ಕೊಪ್ಪಳ: ಅಥಣಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ(Laxman Savadi) ಅಸಮಾಧಾನಗೊಂಡಿದ್ದು, ಅವರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಸವದಿಯವರನ್ನು ಕಾಂಗ್ರೆಸ್‌ಗೆ ಕರೆತರಲು ಕೊಪ್ಪಳದ ಶಾಸಕರೊಬ್ಬರ ಮಧ್ಯಸ್ಥಿಕೆ ವಹಿಸಿದ್ದಾರೆ. ಹೀಗಂತ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್, ಲಕ್ಷ್ಮಣ ಸವದಿ ಅವರರೊಂದಿಗೆ ಇದ್ದ ಫೋಟೋ ವೈರಲ್ ಆಗುತ್ತಿದೆ. ಇನ್ನು ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸ್ವತಃ ಶಾಸಕ ರಾಘವೇಂದ್ರ ಹಿಟ್ನಾಳ್(raghavendra hitnal) ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿಯ ಅತಿರಥ ಲಕ್ಷಣ್ ಸವದಿಗೆ ಕಾಂಗ್ರೆಸ್ ಗಾಳ
ಈ ಬಗ್ಗೆ ಇಂದು(ಏಪ್ರಿಲ್ 13) ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಲಕ್ಷ್ಮಣ ಸವದಿ ಜೊತೆ ನಾನು ಯಾವುದೇ ಮಾತುಕತೆ ನಡೆಸಿಲ್ಲ. ವೈರಲ್ ಆಗುತ್ತಿರುವ ಫೋಟೋ ಸಿಂದಗಿ ಉಪಚುನಾವಣೆ ವೇಳೆ ತೆಗೆದಿದ್ದು. ಹಾಗೇನಾದರು ಇದ್ದರೆ ನಾನೇ ನಿಮಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು,. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೇಳುವುದಕ್ಕೆ ಆಗಲ್ಲ. ಸವದಿ ಸೀನಿಯರ್ ಲೀಡರ್, ರಾಜಕಿಯದಲ್ಲಿ ಅನುಭವ ಇದೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ನಮಗೆ ಲಾಭ ಆಗುತ್ತೆ ಎಂದರು.
ಗಾಣಿಗ ಸಮುದಾಯದ ಜಿಲ್ಲಾ ಅದ್ಯಕ್ಷರನ್ನ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ನಮ್ಮ ಪಕ್ಷಕ್ಕೆ ಸೇರಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸಿದ್ದೆನೆ. ಬೇರೆ ಬೇರೆ ಮತಕ್ಷೇತ್ರದ ಟಿಕೇಟ್ ಗಳ ಬಗ್ಗೆ ಭೇಟಿಯಾಗಿದ್ದು ನಿಜ ಎಂದು ಹೇಳಿದರು.
ಅಥಣಿ ಕ್ಷೇತ್ರದಿಂದ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈ ತಪ್ಪಿದ್ದು ಬಿಜೆಪಿ ವಿರುದ್ಧ ಸವದಿ ರೆಬೆಲ್ ಆಗಿದ್ದಾರೆ. ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ, ಅಲ್ಲದೇ ಪಕ್ಷ ಬಿಡುವುದಾಗಿ ಹೇಳಿದ್ದಾರೆ. ಇನ್ನು ಲಕ್ಷ್ಮಣ್ ಸವದಿ ಅಸಮಾಧಾನ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸವದಿಯನ್ನು ಸಂಪರ್ಕಿಸಿದ್ದು, ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಅರ್ಧ ಗಂಟೆಗಯೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ ಹಳೇ ಸ್ನೇಹಿತರು ಹೊಸ ಲೆಕ್ಕಾಚಾರ ಹಾಕಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರಾ ಎಂಬ ಅನುಮಾನ ಮೂಡಿದೆ.