಬಹಳಷ್ಟು ಬದಲಾವಣೆ ಆಗಿದೆ ಬಿಜೆಪಿ ಹೆಚ್ಚುಕಮ್ಮಿ ಖಾಲಿಯಾಗಿದೆ. ಬಿಜೆಪಿಯಿಂದ ಬಹಳಷ್ಟು ಅನ್ಯಾಯ ಆಗಿದೆ. ಮೂಲ ಬಿಜೆಪಿಗರು, ಪಕ್ಷ ಕಟ್ಟಿದವರಿಗೆ ಅನ್ಯಾಯ ಆಗಿದೆ ಎಂದು ಬಹಳಷ್ಟು ಜನ ಹೊರಗೆ ಬಂದಿದ್ದಾರೆ ಎಂದರು.
ಹುಬ್ಬಳ್ಳಿ: ಪ್ರಭುದ್ದರ ಸಂವಾದದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸದ್ಯ ಚುನಾವಣೆ ಸಮಯವಿದೆ. ಪ್ರಧಾನಿ ಮೋದಿ ಡೈನಮಿಕ್ ನಾಯಕತ್ವದಲ್ಲಿ ದೇಶ ಸದೃಢವಾಗಿ ಮುನ್ನಡೆದಿದೆ. ನೀವೆಲ್ಲಾ ಸಮಾಜದ ಕೆನೆಪದರು ಇದ್ದಂತೆ. ಕಾಂಗ್ರೆಸ್ 60 ವರ್ಷ ಅಧಿಕಾರ ಮಾಡಿದರು. ಅವರು ಮಾಡಿದ್ದು ಇಬ್ಬಾಗ ಇಬ್ಬಾಗ ಇಬ್ಬಾಗ.. ಹೀಗಾ ಇಬ್ಭಾಗ ಮಾಡುತ್ತಾನೇ ಕಾಂಗ್ರೆಸ್ ಪತನ ಕಂಡಿದೆ. ಕರ್ನಾಟಕದಲ್ಲಿ ಜಗಳ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆದರೆ ಬಿಜೆಪಿ ಪ್ರಾದೇಶಿಕ ಅಸ್ಮಿತೆಯನ್ನೂ ಗೌರವಿಸುತ್ತದೆ. ವಿವಿಧತೆಯಲ್ಲಿ ಏಕತೆ ಬಯಸುತ್ತದೆ. ಭಾರತ ರಾಜನೀತಿಯ ಸಂಸ್ಕೃತಿಯನ್ನು ಮೋದಿ ಬದಲಾಯಿಸಿದ್ದಾರೆ. ಸೆಂಟ್ರಲ್ ಆರ್ಮ್ ಫೋರ್ಸ್ ಸಿಇಟಿ 13 ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದರು.
ಹುಬ್ಬಳ್ಳಿ – ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜೆಪಿ ಚಳುವಳಿಯಲ್ಲಿಯೂ ಜೆಪಿ ನಡ್ಡಾ ಭಾಗವಹಿಸಿದ್ದರು. ಎಬಿಬಿಪಿ ಅಖಿಲ ಭಾರತ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ಸದೃಢವಾಗಿ ಬೆಳೆದಿದೆ. ವಿಶ್ವದ ಅತಿದೊಡ್ಡ ಪಕ್ಷವಾಗಿ ಪರಿವರ್ತನೆಗೊಂಡಿದೆ. ಹಲವು ರಾಜ್ಯಗಳಲ್ಲಿ ಸತತವಾಗಿ ಗೆಲ್ಲುತ್ತಿದ್ದೇವೆ. ನಡ್ಡಾ ಪಕ್ಷವನ್ನು ಸದೃಢವಾಗಿ ನಡೆಸುತ್ತಿದ್ದಾರೆ. ಇದೇ ಕ್ಷೇತ್ರದಿಂದ ಉತ್ಕರ್ಷ ಪ್ರಾರಂಭವಾಗಿದೆ. ಮೋದಿ ನೇತೃತ್ವದಲ್ಲಿ ಈ ಭಾಗದಲ್ಲಿ ಬದಲಾವಣೆ ತರುತ್ತಿದ್ದೇವೆ. ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ನೀವೆಲ್ಲಾ ಮಾಡಬೇಕು ಎಂದು ಮನವಿ ಮಾಡಿದರು. ನಾವು ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ ಜೇನು ತುಪ್ಪ ನೀಡಿದ್ದೇವೆ. ಜೇನು ಕಡೆಸಿಕೊಂಡಿಲ್ಲ. ಒಕ್ಕಲಿಗರಿಗೆ, ಕುರುಬರಿಗೆ ಒಬಿಸಿ ಅವರಿಗೆ ಸಮಾಧಾನ ಮಾಡಿದ್ದು ಮೋದಿ ಮಾರ್ಗದರ್ಶನ ಎಂದರು.
