ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ: ಕುಮಾರಸ್ವಾಮಿ ಘೋಷಣೆ

|

Updated on: Apr 10, 2023 | 4:52 PM

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ನಾಯಕ ಕುಮಾರಸ್ವಾಮಿ ರೈತರನ್ನು ಮದುವೆಯಾಗುವ ವಿಚಾರದಲ್ಲಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅಲ್ಲದೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ: ಕುಮಾರಸ್ವಾಮಿ ಘೋಷಣೆ
ಹೆಚ್​​ ಡಿ ಕುಮಾರಸ್ವಾಮಿ
Image Credit source: File photo
Follow us on

ಕೋಲಾರ: ರೈತ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ ಅನ್ನೋದಿದೆ. ರಾಜ್ಯದಲ್ಲಿ ಜೆಡಿಎಸ್ (JDS) ಸರ್ಕಾರ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ (JDS Convention) ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿರುವ ಸ್ತ್ರೀ ಶಕ್ತಿ ಸಂಘಗಳ ಸಾಲ‌ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜೇಬು ತುಂಬಿಸಿಕೊಂಡಿದ್ದಾರೆ. ಆ ಹಣದಿಂದಲೇ ಅವರು ಚುನಾವಣೆಗೆ ಹೋಗುತ್ತಿದ್ದಾರೆ ಎಂದರು. ಯರಗೋಳ್ ನೀರಾವರಿ ಯೋಜನೆಗೆ ವಿಷಯುಕ್ತ ಕೆಸಿ ವ್ಯಾಲಿ ನೀರಾವರಿ ಯೋಜನೆ‌ ನೀರನ್ನು ಸೇರಿಸಲು ಹೊರಟಿದ್ದಾರೆ. ನಮ್ಮ ಸರ್ಕಾರ ಬಂದರೆ ಶುದ್ಧೀಕರಿಸಿ ಕುಡಿಯುವ ನೀರು ಕೊಡುತ್ತೇವೆ. ನಾನು ಶಪಥ ಮಾಡಿದ್ದೇನೆ ಮುಂದೆ ನಮ್ಮ ಸರ್ಕಾರ ಬಂದರೆ ಮೂರನೇ ಹಂತದ ಶುದ್ದೀಕರಣ ಮಾಡಿ ಶುದ್ದ ಕುಡಿಯುವ ನೀರು ಕೊಡುತ್ತವೆ ಎಂದರು.

ಇದನ್ನೂ ಓದಿ: Karnataka Assembly Polls: ಹೆಚ್ ಡಿ ಕುಮಾರಸ್ವಾಮಿಯ ಹೆಲಿಕಾಪ್ಟರ್ ಕಾಯುತ್ತಿದ್ದ ಪೊಲೀಸರು ಅದರ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡರು!

ಸದ್ಯ ಚುನಾವಣೆ ಕಾವು ನಡುವೆ ಮೀಸಲಾತಿ ಚರ್ಚೆ, ಗೊಂದಲಗಳು ಹುಟ್ಟುಕೊಂಡಿವೆ. ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಅದರಂತೆ ಮೀಸಲಾತಿ ವಿಚಾರದಲ್ಲಿ ಬಿಜೆಪಿಯನ್ನು ಟೀಕಿಸಿದ ಕುಮಾರಸ್ವಾಮಿ, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಹುಡುಗಾಟ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಗೊಂದಲ ಸರಿಪಡಿಸುತ್ತೇವೆ. ಮುಸ್ಲಿಮರ ಮೀಸಲಾತಿಯನ್ನೂ ಕೂಡ ಸರಿಪಡಿಸುತ್ತೇವೆ ಎಂದರು.

ಜೆಡಿಎಸ್ ಸಮಾವೇಶಕ್ಕೆ ಬರುವ ಜನರ ಬೈಕ್​​ಗಳಿಗೆ ಫ್ರೀ ಪೆಟ್ರೋಲ್

ಪಕ್ಷದ ಸಮಾವೇಶ, ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದರಂತೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಆಗಮಿಸುವ ಜನರ ಬೈಕ್​​ಗಳಿಗೆ ಉಚಿತ ಪೆಟ್ರೋಲ್ ವ್ಯವಕಸ್ಥೆ ಕಲ್ಪಿಸಲಾಗಿದೆ. ಶಿನಿಗೇನಹಳ್ಳಿ ಬಳಿ ಇರುವ ರೇಣಿಕಾಯಲ್ಲಮ್ಮ ನಯಾರ ಪೆಟ್ರೋಲ್ ಬಂಕ್​​ನಲ್ಲಿ ಪ್ರತಿ ಬೈಕ್​​ಗೆ 100 ರೂ. ಪೆಟ್ರೋಲ್​ ಅನ್ನು ಉಚಿತವಾಗಿ ಹಾಕುವ ಮೂಲಕ ಜನರನ್ನು ಸಮಾವೇಶಕ್ಕೆ ಸೆಳೆಯುವ ಪ್ರಯತ್ನ ಮಾಡಲಾಯಿತು.

ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Mon, 10 April 23