AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸೇರಿದಂತೆ ಕೆಲ ಕಡೆ ಲೋಕಾಯುಕ್ತ ದಾಳಿ: ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ರೇಡ್, ದಾಖಲೆ ಪರಿಶೀಲನೆ

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ದಾವಣಗೆರೆ, ಕೋಲಾರ ಸೇರಿದಂತೆ ಕೆಲ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು ಸೇರಿದಂತೆ ಕೆಲ ಕಡೆ ಲೋಕಾಯುಕ್ತ ದಾಳಿ: ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ರೇಡ್, ದಾಖಲೆ ಪರಿಶೀಲನೆ
ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿ ನಿವಾಸ
TV9 Web
| Updated By: ಆಯೇಷಾ ಬಾನು|

Updated on:Apr 24, 2023 | 8:42 AM

Share

ಬೆಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಕೆಲ ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಕೆಲ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಫೀಲ್ಡ್​ಗೆ ಇಳಿದಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಮನೆ ಮೇಲೆ ರೇಡ್ ಆಗಿದ್ದು ಪರಿಶೀಲನೆ ನಡೆಯುತ್ತಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್​​ಪಿ ಅಶೋಕ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ನಿವೃತ್ತ ಡಿಸಿಎಫ್ ನಾಗರಾಜ್, ಹೊಳಲ್ಕೆರೆ ತಹಶೀಲ್ದಾರ್ ಮನೆ ಮೇಲೆ ದಾಳಿ

ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ‌ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಹಾಗೂ ನಿವೃತ್ತ ಡಿಸಿಎಫ್ ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕ ಕಾಲಕ್ಕೆ ರೇಡ್ ಆಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.

ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೆ ಆಸ್ಪತ್ರೆಗೆ ದಾಖಲಾದ ಪುಷ್ಪ ನಿರ್ಮಾಪಕ

ತಾ.ಪಂ. EO ಎನ್​​.ವೆಂಕಟೇಶಪ್ಪಗೆ ಸೇರಿದ 5 ಮನೆಗಳ ಮೇಲೆ ದಾಳಿ

ಕೋಲಾರ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ತಾ.ಪಂ. EO ಎನ್​​.ವೆಂಕಟೇಶಪ್ಪಗೆ ಸೇರಿದ 5 ಮನೆಗಳ ಮೇಲೆ ರೇಡ್ ಆಗಿದೆ. ಬಂಗಾರಪೇಟೆ ಪಟ್ಟಣದ ಮೂರು ಕಡೆ ಹಾಗೂ ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿ ಗ್ರಾಮದ 2 ಕಡೆ ಲೋಕಾಯುಕ್ತ ಎಸ್​​ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ವೆಂಕಟೇಶಪ್ಪ ನವರು ಕಳೆದ 8 ವರ್ಷದಿಂದ ಬಂಗಾರಪೇಟೆ ತಾ.ಪಂ. EO ಆಗಿ ಕೆಲಸ ಮಾಡುತ್ತಿದ್ದು 2 ದಿನದ ಹಿಂದಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆ‌ ಬಾಗೇಪಲ್ಲಿಗೆ ವರ್ಗಾವಣೆ ಆಗಿದ್ದರು.

BBMP ಎಇಇ ಟಿ.ಹನುಮಂತರಾಯ ಮನೆ ಮೇಲೆ ದಾಳಿ

ಚಿತ್ರದುರ್ಗ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಬೆಂಗಳೂರಿನ BBMP ಎಇಇ ಟಿ.ಹನುಮಂತರಾಯ ಮನೆ ಮೇಲೆ ದಾಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬೋಚಾಪುರ ಗ್ರಾಮದ ಬಳಿಯ ಫಾರ್ಮ್​ ಹೌಸ್ ಮೇಲೆ ಲೋಕಾಯುಕ್ತ ಎಸ್​ಪಿ ವಾಸುದೇವ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

ಬೀದರ್ ಜಿಲ್ಲೆಯ 6 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬೀದರ್ ಜಿಲ್ಲೆಯ 6 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಬಸವಕಲ್ಯಾಣ ತಾಲೂಕಿನ ಮುಡಬಿಯ ಉಪ ತಹಶೀಲ್ದಾರ್​ ವಿಜಯಕುಮಾರ್​ ಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಬೀದರ್​​ನ ಆನಂದ್ ನಗರ ಮನೆ, ಬಸವಕಲ್ಯಾಣದ ಮನೆ, ಕಚೇರಿ, ನಗರದ ಗ್ಯಾರೆಜ್ ಮೇಲೂ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಸಣ್ಣ ನೀರಾವರಿ ಇಲಾಖೆ ಇಇ ಸುರೇಶ್ ಮೇದಾ​ ಅವರ ಬೀದರ್​ನ ಗುರುನಗರದ ಮನೆ, ನೌಬಾದ್​​ನ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಬೆಳ್ತಂಗಡಿಯಲ್ಲಿರುವ ಗಂಗಾಧರಗೌಡ ಮನೆ ಮೇಲೆ ಐಟಿ ದಾಳಿ

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ತಂಗಡಿಯಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡಮನೆ ಮೇಲೆ ಐಟಿ ದಾಳಿ ನಡೆದಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ ಮನೆ, ಪ್ರಸನ್ನ ಇನ್ಸ್ಟಿಟ್ಯೂಷನ್​​, ಇಂದುಬೆಟ್ಟುವಿನ ಮನೆಯಲ್ಲಿ 20ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 7:56 am, Mon, 24 April 23