AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ದಾಳಿ ಬೆನ್ನಲ್ಲೆ ಆಸ್ಪತ್ರೆಗೆ ದಾಖಲಾದ ಪುಷ್ಪ ನಿರ್ಮಾಪಕ

Mythri Movie Makers: ಪುಷ್ಪ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ ಆಗಿರುವ ಬೆನ್ನಲ್ಲೆ ನಿರ್ಮಾಪಕ ನವೀನ್ ಯೆರ್ರಿನೇನಿ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಟಿ ದಾಳಿ ಬೆನ್ನಲ್ಲೆ ಆಸ್ಪತ್ರೆಗೆ ದಾಖಲಾದ ಪುಷ್ಪ ನಿರ್ಮಾಪಕ
ನವೀನ್ ಯೆರ್ರಿನೇನಿ
ಮಂಜುನಾಥ ಸಿ.
|

Updated on: Apr 23, 2023 | 3:52 PM

Share

ಪುಷ್ಪ (Pushpa) ಸಿನಿಮಾ ಸೇರಿದಂತೆ ಹಲವು ಸೂಪರ್ ಹಿಟ್ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೆಕರ್ಸ್ (Mythri Movie Makers)​ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆ ಮುಂದುವರೆದಿದೆ. ಇದೇ ಸಮಯದಲ್ಲಿ ಐಟಿ ದಾಳಿಯಿಂದ ವಿಚಲಿತರಾಗಿರುವ ಮೈತ್ರಿ ಮೂವಿ ಮೇಕರ್ಸ್​ನ ನಿರ್ಮಾಪಕ ನವೀನ್ ಯೆರ್ರಿನೇನಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೈತ್ರಿ ಮೂವೀಸ್ ಕಚೇರಿ, ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಸತತ ಮೂರು ದಿನಗಳಿಂದಲೂ ದಾಳಿ, ಪರಿಶೀಲನೆ ನಡೆಯುತ್ತಲೇ ಇದ್ದು, ನಿನ್ನೆ ತನಿಖೆ ವೇಳೆ ನಿರ್ಮಾಪಕ ನವೀನ್ ಯೆರ್ರಿನೇನಿ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಕಚೇರಿ ಹಾಗೂ ಇತರೆಗಳ ಮೇಲೆ ಮೂರು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿನಿಮಾಗಳ ಮೇಲೆ ಹೂಡಿಕೆಗೆ ಅಕ್ರಮವಾಗಿ ವಿದೇಶಿ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಮೈತ್ರಿ ಮೂವಿ ಮೇಕರ್ಸ್ ಮೇಲಿದ್ದು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಐಟಿ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗುತ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಮಾತ್ರವೇ ಅಲ್ಲದೆ ಪುಷ್ಪ ಸಿನಿಮಾದ ನಿರ್ಮಾಪಕ ಸುಕುಮಾರ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಅಲ್ಲಿಯೂ ತನಿಖೆ ನಡೆಸಲಾಗಿದೆ. ಅಲ್ಲು ಅರ್ಜುನ್ ಮನೆಯ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್​ನವರು ಸುಮಾರು 700 ಕೋಟಿ ಹಣವನ್ನು ವಿದೇಶದಿಂದ ಅಕ್ರಮವಾಗಿ ನಕಲಿ ಹೆಸರಿನಲ್ಲಿ ಹೂಡಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈತ್ರಿ ಮೂವಿ ಮೇಕರ್ಸ್​ನವರು ವಿದೇಶದಲ್ಲಿ ನಕಲಿ ಹೆಸರಲ್ಲಿ ಕಂಪೆನಿಗಳನ್ನು ತೆರೆದಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ.

ಮೈತ್ರಿ ಮೂವಿ ಮೇಕರ್ಸ್ ಇದೀಗ ಒಂದರ ಹಿಂದೊಂದು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಪುಷ್ಪ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಬೆನ್ನಲ್ಲೆ ಚಿರಂಜೀವಿ ನಟನೆಯ ವಾಲ್ಟರ್ ವೀರಯ್ಯ, ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ನಿರ್ಮಾಣ ಮಾಡಿದ್ದಲ್ಲದೆ ಎರಡೂ ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡಿದ್ದರು. ಅದರ ಬಳಿಕ ಅಮಿಗೋಸ್ ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಇದೀಗ ಪುಷ್ಪ 2, ವಿಜಯ್ ದೇವರಕೊಂಡ-ಸಮಂತಾ ನಟನೆಯ ಖುಷಿ, ಮಲಯಾಳಂನಲ್ಲಿ ನಟಿಗರ್ ತಿಲಗಂ, ಪವನ್ ಕಲ್ಯಾಣ್ ನಟನೆಯ ಭಗಂತ್ ಸಿಂಗ್, ಎನ್​ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಶನ್ ಸಿನಿಮಾ, ರಾಮ್ ಚರಣ್​ ನಟನೆಯ 16ನೇ ಸಿನಿಮಾ. ಅಲ್ಲು ಅರ್ಜುನ್-ಸಂದೀಪ್ ರೆಡ್ಡಿ ವಂಗಾ ಕಾಂಬಿನೇಶನ್ ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ಮಾಣ ಮಾಡುತ್ತಿದ್ದಾರೆ.

ಪುಷ್ಪ ಸಿನಿಮಾಕ್ಕೆ ಮುಂಚೆಯೂ ಹಲವು ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿತ್ತು, ಎನ್​ಟಿಆರ್ ನಟನೆಯ ಜನತಾ ಗ್ಯಾರೇಜ್ ಮೂಲಕ ಸ್ವತಂತ್ರ ನಿರ್ಮಾಣ ಆರಂಭಿಸಿದ ಈ ಸಂಸ್ಥೆ, ಆ ಬಳಿಕ ರಾಮ್ ಚರಣ್ ನಟನೆಯ ರಂಗಸ್ಥಲಂ, ನಾಗ ಚೈತನ್ಯರ ಸವ್ಯಸಾಚಿ, ನಾನಿ ಗ್ಯಾಂಗ್ ಲೀಡರ್ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಜೊತೆಗೆ ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳನ್ನು ಸಹ ನಿರ್ಮಾಣ ಹಾಗೂ ವಿತರಣೆಯನ್ನು ಸಹ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