ಲೋಕಾಯುಕ್ತ ಭರ್ಜರಿ ಬೇಟೆ: ಬಿಬಿಎಂಪಿ ಹೆಚ್ಚುವರಿ ನಿರ್ದೇಶಕ ಗಂಗಾಧರಯ್ಯ ಮನೆಯಲ್ಲಿ ಸಿಕ್ತು ವಿದೇಶಿ ಕರೆನ್ಸಿ, ನಗದು, ಚಿನ್ನ!

|

Updated on: Apr 24, 2023 | 3:12 PM

ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಲೋಕಾಯುಕ್ತ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ.

ಬೆಂಗಳೂರು: ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ದಾಳಿ ನಡೆದಿದ್ದು ಬೆಳ್ತಂಗಡಿಯ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ ಮನೆ, ಪ್ರಸನ್ನ ಇನ್ಸ್ಟಿಟ್ಯೂಷನ್​​, ಇಂದುಬೆಟ್ಟುವಿನ ಮನೆಯಲ್ಲಿ 20ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮುಂದುವರೆದಿದೆ.

ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆಯಲ್ಲೂ ನಗದು ಪತ್ತೆ

ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆಯಲ್ಲಿ ಪರಿಶೀಲನೆ ಮುಂದುವರೆದಿದ್ದು ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ನಗದು, ಚಿನ್ನಾಭರಣ,ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಲೋಕಾಯುಕ್ತ ತಂಡ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದೆ. ವಿದೇಶಿ ಕರೆನ್ಸಿ ಕೂಡ ಮನೆಯಲ್ಲಿ ಪತ್ತೆಯಾಗಿದ್ದು 80 ಲಕ್ಷ ನಗದು ಹಣ, 50 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಕೆಲ ಕಡೆ ಲೋಕಾಯುಕ್ತ ದಾಳಿ: ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ರೇಡ್, ದಾಖಲೆ ಪರಿಶೀಲನೆ

ಇಓ ವೆಂಕಟೇಶಪ್ಪ ಮನೆಯಲ್ಲಿ ಹಣ ಪತ್ತೆ

ಕೋಲಾರ ಜಿಲ್ಲೆ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ತಾ.ಪಂ. ಇಒ ವೆಂಕಟೇಶಪ್ಪ ಮನೆಗಳಲ್ಲಿ ಪರಿಶೀಲನೆ ಮುಂದುವರಿದಿದೆ. ಇಓ ವೆಂಕಟೇಶಪ್ಪ ಅವರಿಗೆ ಸೇರಿದ ಮನೆ, ಗೋಡೋನ್, ಹಾರ್ಡ್ ವೇರ್ ಶಾಪ್, ಕೋಳಿಫಾರಂ, ಪಾರ್ಮ್ ಹೌಸ್, ಐದಕ್ಕೂ ಹೆಚ್ಚು ಖಾಲಿ ನಿವೇಶನಗಳು, ಚಿನ್ನದ ಒಡವೆಗಳು, ಸೇರಿದಂತೆ ಮನೆಯಲ್ಲಿ ಸಾವಿರಾರು ರೂಪಾಯಿ ನಗದು ಪತ್ತೆಯಾಗಿದೆ. ನಾಲ್ಕು ಅಧಿಕಾರಿಗಳ ತಂಡದಿಂದ ಪರಿಶೀಲನೆ ಮುಂದುವರೆದಿದೆ.

ವನ್ಯಜೀವಿ ವಿಭಾಗದ ನಿವೃತ್ತ ಡಿಸಿಎಫ್​ ನಾಗರಾಜ್ ಮನೆಯಲ್ಲಿ ಆನೆ ದಂತ ಪತ್ತೆ

ಶಿವಮೊಗ್ಗ ನಗರದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವನ್ಯಜೀವಿ ವಿಭಾಗದ ನಿವೃತ್ತ ಡಿಸಿಎಫ್​ ನಾಗರಾಜ್ ಮನೆಗಳ ಮೇಲೆ ರೇಡ್ ಆಗಿದೆ. ಶಿವಮೊಗ್ಗ ನಗರ ಸಾಗರ ರಸ್ತೆಯ ಬಳಿ ಮನೆ, ಫಾರ್ಮ್​ ಹೌಸ್​, ಶಿವಮೊಗ್ಗದ ಗುಡ್ಲಕ್​​ ಸರ್ಕಲ್​ ಬಳಿಯ ವಿಸ್ಮಯ ಕಾಂಪ್ಲೆಕ್ಸ್ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಈ ವೇಳೆ ನಿವೃತ್ತ ಡಿಸಿಎಫ್​ ನಾಗರಾಜು ಹೊನ್ನಾಳಿ ಮನೆಯಲ್ಲಿ ಆನೆ ದಂತ ಪತ್ತೆಯಾಗಿದೆ. ಪರವಾನಗಿ ಪಡೆದ ಬಗ್ಗೆ ಲೋಕಾ ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ನಾಗರಾಜ್ ಬಿಜೆಪಿ ಸೇರಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:36 am, Mon, 24 April 23