ಬೆಂಗಳೂರು: ಬಿ.ಎಲ್.ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಆರೋಪ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿ.ಎಲ್.ಸಂತೋಷ್ ಎಂದಿಗೂ ಜಗದೀಶ್ ಶೆಟ್ಟರ್ ವಿರೋಧಿಯಲ್ಲ ಎಂದರು. ಸಂತೋಷ್ ಅವರು ಶಾಸಕರಲ್ಲ, ಸಂಸದರಲ್ಲ, ಎಲೆಕ್ಷನ್‌ಗೆ ನಿಲ್ಲುವವರಲ್ಲ. ಇಷ್ಟು ವರ್ಷ ಅವರು ಕೆಲಸ ಮಾಡಿದ್ದು ಪಕ್ಷ ಸಂಘಟನೆಗಾಗಿ. ಅವರು ಒಂದು ವಿಚಾರದಿಂದ ಬಂದಿದ್ದಾರೆ. ಆ ವಿಚಾರದಿಂದ ಬಂದವರನ್ನು ಗೆಲ್ಲಿಸಬೇಕು ಅನ್ನೋದು ಅವರ ಉದ್ದೇಶ ಎಂದು ಮಲ್ಲೇಶ್ವರಂನ ಬಿಜೆಪಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಒಂದೆಡೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತಯಾಚನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸಭೆ ನಡೆಸುತ್ತಿದ್ದಾರೆ. ಮೈಸೂರಿನ ಟಿ.ಕೆ.ಬಡಾವಣೆಯ ನಿವಾಸದಲ್ಲಿ ವರುಣ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸುತ್ತಿರುವ ಸಭೆಯಲ್ಲಿ ಸಿದ್ದರಾಮಯ್ಯ ತಂತ್ರಗಾರಿಕೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಪ್ರತಿಯೊಂದು ಪಂಚಾಯತಿಯವರ ಜೊತೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಮೈಸೂರು: ತನ್ನದು ಕೊನೆಯ ಚುನಾವಣೆ ಎಂದು ಘೋಷಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ಮನೆಗೆ ಕಳುಹಿಸುವ ಯೋಜನೆ ಹಾಕಿಕೊಂಡಿರುವ ಬಿಜೆಪಿ ಹೈಕಮಾಂಡ್, ವರುಣಾ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿಯನ್ನಾಗಿ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಅದರಂತೆ ಸಂಸದರು ಮತ್ತು ಬೆಂಬಲಿಗರೊಂದಿಗೆ ಪ್ರಚಾರಕ್ಕೆ ತೆರಳಿಸಿದ ಸೋಮಣ್ಣ ಅವರು ಇಂದು ಕೆಲವು ಗ್ರಾಮಸ್ಥರ ತರಾಟೆಗೆ ಕಿವಿ ಕೊಡಬೇಕಾಯಿತು. ಹೌದು, ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಕಾರ್ಯಕರ್ತರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಕಾರ್ಯಕರ್ತರ ಬೃಹತ್ ಮೇರವಣಿಗೆ ನಡೆಸಿದರು. ಪಟ್ಟಣದ ಗೂಳೂರು ವೃತ್ತದಿಂದ ಚುನಾವಣಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ನಡೆಯಿತು.
ಬೆಂಗಳೂರು: ಜಗದೀಶ್ ಶೆಟ್ಟರ್ ಅಥವಾ ಬೇರೆಯವರು ಪಕ್ಷ ಬಿಟ್ಟಿದ್ದರಿಂದ ಪರಿಣಾಮ ಬೀರಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ನಾಳೆ ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ನಾಮಪತ್ರ ಸಲ್ಲಿಸುತ್ತಾರೆ. ಇಂದು ಉಳಿದ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ ಎಂದರು.
ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಗೆಲ್ಲಿಸುವಂತೆ ಪಾಂಡವಪುರದಲ್ಲಿ ಮನವಿ ಮಾಡುತ್ತಿದ್ದರು. ಈ ವೇಳೆ ಕುಮಾರಸ್ವಾಮಿ ಬಳಿ ಬಂದ ಮಂಗಳಮುಖಿಯರು 25 ಸಾವಿರ ರೂ. ದೇಣಿಗೆ ನೀಡಿದರು.
ಕಾರವಾರ: ವಿಧಾನಸಭೆ ಸ್ಪೀಕರ್ ಶಿರಸಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಶಶಿಭೂಷಣ್ ಹೆಗಡೆ ಜತೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಶಿರಸಿ ನಗರದಲ್ಲಿ ಬೆಂಬಲಿಗರ ಜತೆ ರ್ಯಾಲಿ ನಡೆಸಿದರು. ಕಾಗೇರಿ ಅವರು 7ನೇ ಬಾರಿ ಚುನಾವಣೆಗೆ ಸ್ಪರ್ಧೆಸುತ್ತಿದ್ದಾರೆ.
