ಬಿಜೆಪಿಗೆ ಮತ್ತೊಂದು ಆಘಾತ: ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ರಾಜೀನಾಮೆ

|

Updated on: Apr 13, 2023 | 9:37 AM

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಒಬ್ಬೊಬ್ಬರಾಗಿಯೇ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೋರ್ವ ಹಾಲಿ ಶಾಸಕ ಸೇರಿಕೊಂಡಿದ್ದಾರೆ.

ಬಿಜೆಪಿಗೆ ಮತ್ತೊಂದು ಆಘಾತ: ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ರಾಜೀನಾಮೆ
MP Kumaraswamy
Follow us on

ಬೆಂಗಳೂರು/ಚಿಕ್ಕಮಗಳೂರು: ಈ ಬಾರಿ ವಿಧಾನಸಭೆ ಚುನಾವಣೆ ಟಿಕೆಟ್​ ಕಯತಪ್ಪಿದ್ದಕ್ಕೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ(mudigere MLA MP Kumaraswamy) ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಎಂಪಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂಡಿಗೆರೆಯಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ಹೈಕಮಾಂಡ್​, ದೀಪಕ್ ದೊಡ್ಡಯ್ಯ ಎನ್ನುವರಿಗೆ ಟಿಕೆಟ್​ ಘೋಷಣೆ ಮಾಡಿದೆ. ಇದರಿಂದ ಅಸಮಧಾನಗೊಂಡ ಎಂಪಿ ಕುಮಾರಸ್ವಾಮಿ ಅವರು ಇಂದು(ಏಪ್ರಿಲ್ 13) ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಪಿ.ಕುಮಾರಸ್ವಾಮಿ, ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸ್ಥಾನವೂ ಗೆಲ್ಲುವುದಿಲ್ಲ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ನಾನೇನು ಸನ್ಯಾಸಿ ಅಲ್ಲ, ರಾಜಕೀಯ ಮಾಡಿ ತೋರಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದರು.

ಇದನ್ನೂ ಓದಿ: BJP Candidates Second List: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 23 ಮಂದಿ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್‌ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್‌ ಹಂಚಿಕೆಯಲ್ಲಿ ಈ ಬಾರಿ ಅನೇಕ ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಿದೆ. ಅದರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಟಿಕೆಟ್‌ ಹಾಲಿ ಶಾಸಕ ಹಾಗೂ ಮೂರು ಬಾರಿ ಗೆದ್ದ ಎಂ.ಪಿ.ಕುಮಾರಸ್ವಾಮಿಗೆ ಕೈ ತಪ್ಪಿದೆ. ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಹೈಕಮಾಂಡ್​ ನಾಯಕರಿಗೆ ಕುಮಾರಸ್ವಾಮಿಗೆ ಟಿಕೆಟ್​ ನೀಡಬೇಡಿ ಎಂದು ಪತ್ರ ಹಾಗೂ ಇಮೇಲ್​ ಕಳುಹಿಸಿದ್ದರು. ಪರಿಣಾಮ ಬಿಜೆಪಿ ಹೈಕಮಾಂಡ್‌ ಈ ಬಾರಿ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್‌ ನೀಡಲು ನಿರಾಕರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ

ಐದಾರು ಜನರ ತೀವ್ರ ಪೈಪೋಟಿ ಮಧ್ಯೆ ಅಚ್ಚರಿ ಎಂಬಂತೆ ಬಿಜೆಪಿ ಕಾರ್ಯಕರ್ತ ದೀಪಕ್ ದೊಡ್ಡಯ್ಯಗೆ ಹೈ ಕಮಾಂಡ್ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡಿರುವ ಕುಮಾರಸ್ವಾಮಿ, ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರ ಹಾಕಿದ್ದು, ಆತ್ಮೀಯ ಕ್ಷೇತ್ರದ ಮತದಾರ ಬಂಧುಗಳೇ, ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್ ಗೇ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ ಸರ್ವೇ ಆಧರಿಸಿ ಟಿಕೇಟ್ ನೀಡುವ ಪಕ್ಷ ಪ್ರತಿ ಸರ್ವೆಯಲ್ಲಿ ಮುನ್ನಡೆಯಿದ್ದರು, ಟಿಕೆಟ್ ನಿರಾಕರಿಸಿದ್ದು ನೋವಿನ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಳೆಯಿಂದಾಗಿ ಬೆಳೆ ಕಳೆದುಕೊಂಡ ಕ್ಷೇತ್ರದ ರೈತಭಾಂದವರಿಗೋಸ್ಕರ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿದ್ದು ಹೈಕಾಮಾಂಡ್​​ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ. ನಿಮಗೆಲ್ಲಾ ತಳಿದಿರುವಂತೆ ಶತ್ರುಗಳಿಗೂ ಕೂಡ ಕೇಡು ಬಯಸದೇ ಎಲ್ಲರನ್ನ ಸದಾ ಗೌರವಿಸುತ್ತಾ ಪ್ರೀತಿಯಿಂದ ಕಾಣುತ್ತಲೇ ಬಂದೆ. ಪಕ್ಷದ ಕಾರ್ಯಕರ್ತರನ್ನ ಬೆಳೆಸಿದ್ದೇನೆ ಹೊರತು ನನ್ನ ಮನೆಯವರನ್ನಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಸೇರ್ಪಡೆಯಾಗಿ ಈ ಬಾರಿ ಮತ್ತೊಮ್ಮೆ ಮೂಡಿಗೆರೆ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 9:14 am, Thu, 13 April 23