Karnataka Elections 2023: ಚುನಾವಣಾ ಮತಗಟ್ಟೆ ಏಜೆಂಟ್​ಗಳಲ್ಲಿ ಸನ್ನದ್ಧತೆ ಕೊರತೆ; ಮತದಾರರಿಗೆ ಸಿಗುತ್ತಿಲ್ಲ ಸರಿಯಾದ ಮಾರ್ಗದರ್ಶನ

ಇತ್ತೀಚಿಗೆ ಅಷ್ಟೇ ನೀವು ವೋಟರ್ ಐಡಿ ಇಲ್ಲದಿದ್ದರೂ ಆಧಾರ್ ಕಾರ್ಡ್ ಅಥವಾ ಇತರ 12 ಐಡಿ ಪ್ರೊಫ್ ಇದ್ದರೆ ಮತ ಚಲಾಯಿಸಬಹುದು ಎಂಬ ಮಾಹಿತಿ ಚುನಾವಣಾ ಆಯೋಗ ನೀಡಿತ್ತು, ಆದರೆ ನಿಜವಾಗಿಯೂ ಮತಗಟ್ಟೆಯಲ್ಲಿ ಇದನ್ನು ಬಳಸಲು ಅನುಮತಿಸುತ್ತಿದ್ದಾರಾ? ನನಗಾದ ಅನುಭವ ಇಲ್ಲಿ ಹಂಚಿಕೊಂಡಿದ್ದೇನೆ.

Karnataka Elections 2023: ಚುನಾವಣಾ ಮತಗಟ್ಟೆ ಏಜೆಂಟ್​ಗಳಲ್ಲಿ ಸನ್ನದ್ಧತೆ ಕೊರತೆ; ಮತದಾರರಿಗೆ ಸಿಗುತ್ತಿಲ್ಲ ಸರಿಯಾದ ಮಾರ್ಗದರ್ಶನ
ಸಾಂದರ್ಭಿಕ ಚಿತ್ರ

Updated on: May 10, 2023 | 4:41 PM

ಇಂದು ಬೆಳಿಗ್ಗೆ ನಮ್ಮ ಮತದಾನದ (Karnataka Elections 2023) ಹಕ್ಕನ್ನು ಚಲಾಯಿಸಲು ನಾನು ನನ್ನ ತಾಯಿಯೊಂದಿಗೆ ನಮ್ಮ ಮತಗಟ್ಟೆಗೆ (Polling Booth) ಹೋದಾಗ ಆದ ಅನುಭವ ಪೋಲಿಂಗ್ ಏಜೆಂಟ್ (Polling Agent) ಅಥವಾ ಅಧಿಕಾರಿಗಳಿಗೆ ಚುನಾವಣೆಯ ಕುರಿತು ಎಷ್ಟು ಜ್ಞಾನವಿದೆ, ಎಂಬುದನ್ನು ತಿಳಿಸುತ್ತದೆ. ಈ ರೀತಿ ಅದೆಷ್ಟು ಜನರು ಚುನಾವಣಾ ಮತಗಟ್ಟೆಯಲ್ಲಿ ಇಂತಹ ಕಷ್ಟ ಎದುರಿಸಿದ್ದಾರೋ ಗೊತ್ತಿಲ್ಲ. ಇತ್ತೀಚಿಗೆ ಅಷ್ಟೇ ನೀವು ವೋಟರ್ ಐಡಿ ಇಲ್ಲದಿದ್ದರೂ ಆಧಾರ್ ಕಾರ್ಡ್ ಅಥವಾ ಇತರ 12 ಐಡಿ ಪ್ರೊಫ್ ಇದ್ದರೆ ಮತ ಚಲಾಯಿಸಬಹುದು ಎಂಬ ಮಾಹಿತಿ ಚುನಾವಣಾ ಆಯೋಗ ನೀಡಿತ್ತು, ಆದರೆ ನಿಜವಾಗಿಯೂ ಮತಗಟ್ಟೆಯಲ್ಲಿ ಇದನ್ನು ಬಳಸಲು ಅನುಮತಿಸುತ್ತಿದ್ದಾರಾ? ನನಗಾದ ಅನುಭವ ಇಲ್ಲಿ ಹಂಚಿಕೊಂಡಿದ್ದೇನೆ.

ನನ್ನ ಬಳಿ ನನ್ನ ವೋಟರ್ ಐಡಿ ಮತ್ತು ಇಪಿಐಸಿ ನಂಬರ್ ಇತ್ತು, ಆದರೆ ನನ್ನ ತಾಯಿ ಇತ್ತೀಚೆಗೆ ತಮ್ಮ ವೋಟರ್ ಐಡಿ ಕಳೆದುಕೊಂಡಿದ್ದರಿಂದ ಇಪಿಐಸಿ ನಂಬರ್ ನಮಗೆ ತಿಳಿದಿರಲಿಲ್ಲ. ಚುನಾವಣಾ ಆಯೋಗವು ಒದಗಿಸಿದ 12 ದಾಖಲೆಗಳ ಪಟ್ಟಿಯಿಂದ ಮತದಾರರು ಯಾವುದೇ ಒಂದು ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಮತದಾರರ ಪಟ್ಟಿಯಲ್ಲಿ ನನ್ನ ತಾಯಿಯ ಹೆಸರನ್ನು ಪರಿಶೀಲಿಸಲು ಹೋದೆವು. ಕಳೆದ ಬಾರಿ ಚಿಕ್ಕಲಸಂದ್ರದ, ಡೆಕ್ಕನ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಇದ್ದ ಕಾರಣ ಈ ಬಾರಿಯೂ ಅಲ್ಲೇ ಹೊರಗಿ ಪರಿಶೀಲಿಸಲು ನಿರ್ಧರಿಸಿದೆವು.

ಇಪಿಐಸಿ ಸಂಖ್ಯೆ ಇಲ್ಲದೇ ನನ್ನ ತಾಯಿಯ ಹೆಸರನ್ನು ಪರಿಶೀಲಿಸುವುದು ಹೇಗೆ ಎಂದು ಅಲ್ಲಿನ ಅಧಿಕಾರಿಗಳಿಗೆ ಅರಿವಿರಲಿಲ್ಲ. ನನ್ನ ಮತಗಟ್ಟೆ ಸೇಂಟ್ ಡೊಮಿನಿಕ್ ಶಾಲೆ ಆದ್ದರಿಂದ ನನ್ನ ತಾಯಿ ಅವರದ್ದೂ ಅಲ್ಲೇ ಇರಬಹುದು ಎಂದು ನಮ್ಮನ್ನು ಅಲ್ಲಿಗೆ ಹೋಗುವಂತೆ ಹೇಳಿದರು. ಅಲ್ಲಿಗೆ ತೆರಳಿದ ನಂತರ ನನ್ನ ಬಳಿ ವೋಟರ್ ಐಡಿ ಇದ್ದ ಕಾರಣ ಸುಮಾರು ಅರ್ಧ ಗಂಟೆ ಒಳಗೆ ಮತ ಚಲಾಯಿಸಿ ಹೊರಗೆ ಬಂದೆ.

ಆದರೆ, ನನ್ನ ತಾಯಿಯ ಹೆಸರನ್ನು ಪರಿಶೀಲಿಸಲು ನಾವು ಸೇಂಟ್ ಡೊಮಿನಿಕ್ ಶಾಲೆಯ ಮತಗಟ್ಟೆ ಏಜೆಂಟ್‌ರೊಬ್ಬರನ್ನು ಸಂಪರ್ಕಿಸಿದಾಗ, ಅವರು ಆಧಾರ್ ಕಾರ್ಡ್ ಹೊಂದಿದ್ದರೂ, ಅವರ ವೋಟರ್ ಐಡಿ ಇಲ್ಲದೆ ಮತದಾನ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದರು. ಪಟ್ಟಿಯಲ್ಲಿ ಅವರ ಹೆಸರನ್ನು ಪರಿಶೀಲಿಸಲು ನಾವು ಅವರನ್ನು ವಿನಂತಿಸಿದೆವು, ಆದರೆ ಇಪಿಐಸಿ ನಂಬರ್ ಇಲ್ಲದೆ ಏನು ಮಾಡೋದಕ್ಕೆ ಆಗಲ್ಲ ಅಂದು ಹೇಳಿ ಕಳುಹಿಸಿದರು. ನನ್ನ ತಾಯಿಯವರು ಮತವನ್ನು ಚಲಾಯಿಸದೆ ಮನೆಗೆ ಮರಳಬೇಕಾಯಿತು.

ಈ ಘಟನೆಯು ಮತಗಟ್ಟೆಗಳಲ್ಲಿ ಅಧಿಕಾರಿಗಳು ಮತ್ತು ಏಜೆಂಟರಲ್ಲಿ ಸನ್ನದ್ಧತೆ ಮತ್ತು ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅವರು ಸುಶಿಕ್ಷಿತರಾಗಿರುವುದು ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಮತದಾರರು ಯಾವುದೇ ತೊಂದರೆ ಇಲ್ಲದೆ ತಮ್ಮ ಮತಗಳನ್ನು ಚಲಾಯಿಸಲು ಸಹಾಯ ಮಾಡುವುದು ಬಹಳ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವುದರಿಂದ ಇದು ವಿಶೇಷವಾಗಿ ಮುಖ್ಯವಾಗಿದೆ.

ಒಬ್ಬ ನಾಗರಿಕನಾಗಿ, ಅಧಿಕಾರಿಗಳು ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಚೆನ್ನಾಗಿ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ನಾನು ನಂಬುತ್ತೇನೆ. ಇದಲ್ಲದೆ, ಅಂತಹ ಸಂದರ್ಭಗಳನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಬೇಕು ಮತ್ತು ಮತದಾರರು ಯಾವುದೇ ಅಡೆತಡೆ ಅಥವಾ ಗೊಂದಲವಿಲ್ಲದೆ ಮತ ಚಲಾಯಿಸಲು ಸಹಾಯ ಮಾಡಬೇಕು.

ಇದನ್ನೂ ಓದಿ: ಮತಗಟ್ಟೆ ಮುಂದೆ ಧರಣಿ ಕುಳಿತ ಅಜ್ಜಿ; ಕಾರಣವೇನು? ಇಲ್ಲಿದೆ ನೋಡಿ

ಈ ಅನುಭವವು ನನಗೆ ನಿರಾಶೆಯನ್ನುಂಟು ಮಾಡಿದೆ, ಮತ್ತು ಚುನಾವಣಾ ಆಯೋಗವು ಮತಗಟ್ಟೆಗಳಲ್ಲಿ ಅಧಿಕಾರಿಗಳು ಮತ್ತು ಏಜೆಂಟ್ ಗಳು ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ತಯಾರಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಆಗ ಮಾತ್ರ ನಾವು ಸುಗಮ ಮತ್ತು ನ್ಯಾಯಸಮ್ಮತವಾದ ಮತದಾನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಬಹುದು, ಇದು ಆರೋಗ್ಯಕರ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ನಿರ್ಣಾಯಕವಾಗಿದೆ.

Published On - 12:04 pm, Wed, 10 May 23