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ತನ್ನ ಪತ್ನಿ ಸಮೇತರಾಗಿ ಭೇಟಿ ನೀಡಿ ಕರಿವೃಷಭ ದೇಶೀಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಗಂಗಾಧರೇಶ್ವರ ಅಜ್ಜರ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗಾವಿ: ರಾಜ್ಯದಲ್ಲಿ ಬಿ.ಎಲ್.ಸಂತೋಷ್ ಕಾರುಬಾರು ನಡೀತಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಲಕ್ಷ್ಮಣ ಸವದಿ, ಬಿ.ಎಲ್.ಸಂತೋಷ ಬಗ್ಗೆ ನಾನು ಯಾವುದೇ ಚಕಾರ ಎತ್ತಲ್ಲ. ಅವರ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಲ್ಲ, ಅದು ನನಗೆ ಇಷ್ಟನೂ ಇಲ್ಲ ಎಂದರು. ಅಥಣಿ ಮತಕ್ಷೇತ್ರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ 20 ವರ್ಷ ನನ್ನ ಜೊತೆಗಿದ್ದ ಹಲವರು ಕಾಂಗ್ರೆಸ್ ಸೇರಿದ್ದಾರೆ. ಮೂಲ ಕಾಂಗ್ರೆಸ್, ನನ್ನ ಜೊತೆ ಬಂದ ಅನೇಕ ಹಿರಿಯರು, ರೈತರು ಬೆಂಬಲಕ್ಕೆ ನಿಂತಿದ್ದಾರೆ. ಆರು ಬಾರಿ ನಾಮಪತ್ರ ಸಲ್ಲಿಸಿದ್ದೆ, ಇಂದು ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸ್ಫೂರ್ತಿ ಬಂದಿದೆ, ನಾನು ಗೆಲ್ಲುವ ಆತ್ಮವಿಶ್ವಾಸಕ್ಕೆ ಸಿಕ್ಕಿದೆ ಎಂದರು. ಜಗದೀಶ್ ಶೆಟ್ಟರ್ ಮನೆತನ ಜನಸಂಘದಿಂದ ಬಿಜೆಪಿಯವರೆಗೆ ಕೆಲಸ ಮಾಡಿದ ಮನೆತನ. ಸಂಪೂರ್ಣವಾಗಿ ಸಂಘಪರಿವಾರ, ಬಿಜೆಪಿಯಲ್ಲಿ ಪಕ್ಷ ಕಟ್ಟಿ ಬೆಳೆಸಲು ಅವರದ್ದೇ ಆದ ಸೇವೆಯಿದೆ. ಮನೆ ಬಿಟ್ಟು ಹೊರಗೆ ಹೋಗುವಾಗ ಭಾವುಕರಾಗೋದು ಸಹಜ. ಓರ್ವ ಹೆಣ್ಣು ಮಗಳು 20 ರಿಂದ 25 ವರ್ಷ ತಂದೆ ತಾಯಿ ಬೆಳೆಸಿರುತ್ತಾರೆ. ಮದುವೆ ಆದ ಬಳಿಕ ಗಂಡನ ಮನೆಗೆ ಹೋಗುವಾಗ ಆ ಮನೆ ಹೇಗಿರುತ್ತೋ ಎಂಬ ಆತಂಕ, ಈ ಮನೆ ಬಿಟ್ಟು ಹೋಗುವ ದುಃಖ ಆಗುತ್ತದೆ. ನಾವು ಇವತ್ತು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ. ಗಂಡನ ಮನೆಯವರು ಪ್ರೀತಿಯಿಂದ ಕಾಣುತ್ತಿದ್ದಾರೆ ಅಪ್ಪಿಕೊಂಡಿದ್ದಾರೆ. ಇನ್ಮುಂದೆ ಇದೇ ನಮ್ಮ ಮನೆ ಅಂತಾ ಮುಂದುವರಿಯುತ್ತೇನೆ ಎಂದರು.
ಬೆಂಗಳೂರು: ಐಟಿ, ಇಡಿ ದಾಳಿ ಮಾಡಿಸಿ ನಮ್ಮ ಅಭ್ಯರ್ಥಿಗಳನ್ನು ಹೆದರಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಐಟಿ, ಇಡಿ ಇದ್ಯಾವುದಕ್ಕೂ ನಾವು ಹೆದರಲ್ಲ. ಈ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಶೆಟ್ಟರ್, ಸವದಿ ಸೇರ್ಪಡೆಯಿಂದ 150 ಸ್ಥಾನ ಗೆಲ್ಲುತ್ತೇವೆ. ವೀರಶೈವ ಲಿಂಗಾಯತ ಸಮುದಾಯದವರು ನಮ್ಮ ಜತೆ ಬರುತ್ತಾರೆ ಎಂದರು. ನಮಗೆ ಜನ, ಕಾರ್ಯಕ್ರಮಗಳ ಮೇಲೆ ನಂಬಿಕೆಯಿದೆ. ಬಿಜೆಪಿಯಲ್ಲಿ ಯಾರು ಹರಿಶ್ಚಂದ್ರರು ಇಲ್ಲ. ಬಿಜೆಪಿಯವರನ್ನು ಅವರು ಮುಟ್ಟುತ್ತಿಲ್ಲ. ನಮಗೆ ಯಾವುದೇ ರೀತಿ ತೊಂದರೆ ಇಲ್ಲ. ಜನರ ಬೆಂಬಲದಿಂದ ಎಲೆಕ್ಷನ್ ಮಾಡುತ್ತೇವೆ ಎಂದರು.
