ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ; ಕಾಂಗ್ರೆಸ್​​ಗೆ ನಳಿನ್ ಕುಮಾರ್ ಕಟೀಲ್ ಸವಾಲು

|

Updated on: Apr 19, 2023 | 2:46 PM

ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​​ನವರು ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ; ಕಾಂಗ್ರೆಸ್​​ಗೆ ನಳಿನ್ ಕುಮಾರ್ ಕಟೀಲ್ ಸವಾಲು
ನಳಿನ್ ಕುಮಾರ್ ಕಟೀಲು
Follow us on

ರಾಯಚೂರು: ಬಿಜೆಪಿ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar kateel) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​​ನವರು ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ. ಲಿಂಗಸುಗೂರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿರುವ ಅವರು, ಕಾಂಗ್ರೆಸ್​​ಗೆ ಸವಾಲು ಹಾಕುತ್ತೇನೆ, ಅವರಿಗೆ ಶಕ್ತಿ ಇದ್ದರೆ ಲಿಂಗಾಯತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಅಂತ ಘೋಷಣೆ ಮಾಡಲಿ ಎಂದು ಹೇಳಿದ್ದಾರೆ.

ಯಾವುದೇ ಸಮುದಾಯಕ್ಕೆ ನೋವು ಮಾಡುವ ಪಕ್ಷ ಬಿಜೆಪಿಯಲ್ಲ. ನಮ್ಮ ಪಕ್ಷ ಎಲ್ಲ ಸಮುದಾಯಕ್ಕೆ ಬಿಜೆಪಿ ಸಾಮಾಜಿಕ ನ್ಯಾಯ ಕೊಟ್ಟಿದೆ. ವಿಶೇಷವಾಗಿ ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಮಾನ್ಯತೆ ಕೊಟ್ಟಿರುವುದು ಬಿಜೆಪಿ. ಅತೀ ಹೆಚ್ಚು ಲಿಂಗಾಯತರು ಇರುವ ಪಾರ್ಟಿ ಬಿಜೆಪಿ. ನಮ್ಮ ಪಕ್ಷದಲ್ಲಿ ಈಗಾಗಲೇ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಮುಂದೆಯೂ ಲಿಂಗಾಯತರು ಮುಖ್ಯಮಂತ್ರಿಯಾದರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷ ಬಿಟ್ಟ ಬಳಿಕ ಆ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಏನೂ ಪರಿಣಾಮವಾಗದು; ಬಿಎಲ್ ಸಂತೋಷ್​​ರನ್ನು ಸಮರ್ಥಿಸಿದ ಯಡಿಯೂರಪ್ಪ

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯೇಂದ್ರ, ಬಿಎಲ್ ಸಂತೋಷ ಹೆಸರಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, 40 ಸ್ಟಾರ್ ಪ್ರಚಾರಕರ ಹೆಸರನ್ನು ಘೋಷಿಸಲಾಗಿದೆ. ವಿಜಯೇಂದ್ರ ಚುನಾವಣಾ ಕಣದಲ್ಲಿದ್ದಾರೆ. ಯಾರನ್ನೆಲ್ಲ ಎಲ್ಲೆಲ್ಲಿ ಉಪಯೋಗಿಸಬೇಕೋ ಅಂಥವರ ಪಟ್ಟಿ ಅಖೈರುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ಬಳಿಕ, ಹುಬ್ಬಳ್ಳಿ-ಧಾರವಾಡ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಇದೆ ಎಂಬುದರಲ್ಲಿ ಹುರುಳಿಲ್ಲ. ಎಲ್ಲೂ ಅಸಮಾಧಾನವಿಲ್ಲ. ಅಲ್ಲಿ ಕಾರ್ಯಕರ್ತರ ಸಭೆ ಮಾಡಿ ಬಂದಿದ್ದೇನೆ ಎಂದು ಕಟೀಲ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಯುವ ಮೋರ್ಚಾದ ಕಾರ್ಯಕರ್ತನ ಹತ್ಯೆಯಾಗಿರುವ ಬಗ್ಗೆ ತಕ್ಷಣ ಪೂರ್ಣ ತನಿಖೆಯಾಗಬೇಕು. ಕೊಲೆ ಹಿಂದೆ ರಾಜಕೀಯದ ಉದ್ದೇಶವಿದೆಯಾ‌‌ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Wed, 19 April 23