ಪಕ್ಷ ಬಿಟ್ಟು ಹೋದವರ ವಿರುದ್ಧ ಯಡಿಯೂರಪ್ಪ ಗುಟುರು: ಮುಂದೆ ಇವರ ಬಂಡವಾಳ ಬಯಲು ಮಾಡ್ತೇವೆ, ಸವದಿ, ಶೆಟ್ಟರ್ ವಿರುದ್ಧ ವಾಗ್ದಾಳಿ

|

Updated on: Apr 16, 2023 | 2:20 PM

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೆ ಮಾಜಿ ಸಿಎ. ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಇದಕ್ಕೆ ಕ್ಷಮೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೈ ತಪ್ಪಿದ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ. ಒಬ್ಬೊಬ್ಬರಾಗಿ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೆ ಮಾಜಿ ಸಿಎ. ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತೀಯ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಹಳೇ ಬೇರು, ಹೊಸ ಚಿಗುರು ಸೇರಿ ಪಕ್ಷ ಬಲಪಡಿಸಬೇಕಾಗಿದೆ ಎಂದರು.

ಮಾತು ಮುಂದುವರೆಸಿದ ಬಿಎಸ್ ಯಡಿಯೂರಪ್ಪ, ನನಗೆ, ಜಗದೀಶ್ ಶೆಟ್ಟರ್​ಗೆ, ಲಕ್ಷ್ಮಣ ಸವದಿಗೆ ಪಕ್ಷ ಹಲವು ಅವಕಾಶ ನೀಡಿದೆ. ಸವದಿಯನ್ನು ಬಿಜೆಪಿಗೆ ಕರೆತಂದು ಶಾಸಕ, ಸಚಿವ ಮಾಡಿದ್ದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸವದಿ ಸೋತಿದ್ದರು. ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೆವು. 10 ತಿಂಗಳ ಹಿಂದೆ ಎಂಎಲ್​ಸಿಯಾಗಿ ಮರುನೇಮಕಾತಿ ಮಾಡಿದಾಗ ಇನ್ನೂ 5 ವರ್ಷ ಅಧಿಕಾರವಧಿ ಇರುವಾಗ ಬಿಜೆಪಿ ತೊರೆದರು. ಬಿಜೆಪಿಯಲ್ಲಿ ಎಲ್ಲಾ ಸ್ಥಾನಮಾನ ಅನುಭವಿಸಿ ತೊರೆದಿದ್ದಾರೆ. ನಿಮಗೆ ಬಿಜೆಪಿ ಏನು ಅನ್ಯಾಯ ಮಾಡಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲಕ್ಷ್ಮಣ್ ಸಾವದಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Karnataka Assembly Election: ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ: ಅಶ್ವತ್ಥ್ ನಾರಾಯಣ್ ಗೌಡ

ಜನಸಂಘದ ಕಾಲದಿಂದಲೂ ಜಗದೀಶ್​ ಶೆಟ್ಟರ್​ ಬಿಜೆಪಿಯಲ್ಲಿದ್ದರು. ಶೆಟ್ಟರ್​ರನ್ನು ಶಾಸಕ, ಸಚಿವ, ವಿಪಕ್ಷ ನಾಯಕ, ಸಿಎಂ ಮಾಡಿದ್ದೆವು. ಜಗದೀಶ್​ ಶೆಟ್ಟರ್​ಗೆ ನಾನು, ಅನಂತಕುಮಾರ್​ ಕಾವಲಾಗಿದ್ದೆವು. ನನ್ನ ಜತೆ ಹೆಜ್ಜೆಹಾಕುವ ಜವಾಬ್ದಾರಿ ಜಗದೀಶ್ ಶೆಟ್ಟರ್​ಗೆ ಇತ್ತು. ಪಕ್ಷದ ಸಹಕಾರ ಇಲ್ಲದಿದ್ದರೆ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಆಗಲ್ಲ. ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಏನು ಕಡಿಮೆ ಮಾಡಿದ್ದೆವು. ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಇದಕ್ಕೆ ಕ್ಷಮೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತ ಮಾಡುವೆ

ನನ್ನ ಸಂಪೂರ್ಣ ಬದುಕನ್ನು ಬಿಜೆಪಿ, ದೇಶಕ್ಕೆ ಮುಡಿಪಿಟ್ಟಿದ್ದೇನೆ. BJP ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಈ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ. ಎಲ್ಲಾ ಸಮುದಾಯಗಳ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಕೇವಲ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿದೆ. ಮೀಸಲಾತಿ ಹೆಚ್ಚಿಸಿ ಅನೇಕ ದಶಕಗಳ ಬೇಡಿಕೆ ಈಡೇರಿಸಿದ್ದೇವೆ. ಬಿಜೆಪಿ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನಮಾನ ನೀಡಿದೆ. ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್​ಗೆ ಹೇಳಿದ್ದೀವಾ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಧರ್ಮೇಂದ್ರ ಪ್ರಧಾನ್​ ಹೇಳಿದ್ದಾರೆ. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಪ್ರಧಾನ್ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್​ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್​ಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತಾಡಲ್ಲ. ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ. ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತ ಮಾಡುವೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:30 pm, Sun, 16 April 23