ಗದಗ: ರೋಣ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಶಕ್ತಿ ಪ್ರದರ್ಶನ ನಡೆಯಿತು. ಕ್ಷೇತ್ರದ ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್ ಸಿಂಗ್ ಅವರು ರೋಡ್ ಶೋ ನಡೆಸಿದ್ದಾರೆ. ವಾದ್ಯ ಮೇಳದೊಂದಿದೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಗಿದ್ದು, ತೆರದ ವಾಹನದಲ್ಲಿ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ರೋಡ್ ಶೋ ನಡೆಸಿದರು. ಬಳಿಕ ಆನೇಕಲ್ ದೊಡ್ಡಯ್ಯ ನಾಮ ಪತ್ರ ಸಲ್ಲಿಕೆ ಮಾಡಿದರು.
ಹುಬ್ಬಳ್ಳಿ: ನನಗೆ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ ಎಂಬ ಜಗದೀಶ್ ಶೆಟ್ಟರ್ ಆರೋಪ ವಿಚಾರವಾಗಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ಟಿಕೆಟ್ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಬಿ.ಎಲ್.ಸಂತೋಷ್ ಒಬ್ಬರಿಂದಲೇ ಟಿಕೆಟ್ ನಿರ್ಧಾರ ಆಗುವುದಿಲ್ಲ. ನಿಷ್ಠಾವಂತ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಜಗದೀಶ್ ಶೆಟ್ಟರ್ ನನ್ನ ಗುರುಗಳು, ನನಗೆ ಅವರ ಆಶೀರ್ವಾದ ಬೇಕು ಎಂದರು.
ದೊಡ್ಡಬಳ್ಳಾಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೆತ್ತ ತಾಯಿಯನ್ನು ತುಳಿದು ಹೋಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಜಗದೀಶ್ ಶೆಟ್ಟರ್‌ಗೆ ನಮ್ಮ ಪಕ್ಷ ಏನು ಕಡಿಮೆ ಮಾಡಿತ್ತು? ಶೆಟ್ಟರ್ರನ್ನು ಶಾಸಕ, ಮಂತ್ರಿ, ವಿಪಕ್ಷ ನಾಯಕ, ಸಿಎಂ ಮಾಡಿತ್ತು. ಶೆಟ್ಟರ್‌ಗೆ ಬಿ.ಎಲ್.ಸಂತೋಷ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಏಪ್ರಿಲ್ 30ರ ಬಳಿಕ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಮಾಡುತ್ತಾರೆ. ಈಗಾಗಲೇ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್, ಅಮಿತ್ ಶಾ ಸೇರಿ ಹಲವರು ಬರಲಿದ್ದಾರೆ ಎಂದರು.
ಧಾರವಾಡ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ವಿರುದ್ಧ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು. 30 ವರ್ಷದ ಹಿಂದೆ ಶೆಟ್ಟರ್ ಕೂಡ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಅವರು ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅಂಥವರನ್ನು ಕರೆ ತಂದು ಬಿಜೆಪಿ ಟಿಕೆಟ್ ಕೊಟ್ಟಿತ್ತು. ಕಾರ್ಯಕರ್ತರಿಂದಾಗಿ ಅವರು ದೊಡ್ಡಮಟ್ಟದ ನಾಯಕರಾಗಿ ಬೆಳೆದಿದ್ದರು. ದೊಡ್ಡ ನಾಯಕರಾದವರು ಬೇರೆ ಕಾರ್ಯಕರ್ತರನ್ನು ಬೆಳೆಸಬೇಕಿತ್ತು. ಅದು ಅವರ ಜವಾಬ್ದಾರಿ, ಅವರೇ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಓರ್ವ ರಾಜಕಾರಣಿ ಪಡೆಯಬೇಕಾದ ಎಲ್ಲ ಹುದ್ದೆ ಶೆಟ್ಟರ್ ಅನುಭವಿಸಿದ್ದರು. ಮುಂದೆ ಚಿಕ್ಕವರು ಸಿಎಂ ಆಗುವ ಸಾಧ್ಯತೆ ಇದ್ದವು. ಅಂಥ ಚಿಕ್ಕವರ ಕೆಳಗೆ ಇಂಥ ಹಿರಿಯರು ಇರುವುದು ಸರಿ ಅಲ್ಲ, ಅದಕ್ಕೆ ಶೆಟ್ಟರ್ ಗೆ ರಾಜ್ಯಸಭೆಗೆ ಕಳಿಸಲು ರಾಷ್ಟ್ರೀಯ ನಾಯಕರು ನಿರ್ಧಾರ ಮಾಡಿದ್ದರು. ಅಲ್ಲಿಯೂ ಅವರಿಗೆ ದೊಡ್ಡ ಹುದ್ದೆ ಸಿಗುವುದಿತ್ತು. ಪಕ್ಷದಿಂದ ಅವರು ಮಾತ್ರ ಅಲ್ಲ ಅವರ ಮನೆಯವರು ಅನೇಕ ಹುದ್ದೆ ಅನುಭವಿಸಿದ್ದಾರೆ. ಅವರ ಸಹೋದರ ಎರಡು ಸಲ ಎಂಎಲ್ಸಿ ಆಗಿದ್ದಾರೆ. ಹುಬ್ಬಳ್ಳಿ ಧಾರವಾಡ ಕೆಲ ಕಾರ್ಯಕರ್ತರು ಪಕ್ಷಕ್ಕಾಗಿ ಬೆವರು ರಕ್ತ ಸುರಿಸಿದ್ದಾರೆ. ಕೆಲವರು ಗುಂಡೇಟು ತಿಂದು ಜೀವ ಕೊಟ್ಟಿದ್ದಾರೆ. ಅಂತಹ ಕಾರ್ಯಕರ್ತರ ವತಿಯಿಂದ ಒಬ್ಬರನ್ನು ಬೆಳೆಸಲು ಪಕ್ಷ ಈ ನಿರ್ಧಾರ ಮಾಡಿದೆ. ಶೆಟ್ಟರ್‌ಗೆ ಪಕ್ಷದ ಋಣ ಮತ್ತು ಶ್ರದ್ಧೆ ಇರಬೇಕಿತ್ತು ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದಿದ್ಯಾರು? ಚನ್ನಪಟ್ಟಣ ಕ್ಷೇತ್ರದಿಂದ ನಾನು ಉಮೇದುವಾರಿಕೆ ಸಲ್ಲಿಸಿದ್ದೇನೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದರು. ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಾನು ಸುಮಲತಾರಷ್ಟು ದೊಡ್ಡ ವ್ಯಕ್ತಿಯಲ್ಲ. ಮಂಡ್ಯದಲ್ಲಿ ಸಾಮಾನ್ಯ ರೈತ ಮನೆಯ ಮಗಳನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದರು.
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಹೇಳಿಕೆ ಪುನರುಚ್ಛರಿಸಿದ ನಳಿನ್ ಕುಮಾರ್ ಕಟೀಲ್, ನಾವು ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲಾ ಸಂಧರ್ಭದಲ್ಲಿ ಬಿಜೆಪಿ ಮಾತ್ರ ಲಿಂಗಾಯತರನ್ನ ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಾರ್ಟಿಗೂ ಆ ತಾಕತ್ತಿಲ್ಲ, ಇದ್ದರೆ ಘೋಷಣೆ ಮಾಡಲಿ. ಕಾಂಗ್ರೆಸ್ ಲಿಂಗಾಯತರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದರು. ಕಾಂಗ್ರೆಸ್ ಗೆ ಬಹಳ ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆ ಇದೆ
ಡಿಸೆಂಬರ್ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ. ನಾವು ಹತ್ತು ದಿವಸದಲ್ಲಿ ಅಭ್ಯರ್ಥಿ ಅಯ್ಕೆ ಪ್ರಕ್ರಿಯೆ ಮುಗಿಸಿದ್ದೇವೆ, ಅವರು ನಾಲ್ಕು ತಿಂಗಳಾಯ್ತು. ಅವರಿಗೆ ಅಭ್ಯರ್ಥಿ ಕೊರತೆ ಇದೆ, ನಮ್ಮ ಬಂಡುಕೋರರಾಗಿ ಹೊರ ಬರುವ ಅಭ್ಯರ್ಥಿಗಳನ್ನು ಕಾಯುತ್ತಿದ್ದಾರೆ. ಕಾಂಗ್ರೆಸ್ ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆ. ಅವರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಫೈಟ್ ನಡೆಯುತ್ತಾ ಇದೆ. ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಜೊತೆ ಈಗ ಪರಮೇಶ್ವರ್ ಕೂಡ ಸಿಎಂ ರೇಸ್ನಲ್ಲಿದ್ದಾರೆ ಎಂದರು.
ಬೆಳಗಾವಿ: ಅದ್ಧೂರ ಶಕ್ತಿ ಪ್ರದರ್ಶನ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ ಲಕ್ಷ್ಮಣ್ ಸವದಿ ಮನೆಗೆ ವಾಪಸ್ ಆಗಿದ್ದಾರೆ. ಇವರ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಸವದಿ, ಅನೇಕ ಕ್ಷೇತ್ರಗಳಿಗೆ ಬರಬೇಕು ಅಂತಾ ವರಿಷ್ಠರು ಸೂಚನೆ ನೀಡಿದ್ದಾರೆ. ನೀವೆಲ್ಲ ಲಕ್ಷ್ಮಣ್ ಸವದಿ ಆಗಬೇಕು, ಲಕ್ಷ್ಮಣ್ ಸವದಿ ಆಗಿ ಕೆಲಸ ಮಾಡಬೇಕು. ಐದು ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಆಗಬೇಕೋ ಆ ಎಲ್ಲ ಅಭಿವೃದ್ಧಿ ಮಾಡುತ್ತೇನೆ ಎಂದರು.
