ನಂದಿನಿ ನಮ್ಮ ಕರ್ನಾಟಕದ ಸ್ವತ್ತು, ಇದಕ್ಕೆ ಕೈ ಹಾಕಿದರೆ ರಕ್ತ ಕ್ರಾಂತಿ ಮಾಡಬೇಕಾಗುತ್ತೆ: ಸಿಎಂ ಇಬ್ರಾಹಿಂ

|

Updated on: Apr 07, 2023 | 4:13 PM

ನಮ್ಮ ಕೆಎಂಎಫ್​ನ್ನು ಅಮೂಲ್​ಗೆ ಸೇರಿಸಲು ಹೊರಟಿದ್ದಾರೆ. ನಂದಿನಿ ನಮ್ಮ ಕರ್ನಾಟಕದ ಕನ್ನಡಿಗರ ಸ್ವತ್ತು. ಇದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಹಾಲಿನ ಕ್ರಾಂತಿ ಆಗಲ್ಲ, ರಕ್ತ ಕ್ರಾಂತಿ ಮಾಡಬೇಕಾಗುತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಚಿಕ್ಕಮಗಳೂರು: ನಮ್ಮ ಕೆಎಂಎಫ್​ನ್ನು (KMF nandini milk) ಅಮೂಲ್​ಗೆ ಸೇರಿಸಲು ಹೊರಟಿದ್ದಾರೆ. ನಂದಿನಿ ನಮ್ಮ ಕರ್ನಾಟಕದ ಕನ್ನಡಿಗರ ಸ್ವತ್ತು. ಇದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಹಾಲಿನ ಕ್ರಾಂತಿ ಆಗಲ್ಲ, ರಕ್ತ ಕ್ರಾಂತಿ ಮಾಡಬೇಕಾಗುತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ಜಿಲ್ಲೆಯ ಕಡೂರು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಗುಜರಾತ್ ಮಾರ್ವಾಡಿಗಳಿಗೆ ಮಾರಾಟ ಮಾಡಲು ನಾವು ತಯಾರಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಏನಾದರೂ ಮಾಡಿ ಕೆಎಂಎಫ್​ನ್ನು ಗುಜರಾತ್​ಗೆ ಸೇರಿಸಲು ಹೊರಟಿದ್ದಾರೆ. ಅದಾನಿ, ಅಂಬಾನಿ, ಲೋಪಾನಿ, ಕಲ್ಯಾಣಿ, ಚುಂಚಾಣಿ ಯಾವ ಸುಡುಗಾಡಿದಾವೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ಗುಜರಾತ್ ಮಾಡೆಲ್ ಅಂತ. ಸ್ವಾಮಿ, ನಮ್ಮೂರಲ್ಲಿ ಪಾನಿಪೂರಿ ಮಾರೋನು ಗುಜರಾತ್​​ ಅವನೇ. ನಿಮ್ಮ ಭಾಗ ನಮಗೆ ಬೇಕಾಗಿಲ್ಲ, ಕನ್ನಡಿಗರು ಕೊಡುವವರು, ಬೇಡುವವರಲ್ಲ ಎಂದು ವಾಗ್ದಾಳಿ ಮಾಡಿದರು.

ಕಾರ್ಯಕರ್ತರೇ ಇದು ನಿಮ್ಮ ಮನೆ, ನೀವೆಲ್ಲರೂ ವಾಪಸ್ ಬನ್ನಿ. ಕೈಮುಗಿದು ಕೇಳಿಕೊಳ್ಳುತ್ತೇನೆ, ನಿಮ್ಮ ಮನೆಗೆ ವಾಪಸ್​​ ಬಂದುಬಿಡಿ ಎಂದು JDS ಬಿಟ್ಟು ಕಾಂಗ್ರೆಸ್​ಗೆ ಹೋದವರನ್ನು ಇಬ್ರಾಹಿಂ ಆಹ್ವಾನಿಸಿದರು.  ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಪುಣ್ಯಾತ್ಮ ಇದ್ದರು. ಕೊಡುವ ಜಾಗದಲ್ಲಿ ಇಟ್ಟಿದ್ದೆವು, ಬೇಡೋ ಜಾಗಕ್ಕೆ ಹೋಗಿದ್ದಾರೆ ಎಂದು ವೈಎಸ್​ವಿ ದತ್ತಾ ವಿರುದ್ಧ ಲೇವಡಿ ಮಾಡಿದರು.

ಇದನ್ನೂ ಓದಿ: YSV Datta: ವೈಎಸ್​ವಿ ದತ್ತಾ ಅವರಿಂದ ಜೆಡಿಎಸ್ ಪಕ್ಷಕ್ಕೆ ದೋಖಾ: ಕುಮಾರಸ್ವಾಮಿ ವಾಗ್ದಾಳಿ

ಮನೆ ಯಜಮಾನಿಗೆ 2 ಸಾವಿರ ಕೊಡುವುದಾಗಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮನೆಯ ಯಜಮಾನಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. 2 ಸಾವಿರ ಕೊಟ್ಟು ಮನೆಯಲ್ಲಿ ಅತ್ತೆ-ಸೊಸೆ ಜಗಳ ತಂದಿಡುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ವೈಎಸ್​ವಿ ದತ್ತಾ ಜೆಡಿಎಸ್​​ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ: ಹೆಚ್​.ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮಾತನಾಡಿ, ವೈಎಸ್​ವಿ ದತ್ತಾ ಜೆಡಿಎಸ್​​ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ. ಹೆಚ್​​.ಡಿ.ದೇವೇಗೌಡರು ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡರು. ಬಿಜೆಪಿ ಜತೆ ಹೆಚ್​ಡಿಕೆಗೆ​ ಹೊಂದಾಣಿಕೆ ಇದೆ ಎಂದು ಹೇಳಿದ್ದೇ ಹೇಳಿದ್ದು. ವೈಎಸ್​ವಿ ದತ್ತಾರನ್ನು MLC ಮಾಡದಿದ್ರೆ ಕಡೂರು ಜನ ಗುರುತಿಸುತ್ತಿದ್ದರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಇತ್ತ ಬಿಜೆಪಿ ಪರ ಕಿಚ್ಚನ ಅಬ್ಬರದ ಪ್ರಚಾರಕ್ಕೆ ಮುಹೂರ್ತ ಫಿಕ್ಸ್: ಅತ್ತ ಜೆಡಿಎಸ್​ನಿಂದ​ ಸುದೀಪ್​ಗೆ ಶಾಕ್!

ನಾನು ಮಾಡಿದ ಅನ್ಯಾಯ ಏನು, ವಿಧಾನಸೌಧದಲ್ಲಿ 2ನೇ ಸೀಟಲ್ಲಿ ನನ್ನ ಪಕ್ಕ ಕೂರುತ್ತಿದ್ದರು. ಯಾರು ಇಲ್ಲದಾಗ ಪಕ್ಷದ ಗೌರವ ಉಳಿಸಲು ಧನಂಜಯ್ ಬಂದಿದ್ದಾರೆ. ಸ್ವಾಮಿಜಿಗಳ ಕೈಯಲ್ಲಿ ಪಾದಯಾತ್ರೆ ಮಾಡಿಸಿ ಬೀದಿಗೆ ತಂದಿದ್ದು ಬಿಜೆಪಿ. ಒಳಮೀಸಲಾತಿ ವಿಚಾರವಾಗಿ ಪಾದಯಾತ್ರೆ ಮಾಡಿಸಿದ್ದೇ ಬಿಜೆಪಿ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Fri, 7 April 23