ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ಟಿ ಸೋಮಶೇಖರ್ (ST Somashekhar) ಅವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತನ್ನ ವೈಯಕ್ತಿಕ ಹಾಗೂ ತನ್ನ ಕಟುಂಬದ ಸ್ವತ್ತುಗಳ (Assets) ವಿವರಗಳನ್ನು ಕೂಡ ಘೋಷಣೆ ಮಾಡಿದ್ದಾರೆ. ಅದರಂತೆ ಕೋಟ್ಯಾಂತರ ರೂಪಾಯಿ ಆಸ್ತಿ 1 ಕೋಟಿಗೂ ಅಧಿಕ ಸಾಲದಲ್ಲಿರುವ ಎಸ್.ಟಿ. ಸೋಮಶೇಖರ್, ಸಾಲದಾತರೂ ಆಗಿದ್ದಾರೆ. ವಿಶೇಷವೆಂದರೆ, ಸೋಮಶೇಖರ್ ಅವರಿಂದ ಸಾಲ ಪಡೆದವರೆಲ್ಲರೂ ಅವರದ್ದೇ ಕುಟುಂಬದ ಸದಸ್ಯರು. ಸೋಮಶೇಖರ್ ಅವರು ಒಟ್ಟು 1.22 ಕೋಟಿ ರೂ. ಸಾಲ ಹೊಂದಿದ್ದು, ಕುಟುಂಬದ ಸದಸ್ಯರಿಗೆ 2.46 ಕೋಟಿ ರೂ. ಸಾಲ ನೀಡಿದ್ದಾರೆ. ಪುತ್ರನಿಗೆ 1.23 ಕೋಟಿ ರೂ. ಸಾಲ ನೀಡಿದರೆ, ತನ್ನ ಪತ್ನಿಗೆ 16 ಲಕ್ಷ ರೂ. ಹಾಗೂ ತಾಯಿ ಸೀತಮ್ಮ ಅವರಿಗೆ ಒಂದು ಕೋಟಿ ರೂ. ಸಾಲ ನೀಡಿದ್ದಾರೆ. ಮಾತ್ರವಲ್ಲದೆ, ಸಹೋದರ ಎಸ್.ಟಿ. ಶ್ರೀನಿವಾಸ್‌ಗೆ 6.50 ಲಕ್ಷ ರೂ ಸಾಲ ನೀಡಿದ್ದಾರೆ.
ಇನ್ನು, ಎಸ್ಟಿ ಸೋಮಶೇಖರ್ ಮತ್ತು ಅವರ ಮನೆಯ ಸದಸ್ಯರ ಹೆಸರಿನಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಇದೆ. ಸೋಮಶೇಖರ್ ಅವರ ಹೆಸರಿನಲ್ಲಿ 27.88 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, 5.46 ಕೋಟಿ ರೂ. ಮೌಲ್ಯದ ಚರಾಸ್ತಿ, 8.91 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರಾಧಾ ಹೆಸರಲ್ಲಿ 53.86 ಲಕ್ಷ ರೂ. ಮೌಲ್ಯದ ಚರಾಸ್ತಿ, 8.72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ಪುತ್ರ ನಿಶಾಂತ್ ಹೆಸರಲ್ಲಿ 48.18 ಲಕ್ಷ ರೂ. ಚರಾಸ್ತಿ, 3.75 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಇದೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಒಟ್ಟು ಆಸ್ತಿ ವಿವರ ಎಷ್ಟು ಗೊತ್ತಾ?
ಏಪ್ರಿಲ್ 14ರಂದು ನಾಮಪತ್ರ ಸಲ್ಲಿಸಿದ್ದ ಎಸ್ಟಿ ಸೋಮಶೇಖರ್ ಅವರು ಬಳಿಕ ಮೈಸೂರಿಗೆ ತೆರಳಿ ಸುತ್ತೂರಿನ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಹೇಳಿಕೆ ನೀಡಿದ್ದ ಸಚಿವರು, ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸುವಂತೆ ಹೈಕಮಾಂಡ್ ಸೂಚಿಸಿರುವುದಾಗಿ ತಿಳಿಸಿದ್ದರು. ಅದರಂತೆ ಏಪ್ರಿಲ್ 24ರಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳುತ್ತೇನೆ ಎಂದಿದ್ದರು.
ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ಕ್ಕೆ ರಾಜಕೀಯ ಪಕ್ಷಗಳ ಭವಿಷ್ಯ ಹೊರಬೀಳಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕವಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Mon, 17 April 23