ಮಂಗಳೂರು: ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಅರುಣ್ ಕುಮಾರ್ ಪುತ್ತಲ ಬಂಡಾಯ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಬಹುದು. ತಮ್ಮ ಅಪೇಕ್ಷೆ ಈಡೇರದಿದ್ದಾಗ ನಾಮಪತ್ರ ಸಲ್ಲಿಸುತ್ತಾರೆ. ಪುತ್ತೂರು ಬಿಜೆಪಿಯ ಭದ್ರಕೋಟೆ, ಇಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಕಾರ್ಯಕರ್ತರು ರಾಷ್ಟ್ರೀಯ ವಿಚಾರಧಾರೆ ಜೊತೆ ಕೈಜೋಡಿಸುತ್ತಾರೆ. ಬಿಜೆಪಿ ಯಾವುದನ್ನೂ ವಿರೋಧಿಸುವುದಿಲ್ಲ, ನಮಗೆ ಗೆಲುವಾಗುತ್ತದೆ ಎಂದರು.
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ನನ್ನ ಗುರುಗಳು. ಅವರ ಆಶೀರ್ವಾದ ನನಗೆ ಬೇಕು. ಪಕ್ಷ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡಲಾಗಿದೆ, ನಮ್ಮ ಪಕ್ಷದಲ್ಲಿ ವ್ಯಕ್ತಿ ನಿಷ್ಠೆ ಇಲ್ಲ. ಏಕ ವ್ಯಕ್ತಿ ನಿರ್ಣಯ ಇಲ್ಲ, ಬಿ.ಎಲ್.ಸಂತೋಷ ಒಬ್ಬರಿಂದಲೇ ಆಗುವುದಿಲ್ಲ. ಸಂಸದೀಯ ಮಂಡಳಿಯಲ್ಲಿ ಟಿಕೆಟ್ ತೀರ್ಮಾನ ಮಾಡಲಾಗಿದೆ. ನಾನೂ ಜಗದೀಶ್ ಶೆಟ್ಟರ್ ಅವರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ಹೇಳಿದ್ದಾರೆ. ಇಂದು (ಏ.18) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನಕಾಯಿ ನಾಮಪತ್ರ ಸಲ್ಲಿಸಿದರು.
ಬಾಗಲಕೋಟೆ: ನಾಮಪತ್ರ ಸಲ್ಲಿಕೆ ಮುಗಿಯುವವರೆಗೆ ನಟ ಸುದೀಪ್ ಪ್ರಚಾರ ಮಾಡುವುದಿಲ್ಲ. ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯಾದ್ಯಂತ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿವಮೊಗ್ಗ: ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಆರಗ ಜ್ಞಾನೇಂದ್ರ ನಾಮಪತ್ರ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮೈಸೂರು: ಈಗ ಚುನಾವಣೆ ಬಂತೆಂದು ವರುಣದಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡಿದ್ದಾರೆ, ಸಿಎಂ ಬೊಮ್ಮಾಯಿ ನಂ.1 ಸುಳ್ಳುಗಾರ. ಗೋವಿಂದರಾಜನಗರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದರೆ ಏಕೆ ಓಡಿಸಿದ್ರು
ನನ್ನ ವಿರುದ್ಧ ವಿ.ಸೋಮಣ್ಣ ಸ್ಪರ್ಧೆ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.
ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆ ಮಾಡಿದ್ದೇನೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನನ್ನನ್ನು ಇಲ್ಲಿನ ಜನ ನೋಡಿದ್ದಾರೆ. ರಾಜಾಜಿನಗರ ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣವಿದೆ. ನಾನು ಸೇಡಿನ ರಾಜಕೀಯ ಮಾಡಿಲ್ಲ. ಮನೆಯ ವ್ಯಕ್ತಿಯಾಗಿ ಇಲ್ಲಿನ ಜನ ನೋಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು (ಏ.18) ಬಿಜೆಪಿ ಅಭ್ಯರ್ಥಿ, ಶಾಸಕ ಡಾ ಭರತ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.
