ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಮತ್ತೆ ಗರಂ: ರಾಜ್ಯ ನಾಯಕರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ ಲಿಂಗಾಯತ ಮಹಾಸಭಾ

|

Updated on: Apr 02, 2023 | 3:18 PM

ಬೆಂಗಳೂರಲ್ಲಿ ಲಿಂಗಾಯತ ಸಮುದಾಯಕ್ಕೆ ಒಂದೂ ಟಿಕೆಟ್​ ನೀಡಿಲ್ಲ. ಲಿಂಗಾಯತ ಮಠಾಧೀಶರ ಮಾತಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ‌ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲಿಂಗಾಯತ ಮಹಾಸಭಾ ಆಕ್ರೋಶದಿಂದ ಪತ್ರ ಬರೆದಿದೆ.

ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಮತ್ತೆ ಗರಂ: ರಾಜ್ಯ ನಾಯಕರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ ಲಿಂಗಾಯತ ಮಹಾಸಭಾ
ಅಖಿಲ ಭಾರತ ವೀರಶೈವ ಮಹಾಸಭಾ (ಎಡಚಿತ್ರ) ಕಾಂಗ್ರೆಸ್​ (ಬಲಚಿತ್ರ)
Follow us on

ಬೆಂಗಳೂರು: ಪ್ರತಿ ವಿಧಾನಸಭೆ ಚುನಾವಣೆಯಲ್ಲೂ (Karnataka Assembly Election) ಜಾತಿ ಆಧಾರದ ಮೇಲೆಯೇ ಟಿಕೆಟ್​ ಹಂಚಿಕೆ ಆಗುವುದು ಸಹಜ. ಆದರೆ ಈ ಬಾರಿ ಇದು ಜೋರಾಗಿಯೇ ನಡೆದಿದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯದ (Lingayat) ಮತಗಳು ನಿರ್ಣಾಯಕವಾಗಿದೆ. ಪ್ರತಿ ಬಾರಿ ಟಿಕೆಟ್​ ಹಂಚಿಕೆ ವಿಚಾರ ಬಂದಾಗ ಲಿಂಗಾಯತ ಸಮುದಾಯ ಮುನ್ನಲೆಗೆ ಬರುತ್ತದೆ. ಈ ಸಮುದಾಯ ಕೂಗು ಸಹಜವಾಗಿ ಬಿಜೆಪಿ (BJP) ಪಾಳಯದಲ್ಲಿ ಇರುತ್ತದೆ. ಆದರೆ ಈ ಬಾರಿ, ಕೂಗು ಕಾಂಗ್ರೆಸ್​ನಲ್ಲಿ (Congress) ಕೇಳಿಬಂದಿದೆ. ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್​ ನೀಡಬೇಕೆಂದು ಲಿಂಗಾಯತ ಮಹಾಸಭಾ (Lingayat Mahasabha) ಒತ್ತಾಯಿಸಿದೆ. ಈ ಹಿಂದೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಇನ್ನಿತರೆ ಲಿಂಗಾಯತ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿ ಲಿಂಗಾಯತರಿಗೆ ಹೆಚ್ಚಿನ ಟಿಕೆಟ್​ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಇದರಂತೆ ಕಾಂಗ್ರೆಸ್​ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ, ಇದರಲ್ಲಿ 30 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ. ಆದರೆ ಬೆಂಗಳೂರಲ್ಲಿ ಲಿಂಗಾಯತ ಸಮುದಾಯಕ್ಕೆ ಒಂದೂ ಟಿಕೆಟ್​ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ಸಾವಿರಾರು ಕೋಟಿ ಹಣ, ಹೆಂಡ, ವಸ್ತು ಜಪ್ತಿ, ಇಲ್ಲಿದೆ ಅಂಕಿ-ಅಂಶ

ಅಲ್ಲದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ‌ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲಿಂಗಾಯತ ಮಹಾಸಭಾ ಆಕ್ರೋಶದಿಂದ ಪತ್ರ ಬರೆದಿದೆ. ಲಿಂಗಾಯತ ಮಠಾಧೀಶರ ಮಾತಿಗೆ ಮನ್ನಣೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯಕ್ಕೆ ಒಂದೇ ಟಿಕೇಟ್ ನೀಡಿಲ್ಲ. 2ನೇ ಪಟ್ಟಿಯಲ್ಲೂ ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಇದರ ಸಾಧಕ-ಬಾಧಕಗಳನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ರಾಜ್ಯ ನಾಯಕರಿಗೆ ಪತ್ರದ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಹಾಗೂ ಲಿಂಗಾಯತ ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ.

ಇನ್ನು ಕಾಂಗ್ರೆಸ್​ ಉಳಿದ 100 ಅಭ್ಯರ್ಥಿಗಳ 2ನೇ ಪಟ್ಟಿ ಸಿದ್ದವಾಗಿದ್ದು, ಏಪ್ರಿಲ್​ 4 ರಂದು ನಡೆಯುವ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮಗೊಂಡು ಪಟ್ಟಿ ಬಿಡುಗಡೆಯಾಗಬೇಕಿದೆ. ಈ ಮೊದಲೆ ಲಿಂಗಾಯತ ಮಹಾಸಭಾ ಕಾಂಗ್ರೆಸ್​ ವಿರುದ್ಧ ಅಸಮಾಧಾನ ಹೊರಹಾಕಿದೆ. ಮತ್ತು ಕಾಂಗ್ರೆಸ್​ ಎಷ್ಟು ಜನ ಲಿಂಗಾಯತ ಅಭ್ಯರ್ಥಿಗಳಿಗೆ ಮಣೆ ಹಾಕುತ್ತೆ ಕಾದು ನೋಡಬೇಕಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಶೇ 37 ರಷ್ಟು ಲಿಂಗಾಯತರು ಜಯ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 43 ಸಮುದಾಯದ ಸದಸ್ಯರನ್ನು ಕಣಕ್ಕಿಳಿಸಿತ್ತು, ಅವರಲ್ಲಿ 16 ಜನರು ಗೆದ್ದರು, ಶೇಕಡಾ 37 ರಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸಿದರು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿ ಎಂ ಬಿ ಪಾಟೀಲ್ ಪ್ರಚಾರ ಮಾಡಿದ ಪ್ರತ್ಯೇಕ ಧಾರ್ಮಿಕ ಸ್ಥಾನಮಾನದ ವಿಷಯವೂ ಒಂದು ಅಂಶವಾಗಿತ್ತು.

ಕಾಂಗ್ರೆಸ್​ ಜಾತಿವಾರು ಟಿಕೆಟ್ ಹಂಚಿಕೆ ಪಟ್ಟಿ ಇಲ್ಲಿದೆ

ಲಿಂಗಾಯತ – 30, ಎಸ್‌ಸಿ -23, ಎಸ್‌ಟಿ -10, ಒಕ್ಕಲಿಗ – 22, ಮುಸ್ಲಿಂ -8, ಕುರುಬ -5, ಈಡಿಗ – 5, ರೆಡ್ಡಿ – 2, ಬ್ರಾಹ್ಮಣ – 5, ಮರಾಠ -2, ರಜಪೂತ್ -1, ಕುಂಬಾರ – 1, ಬಂಟ್ಸ್ – 1, ಕ್ರಿಶ್ಚಿಯನ್ – 1, ಬೆಸ್ತ – 1, ಇತರೆ -7 ಜನರಿಗೆ ಟಿಕೆಟ್​ ನೀಡಿದೆ.

ಇನ್ನಷ್ಟು ರಾಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:17 pm, Sun, 2 April 23