Karnataka Election 2023: ಬುಧವಾರವೇ ಚುನಾವಣೆ ನಿಗದಿ ಮಾಡಿದ್ದೇಕೆ? ಇಲ್ಲಿದೆ ಕಾರಣ

| Updated By: Ganapathi Sharma

Updated on: Mar 29, 2023 | 3:29 PM

ಬುಧವಾರವೇ ಚುನಾವಣೆ ನಿಗದಿ ಮಾಡಿರುವುದಕ್ಕೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ. ಅವುಗಳು ಇಲ್ಲಿವೆ.

Karnataka Election 2023: ಬುಧವಾರವೇ ಚುನಾವಣೆ ನಿಗದಿ ಮಾಡಿದ್ದೇಕೆ? ಇಲ್ಲಿದೆ ಕಾರಣ
ಭಾರತೀಯ ಚುನಾವಣಾ ಆಯೋಗ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಘೋಷಣೆಯಾಗಿದ್ದು, ಈ ಬಾರಿ ವಾರದ ಮಧ್ಯದ ದಿನವಾದ ಬುಧವಾರ ಮತದಾನಕ್ಕೆ ದಿನ ನಿಗದಿ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ (ECI) ಮುಖ್ಯ ಆಯುಕ್ತ ರಾಜೀವ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆ, ಮತದಾನ, ಮತ ಎಣಿಕೆ ಸೇರಿದಂತೆ ಎಲ್ಲ ವಿವರಗಳನ್ನು ಪ್ರಕಟಿಸಿದರು. ಇದರಂತೆ, ಮೇ 10ರಂದು ಬುಧವಾರ ಮತದಾನ ನಡೆಯಲಿದ್ದು, ಮೇ 13ರಂದು ಶನಿವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಮತ್ತು ಹಿಂದಿನ ಎರಡು ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ನಗರ ಕ್ಷೇತ್ರಗಳಲ್ಲಿ 2018ರಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಇದು ರಾಜ್ಯದ ಒಟ್ಟಾರೆ ಮತದಾನ ಪ್ರಮಾಣ ಶೇ 72ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿತ್ತು. 2013ರ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆಯಾಗಿತ್ತು.

ನಾವು ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿದ್ದು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಾಕ್ಷರತಾ ಕ್ಲಬ್‌ಗಳು ಮತ್ತು ಸ್ವಯಂಪ್ರೇರಿತ ಕಾರ್ಯಕ್ರಮಗಳಂತಹ ಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಜೊತೆಗೆ, ನಾವು ಐಟಿ ವಲಯವನ್ನು ಕೂಡ ಮತದಾನ ಜಾಗೃತಿಯಲ್ಲಿ ಭಾಗಿಯಾಗುವಂತೆ ವಿನಂತಿಸಿದ್ದೇವೆ. ಚುನಾವಣಾ ಜಾಗೃತಿ ನಿಟ್ಟಿನಲ್ಲಿ ಎಲೆಕ್​ಥಾನ್ ನಡೆಸುತ್ತಿರುವ ಐಐಎಸ್​ಸಿಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಆಯುಕ್ತರು ಹೇಳಿದರು. ಐಐಎಸ್​ಸಿ ಹೊರತುಪಡಿಸಿ ಐಐಟಿ ಕೂಡ ಆಯೋಗದ ಜತೆ ಕೈಜೋಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Election 2023 Schedule: ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, ಮೇ 10ರಂದು ಮತದಾನ, ಮೇ 13ಕ್ಕೆ ಫಲಿತಾಂಶ

ಚುನಾವಣಾ ಜಾಗೃತಿ ನಿಟ್ಟಿನಲ್ಲಿ ನಮ್ಮ ಜತೆ ಕೈಜೋಡಿಸಿರುವವರೆಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಶೇ 47ರಷ್ಟು ಜನರು ಸುಲಭವಾಗಿ ಹೇಗೆ ನೋಂದಣಿ ಮಾಡಬೇಕೆಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ಕೆಲವರು ಚುನಾವಣೆಯ ದಿನದಂದು ಯುವಕರನ್ನು ಮತಗಟ್ಟೆ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಚುನಾವಣಾ ಆಯುಕ್ತರು ಹೇಳಿದರು.

ಬುಧವಾರವೇ ಯಾಕೆ ಚುನಾವಣೆ? ಆಯೋಗ ಕೊಟ್ಟ ಕಾರಣವಿದು

ಬುಧವಾರವೇ ಚುನಾವಣೆ ನಿಗದಿ ಮಾಡಿರುವುದಕ್ಕೆ ಆಯುಕ್ತರು ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ. ಒಂದು ವೇಳೆ ಚುನಾವಣೆ ಸೋಮವಾರ ನಿಗದಿ ಮಾಡಿದ್ದರೆ ಆ ದಿನ ರಜೆಯಾದ್ದರಿಂದ ದೀರ್ಘ ವಾರಾಂತ್ಯ ಎಂದು ತೆರಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದರಿಂದ ಮತದಾನ ಮತ್ತೆ ಕಡಿಮೆಯಾಗುತ್ತಿತ್ತು. ಮಂಗಳವಾರ ಚುನಾವಣೆ ನಿಗದಿ ಮಾಡಿದ್ದರೂ ಸೋಮವಾರ ಒಂದು ದಿನ ರಜೆ ಪಡೆದುಕೊಂಡರೆ ಒಟ್ಟು ನಾಲ್ಕು ದಿನಗಳ ರಜೆ ಸಿಗುತ್ತದೆ ಎಂದು ಪ್ರವಾಸ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಬುಧವಾರವಾದರೆ ಹೆಚ್ಚುವರಿಯಾಗಿ ಎರಡು ದಿನ ರಜೆ ಮಾಡಬೇಕಿರುವುದರಿಂದ ಹಾಗೆ ಮಾಡುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಆಯುಕ್ತರು ಹೇಳಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆ ಪ್ರಕ್ರಿಯೆಯಲ್ಲಿ ಹೆಚ್ಚು ಮಂದಿ ಭಾಗವಹಿಸಬೇಕೆಂದು ಕರ್ನಾಟಕದ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದೂ ಆಯುಕ್ತರು ಹೇಳಿದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