ನಾಳೆ ಸಂಜೆ ನಿರ್ಧಾರ ತಿಳಿಸುತ್ತೇನೆಂದ ಎಸ್​ಎ ರಾಮದಾಸ್; ಬಿಜೆಪಿ ತ್ಯಜಿಸುತ್ತಾರಾ ಹಾಲಿ ಶಾಸಕ?

|

Updated on: Apr 17, 2023 | 9:52 PM

ಪಕ್ಷದಲ್ಲಿರಬೇಕೇ ಅಥವಾ ಬೇರೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದಾಗಿ ನಾಳೆ ತಿಳಿಸುತ್ತೇನೆ, ನಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್​ಎ ರಾಮದಾಸ್ ಹೇಳಿದ್ದಾರೆ.

ನಾಳೆ ಸಂಜೆ ನಿರ್ಧಾರ ತಿಳಿಸುತ್ತೇನೆಂದ ಎಸ್​ಎ ರಾಮದಾಸ್; ಬಿಜೆಪಿ ತ್ಯಜಿಸುತ್ತಾರಾ ಹಾಲಿ ಶಾಸಕ?
ಎಸ್​ಎ ರಾಮದಾಸ್ (ಸಂಗ್ರಹ ಚಿತ್ರ)
Follow us on

ಮೈಸೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್​ಎ ರಾಮದಾಸ್​ಗೆ (SA Ramdas) ಟಿಕೆಟ್ ಕೈತಪ್ಪಿದೆ. ಅಲ್ಲಿ ಹೊಸಮುಖ ಶ್ರೀವತ್ಸಗೆ ಪಕ್ಷ ಟಿಕೆಟ್ ನೀಡಿದೆ. ಇದು ರಾಮದಾಸ್​​ ಅಸಮಾಧಾನಕ್ಕೆ ಕಾರಣವಾಗಿದ್ದು, 30 ವರ್ಷದಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕಾ ಬೇಡವಾ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿಗೆ ಮೈಸೂರಿನಲ್ಲೂ ಬಂಡಾಯದ ಬಿಸಿ ಮುಟ್ಟಿಸುವ ಸುಳಿವು ನೀಡಿದ್ದಾರೆ.

ಮೈಸೂರಿನ ನಿವಾಸದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿರಬೇಕೇ ಅಥವಾ ಬೇರೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದಾಗಿ ನಾಳೆ ತಿಳಿಸುತ್ತೇನೆ, ನಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ನಾಳೆ ನಿಮ್ಮನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಧ್ಯೆ, ಪಕ್ಷದ ಟಿಕೆಟ್ ಪಡೆದಿರುವ ಶ್ರೀವತ್ಸ, ಸಂಸದ ಪ್ರತಾಪ್​ ಸಿಂಹ ಹಾಗೂ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಅವರು ರಾಮದಾಸ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: BJP Candidates List: ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಟಿಕೆಟ್? ಇಲ್ಲಿದೆ ನೋಡಿ

ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಆಶೀರ್ವಾದ ಪಡೆಯಲು ರಾಮದಾಸ್ ಮನೆಗೆ ಬಂದಿದ್ದೆವು. ಟಿಕೆಟ್ ತಪ್ಪಿರುವ ಕಾರಣ ರಾಮದಾಸ್ ಅವರಿಗೆ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರುವುದು ಸಹಜ. ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ, ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿರುವವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ನಿರಾಕರಣೆ ಕಾರಣಕ್ಕೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರವಷ್ಟೇ ಬಿಜೆಪಿ ತೊರೆದಿದ್ದು, ಸೋಮವಾರ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅದಕ್ಕೂ ಮುನ್ನ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ತೀವ್ರ ಬಂಡಾಯದ ಬಿಸಿ ಎದುರಿಸುವಂತಾಗಿದೆ. ಇದೀಗ ಎಸ್​ಎ ರಾಮದಾಸ್​ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಮಂಗಳವಾರ ಸಂಜೆವರೆಗೂ ಕಾದು ನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:51 pm, Mon, 17 April 23