ಶಿವಮೊಗ್ಗ: ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಬಾಗಲಕೋಟೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ತೊಂದರೆ ಇಲ್ಲ. ಲಿಂಗಾಯತರಿಗೆ ಸಮರ್ಪಕವಾಗಿ ಮನ್ನಣೆ ನೀಡಿದ್ದೇ ಬಿಜೆಪಿ. ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಾ ಬಂದಿದೆ. ಬಿಜೆಪಿ ಯಾರ ಕಪಿಮುಷ್ಠಿಯಲ್ಲೂ ಇಲ್ಲ, ಇದು ವ್ಯವಸ್ಥೆ ಬದ್ಧ ಪಕ್ಷ. ಎಲ್ಲವನ್ನೂ ಪರಿಶೀಲಿಸಿ ಹೈಕಮಾಂಡ್ ನಾಯಕರು ಟಿಕೆಟ್ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ. ಜಿಲ್ಲೆಯ ಮುಧೋಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ: ಕರ್ನಾಟಕ ರಾಜ್ಯದಲ್ಲಿ ನಮ್ಮ ಕಣ್ಮುಂದೆಯೇ ಬಿಜೆಪಿ ಹಾಳಾಗುತ್ತೆ. ಬಿಜೆಪಿಯವರು ಯಾಕೆ ಗ್ರೌಂಡ್ ರಿಪೋರ್ಟ್ ಕೊಡಲಿಲ್ಲ. ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ನನ್ನ ಕರೆದು ಮಾತಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿದೆ. ಕೆ.ಅಣ್ಣಾಮಲೈ ಅವರಿಗೆ ರಾಜ್ಯದ 1 ಕ್ಷೇತ್ರದ ಬಗ್ಗೆಯೂ ಮಾಹಿತಿ ಇಲ್ಲ. ಒಂದು ಚುನಾವಣೆ ಗೆಲ್ಲದಿರುವವರು ಚುನಾವಣಾ ಸಹ ಉಸ್ತುವಾರಿ. ನಮ್ಮ ಕೆಳಗೆ ಕೆಲಸ ಮಾಡಿದ ಅಧಿಕಾರಿ ಹಿಂದೆ ನಾವು ಕೂರಬೇಕು. ಕೋರ್ ಕಮಿಟಿಯಲ್ಲಿ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್. ಕಟೀಲು ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ಬಿ.ಎಲ್.ಸಂತೋಷ್ ಹೇಳಿದಂತೆ ನಳಿನ್ ಕುಮಾರ್ ಕೇಳುತ್ತಾರೆ. ಕಟೀಲು ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ವೈರಲ್ ಆಗಿತ್ತು. ಬಿಎಸ್ ಯಡಿಯೂರಪ್ಪ ಅವರ ಕಾಲ ಮುಗಿತು, ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಕಾಲ ಮುಗಿಸುತ್ತೇವೆ ಎಂದಿದ್ದರು. ಈಗ ಅದೇ ರೀತಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದರು.
ಹುಬ್ಬಳ್ಳಿ: ಬಿಜೆಪಿಯೊಳಗಿನ ವೇದನೆಯನ್ನುಸಹಿಸಕೊಂಡರೆ ಜಗದೀಶ್ ಶೆಟ್ಟರ್ ಅವರಿಗೆ ಮಾನ ಮರ್ಯಾದೆ ಇಲ್ಲ ಅಂತ ಕಾಣ್ತಾರೆ. ನಾನು 70 ವರ್ಷ ಆದ ಮೇಲೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ನನ್ನ ಕೊನೆ ಚುನಾವಣೆ ಎನ್ನುತ್ತಾ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಭಾವುಕಾರದರು. ಕಾಂಗ್ರೆಸ್ ನಾಯಕರಿಗೆ ನಾನು ಗೌರವದಿಂದ ನಡೆಸಿಕೊಳ್ಳಿ ಎಂದು ಹೇಳಿದ್ದೇನೆ. ಪಕ್ಷ ನಶಿಸಿ ಹೋಗುತ್ತಿದೆ. ಪಕ್ಷವನ್ನು ಮುಗಿಸಲು ಕಾಯುತ್ತಿದ್ದಾರೆ. ಬಿಎಲ್ ಸಂತೋಷ್ ಜೊತೆ ಒಂದೊಂದೆ ಹೆಸರು ಬರತ್ತೆ. ಬಿಎಲ್ ಸಂತೋಷ್ ಅವರಿಗೆ ಒಂದೇ ಹೇಳೋದು. ನಿಮ್ಮ ಮಾನಸ ಪುತ್ರನಿಗೆ ತೋರಿಸೋ ಪ್ರೀತಿ ನನಗೆ ಒಂದು ಪರ್ಸೆಂಟ್ ತೋರಸಬೇಕಿತ್ತು ಎಂದು ಹೇಳಿದರು.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ನನಗೆ ಟಿಕೆಟ್ ತಪ್ಪಲು ಮೂಲ ಕಾರಣ ಬಿ.ಎಲ್.ಸಂತೋಷ್. ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಸ್ಪರ್ಧೆ ಮಾಡಿದರೇ ಗೆಲ್ಲುತ್ತಾರೆ. ಆದರೆ ಎಸ್.ಎ.ರಾಮದಾಸ್ರವರು ಬಿ.ಎಲ್.ಸಂತೋಷ್ ಆಪ್ತರ ಅಲ್ಲ. ಈಗ ಟಿಕೆಟ್ ಸಿಕ್ಕಿರುವ ಶ್ರೀವತ್ಸ ಬಿ.ಎಲ್.ಸಂತೋಷ್ ಆಪ್ತರಾಗಿದ್ದಾರೆ. ಬಿ.ಎಲ್.ಸಂತೋಷ್ರನ್ನು ಕೇರಳದ ಉಸ್ತುವಾರಿಯಾಗಿ ಮಾಡಿದ್ದರು. ಸಂತೋಷ್ ಉಸ್ತುವಾರಿಯಾಗಿದ್ದಾಗ ಕೇರಳದಲ್ಲಿ 1 ಸ್ಥಾನವೂ ಬರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ 2-3 ಸೀಟ್ ಬಂತು ಅಷ್ಟೇ. ಇವತ್ತು ಕರ್ನಾಟಕದಲ್ಲಿ ಬಿ.ಎಲ್.ಸಂತೋಷ್ ಕಾರಬಾರು ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಶುರುವಾಗಿದೆಎಂದು ಬಿ.ಎಲ್.ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ಮಾಡಿದರು.
