ಬೆಂಗಳೂರು: ನಗರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಹೆಚ್ಚಿನ ಕಾಂಗ್ರೆಸ್ (Congress) ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆಗಳನ್ನು (Criminal Cases) ಹೊಂದಿರುವವರಾಗಿದ್ದಾರೆ. ರಾಜಧಾನಿ ನಗರದಲ್ಲಿ 92 ಅಭ್ಯರ್ಥಿಗಳು (ಶೇ. 24) ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು 57 (ಶೇ. 15) ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಒಟ್ಟು 389 ಅಭ್ಯರ್ಥಿಗಳ ಪೈಕಿ 384 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಈ ಮಾಹಿತಿಯನ್ನು ನೀಡಿದೆ. ಉಳಿದ ಐವರು ಅಭ್ಯರ್ಥಿಗಳ ಅಫಿಡವಿಟ್‌ಗಳು ಸ್ಪಷ್ಟವಾಗಿಲ್ಲದ ಹಿನ್ನೆಲೆ ಎಡಿಆರ್ ವಿಶ್ಲೇಷಣೆ ಮಾಡಿಲ್ಲ.
ಕಾಂಗ್ರೆಸ್‌ನ 27 ಅಭ್ಯರ್ಥಿಗಳಲ್ಲಿ ಹತ್ತೊಂಬತ್ತು (ಶೇ 70) ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಎಡಿಆರ್ ಗಮನಿಸಿದೆ. ಶೇ 70ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದರೆ, ಶೇ 37ರಷ್ಟು ಅಭ್ಯರ್ಥಿಗಳು ಗಂಭೀರವಾದ ಕ್ರಿನಿಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ. 50ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದು, ಶೇ.32ರಷ್ಟು ಗಂಭೀರ ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಪೈಕಿ ಶೇ 32ರಷ್ಟು ಕ್ರಿನಿನಲ್ ಪ್ರಕರಣ ಹಾಗೂ ಶೇ 33ರಷ್ಟು ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣವನ್ನು ಹೊಂದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪೈಕಿ ಶೇ.32ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಶೇ.4ರಷ್ಟು ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಲ್ಲಿ ಶೇ 14ರಷ್ಟು ಮಂದಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದರೆ, ಶೇ 10ರಷ್ಟು ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಕೋಟಿ ವೀರರು: ಹುಬ್ಬೇರಿಸುತ್ತಿದೆ ಅಭ್ಯರ್ಥಿಗಳ ಆಸ್ತಿ ಲೆಕ್ಕ, 10 ಸಾವಿರ ನಾಣ್ಯ ತಂದಿಟ್ಟ ಎಎಪಿ ಅಭ್ಯರ್ಥಿ
ಇದನ್ನು ಸಂಖ್ಯೆಯಲ್ಲಿ ನೋಡುವುದಾದರೆ, ಬಿಜೆಪಿಯ 28 ಅಭ್ಯರ್ಥಿಗಳಲ್ಲಿ 9, ಕಾಂಗ್ರೆಸ್‌ನ 27 ಅಭ್ಯರ್ಥಿಗಳಲ್ಲಿ 10, ಜೆಡಿಎಸ್‌ನ 24 ಅಭ್ಯರ್ಥಿಗಳಲ್ಲಿ 8, ಎಎಪಿಯ 28 ಅಭ್ಯರ್ಥಿಗಳಲ್ಲಿ ಒಬ್ಬರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಪೋಲ್ ವಾಚ್‌ಡಾಗ್ ತನ್ನ ವರದಿಯಲ್ಲಿ ಗಮನಿಸಿದೆ. ಐದು ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ. ನಾಲ್ಕು ಅಭ್ಯರ್ಥಿಗಳು ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ ಮತ್ತು ಒಂಬತ್ತು ಮಂದಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ.
ಭಾರತದಲ್ಲಿ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋಟ್ಯಾಧಿಪತಿ ಅಭ್ಯರ್ಥಿಗಳನ್ನು ಹೊಂದಿದೆ. 27 ಅಭ್ಯರ್ಥಿಗಳು (ಶೇ 96) 1 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್‌ನ 26 (ಶೇ. 96), ಜೆಡಿಎಸ್‌ನ 21 (ಶೇ. 88) ಮತ್ತು ಎಎಪಿಯ 25 (ಶೇ. 89) ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂದು ಎಡಿಆರ್ ಗಮನಿಸಿದೆ. ಒಟ್ಟು 87 ಅಭ್ಯರ್ಥಿಗಳು 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಮೂವರು ಅಭ್ಯರ್ಥಿಗಳು ಒಟ್ಟು 10,000 ರೂ.ಗಿಂತ ಕಡಿಮೆ ಆಸ್ತಿ ಹೊಂದಿದ್ದು, ಇನ್ನೂ ಮೂವರು ಶೂನ್ಯ ಆಸ್ತಿಯನ್ನು ಘೋಷಿಸಿದ್ದಾರೆ. ಎಡಿಆರ್ ಪ್ರಕಾರ, 38 (ಶೇ. 10) ಮಹಿಳಾ ಅಭ್ಯರ್ಥಿಗಳು ಬೆಂಗಳೂರಿನಿಂದ ಚುನಾವಣಾ ಅಖಾಡಲ್ಲಿದ್ದಾರೆ. ಈ ಪೈಕಿ 61 ರಿಂದ 80 ವರ್ಷದೊಳಗಿನ 46 (ಶೇ. 12) ಅಭ್ಯರ್ಥಿಗಳು ಇದ್ದು, 82 ವರ್ಷದ ಒಬ್ಬ ಅಭ್ಯರ್ಥಿ ಇದ್ದಾರೆ.
213 (ಶೇ. 55) ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು 5 ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. ಆದರೆ 145 (ಶೇ. 38) ಅಭ್ಯರ್ಥಿಗಳು ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. 19 ಅಭ್ಯರ್ಥಿಗಳು ಡಿಪ್ಲೊಮಾ ಹೊಂದಿರುವವರು, ಮೂವರು ತಮ್ಮನ್ನು ಕೇವಲ ಸಾಕ್ಷರರು ಮತ್ತು ಮೂವರು ಅನಕ್ಷರಸ್ಥರು ಎಂದು ಘೋಷಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