ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ತೀವ್ರ ವಿರೋಧ, ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ, ಕೈಗೆ ಬಳೆ ನೀಡಿ ಕಾರ್ಯಕರ್ತರ ಆಕ್ರೋಶ

|

Updated on: Mar 06, 2023 | 3:15 PM

ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆ ಆಗುತ್ತಾರೆ ಎನ್ನುವ ಊಹಾ ಪೋಹ ಎದ್ದಿರುವ ಬೆನ್ನಲ್ಲೇ ಕೆ.ಆರ್.ಪೇಟೆ ಕ್ಷೇತ್ರದ ಕೈ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದು ಎಚ್ಚರಿಕೆ ನೀಡಿದ್ದಾರೆ.

ಸಚಿವ ನಾರಾಯಣಗೌಡ ಕಾಂಗ್ರೆಸ್​ ಸೇರ್ಪಡೆಗೆ ತೀವ್ರ ವಿರೋಧ, ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ, ಕೈಗೆ ಬಳೆ ನೀಡಿ ಕಾರ್ಯಕರ್ತರ ಆಕ್ರೋಶ
Follow us on

ಮಂಡ್ಯ: ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿ ಮೊದಲ ಬಾರಿಗೆ ಮಂಡ್ಯದಲ್ಲಿ ಕಮಲ ಅರಳುವಂತೆ ಮಾಡಿದ ಸಚಿವ ನಾರಾಯಣ ಗೌಡ ಇದಿಗ ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಸುದ್ದಿ ರಾಜ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆ.ಆರ್. ಪೇಟೆ ಕ್ಷೇತ್ರದ ಜನರ ಬಾಯಲ್ಲೇ ನಾರಾಯಣಗೌಡ ಕೈ ಹಿಡಿಯುತ್ತಾರೆ ಎನ್ನವು ಚರ್ಚೆ ಸಹ ಜೋರಾಗಿದೆ. ಇದು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಆಕ್ರೋಕ್ಕೆ ಕಾರಣವಾಗಿದ್ದು, ಇದೇ ವಿಚಾರ ಇಟ್ಟುಕೊಂಡು ಇಂದು ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಮಾರ್ಚ್ 13ರಂದು ಕೆ.ಆರ್ ಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಗಂಗಾಧರ್ ಕಾರಿಗೆ ಕೆ.ಆರ್. ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೆ.ಆರ್​​​.ಪೇಟೆ ಕಾಂಗ್ರೆಸ್​ ಟಿಕೆಟ್​ಗೆ 6 ಮಂದಿ​ ಆಕಾಂಕ್ಷಿಗಳಿದ್ದಾರೆ. ನಾರಾಯಣಗೌಡ ಕಾಂಗ್ರೆಸ್ ಗೆ ಬಂದ್ರೆ ಅವರೆಲ್ಲಾ ಏನಾಗಬೇಕು? ಎಲ್ಲರೂ ಕೈಗೆ ಬಳೆ ತೊಟ್ಟುಕೊಂಡು ಓಡಾಡಬೇಕಾ? ಎಂದು ಜಿಲ್ಲಾಧ್ಯಕ್ಷ ಗಂಗಾಧರ್ ಕೈಗೆ ಬಳೆ ನೀಡಿ ಕಾರ್ಯಕರ್ತರು ಪ್ರಶ್ನಿಸಿದರು.

ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಯಾಗ್ತಾರೆಂಬ ಊಹಾಪೋಹ ಎದ್ದಿರುವ ಹಿನ್ನೆಲೆಯಲ್ಲಿ ಕೆ.ಆರ್ ಪೇಟೆಯ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಈ ಮೂಲಕ ಯಾವುದೇ ಕಾರಣಕ್ಕೂ ಸಚಿವ ನಾರಾಯಣಗೌಡ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದ ನಾರಾಯಣಗೌಡ

ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿ ಮೊದಲ ಬಾರಿಗೆ ಕಮಲ ಅರಳುವಂತೆ ಮಾಡಿದ ನಾರಾಯಣ ಗೌಡರು ಬಿಜೆಪಿ ನಾಯಕರಿಗೆ ಚುನಾವಣೆ ಹೊತ್ತಲಿ ಶಾಕ್ ಕೊಡುತ್ತಾರಾ ಎನ್ನುವ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಅಭ್ಯರ್ಥಿ ವಿಚಾರದಲ್ಲಿ ಮೂರು ಪಕ್ಷಗಳಲ್ಲೂ ಗೊಂದಲ ಮುಂದುವರೆದಿದ್ದು, ಚುನಾವಣೆ ವೇಳೆಗೆ ರಾಜಕೀಯವಾಗಿ ಹತ್ತು ಹಲವು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೆ ಅಧಿಕೃತ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ.ಇನ್ನೂ ನಾರಾಯಣ ಗೌಡರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ದೃಷ್ಠಿಯಿಂದಾಗಿ ಚುನಾವಣೆ ಹೊತ್ತಿಗೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಸಚಿವ ನಾರಾಯಣ ಗೌಡರು ಪಕ್ಷಾಂತರದ ಸುಳಿವು ನೀಡಿದ್ದರು.

ಈ ಕುರಿತು ಸಚಿವ ನಾರಾಯಣ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಇದುವರೆಗೂ ಸೇರ್ಪಡೆ ಕುರಿತು ಯಾವುದೇ ತಿರ್ಮಾನವನ್ನ ತೆಗೆದುಕೊಂಡಿಲ್ಲ. ನನ್ನ ಆಪ್ತರು ಹಾಗೂ ಹಿತೈಷಿಗಳ ಜೊತೆಗೆ ಚರ್ಚಿಸಬೇಕು. ಬಳಿಕ ತಿರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದ ನಾರಾಯಣಗೌಡ, ಕೆ ಆರ್ ಪೇಟೆಯಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆ ಇದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ ಎಂದು ಹೇಳುವ ಮೂಲಕ ಪಕ್ಷಾಂತರ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದರು.

ನಾರಾಯಣಗೌಡ ಅವರು ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಕೊಂಡಿಲ್ಲ. ಕೇವಲ ಸುಳಿವು ಮಾತ್ರ ಕೊಟ್ಟಿದ್ದಕ್ಕೆ ನಾರಾಯಣಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕೆ.ಆರ್.ಪೇಟೆ ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಇದು ರಾಜ್ಯ ನಾಯಕರಿಗೆ ದೊಡ್ಡ ತಲೆಬಿಸಿಯಾಗಿದೆ.