ಹುಬ್ಬಳ್ಳಿ: ನನಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ಧಾರೆ.
ಹುಬ್ಬಳ್ಳಿ: ನನಗೆ ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ನಾನು 2 ವರ್ಷಗಳ ಕಾಲ ಕೇವಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾನು ಮಂತ್ರಿ ಆಗಲಿಲ್ಲ. ಪಕ್ಷದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಗಟ್ಟಿ ನಿಲವು ಮಾಡಿಕೊಡಲು ನನ್ನ ಸೇವೆ ಇದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಮಾಜಿ ಸಂಸದ ಅನಂತ ಕುಮಾರ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಕಟ್ಟಿದ್ದನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಹಳೆ ದಿನಗಳನ್ನು ಮೆಲಕು ಹಾಕಿದರು.
ಹುಬ್ಬಳ್ಳಿ: ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ. ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಅಂದಿದ್ದೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ತುಮಕೂರು: ಕುಣಿಗಲ್ ಕ್ಷೇತದ ಪಕ್ಷೇತರ ಅಭ್ಯರ್ಥಿ ಬಿಬಿ ರಾಮಸ್ವಾಮಿ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಟಿಕೆಟ್ ಮತ್ತೆ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಹಾಗೂ ಶಾಸಕ ಡಾ ರಂಗನಾಥ್ ವಿರುದ್ಧ ರಾಮಸ್ವಾಮಿ ಗೌಡ ಬಂಡಾಯವೆದ್ದಿದ್ದಾರೆ.
ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಶ್ರೀನಿವಾಸಪುರ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಯಾರಿ ಕೊನೆ ಹಂತದಲ್ಲಿದೆ. ಕೊನೆಯ ಹಂತದ ಚರ್ಚೆ ಮುಗಿದ ತಕ್ಷಣ ಪ್ರಣಾಳಿಕೆ ಬಿಡುಗಡೆಯಾಗುತ್ತದೆ. ಕಾಂಗ್ರೆಸ್ ಕೊನೆ ಪಟ್ಟಿ ಬಿಡುಗಡೆ ಬಗ್ಗೆ ಅಧ್ಯಕ್ಷರು ಚರ್ಚಿಸುತ್ತಿದ್ದಾರೆ. ಇನ್ನು ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಅಧ್ಯಕ್ಷರು ಫೈನಲ್ ಮಾಡುತ್ತಾರೆ ಎಂದು ಡಾ.ಜಿ ಪರಮೇಶ್ವರ ಹೇಳಿದ್ದಾರೆ.
ಚಿಕ್ಕಮಗಳೂರು: ಕಡೂರು ಜೆಡಿಎಸ್ ಅಭ್ಯರ್ಥಿ ವೈ.ಎಸ್ವಿ ದತ್ತಾ ಪರ ಹೆಚ್ಡಿ ದೇವೇಗೌಡ ಅವರು ಪ್ರಚಾರ ಮಾಡಲಿದ್ದಾರೆ. ಇಂದು (ಏ.18) ದೇವೇಗೌಡರ ಸಮ್ಮುಖದಲ್ಲಿ ವೈಎಸ್ ವಿ ದತ್ತಾ ನಾಮಪತ್ರ ಸಲ್ಲಿಸಲಿದ್ದಾರೆ. ಎಪಿಎಂಸಿ ಮೈದಾನದಿಂದ ಕಡೂರು ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ವೈಎಸ್ವಿ ದತ್ತಾ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಂಗಳೂರು: ರಾಜಧಾನಿಯ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ವಿಪಕ್ಷನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಡಿಸಿಎಂ ಡಾ.ಪರಮೇಶ್ವರ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಪ್ರಣಾಳಿಕೆ ಬಿಡುಗಡೆ, ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಇಂದು (ಏ.18) ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದ್ದು, 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಬಹದು. ಉಳಿದ ಕ್ಷೇತ್ರಗಳಿಗೆ ಮೌಖಿಕವಾಗಿ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
Published On - 9:41 am, Tue, 18 April 23