IIT Dharwad Inauguration: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು: ನರೇಂದ್ರ ಮೋದಿ

|

Updated on: Mar 12, 2023 | 5:53 PM

852 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಧಾರವಾಡದ ಐಐಟಿ ಕ್ಯಾಂಪಸ್​​ನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದಾರೆ

IIT Dharwad Inauguration: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು: ನರೇಂದ್ರ ಮೋದಿ
ಧಾರವಾಡದಲ್ಲಿ ಮೋದಿ
Follow us on

ಧಾರವಾಡದ ಐಐಟಿಯನ್ನು (IIT Dharwad) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಉದ್ಘಾಟಿಸಿದ್ದಾರೆ. ಈ ಕ್ಯಾಂಪಸ್ ಗೆ ಮೋದಿಯವರೇ ಫೆಬ್ರವರಿ 2019 ರಲ್ಲಿ ಶಂಕು ಸ್ಥಾಪನೆ ಮಾಡಿದ್ದರು. ₹850 ಕೋಟಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.  ಸಂಸ್ಥೆಯಲ್ಲಿ ಪ್ರಸ್ತುತ 4-ವರ್ಷದ ಬಿ.ಟೆಕ್, ಇಂಟರ್ ಡಿಸಿಪ್ಲಿನರಿ 5-ವರ್ಷದ BS-MS ಪ್ರೋಗ್ರಾಂ,ಪಿಎಚ್.ಡಿ ಮತ್ತು ಎಂ ಟೆಕ್ ಕೋರ್ಸ್ ಗಳಿವೆ. ಈ ಕ್ಯಾಂಪಸ್ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಐಐಟಿ ಕ್ಯಾಂಪಸ್ ಎಂದು ಹೇಳಲಾಗುತ್ತದೆ. ವಿದ್ಯತ್ ಮತ್ತು ನೀರು ಸ್ವಾವಲಂಬಿ, ಸುಸ್ಥಿರತೆಯ ಶೂನ್ಯ ಪಳೆಯುಳಿಕೆ ನಿರ್ಮಾಣದೊಂದಿಗೆ ಮಾನವ ಸೌಕರ್ಯ, ಪರಿಸರ ಮತ್ತು ಐತಿಹಾಸಿಕ ಮೂಲಗಳನ್ನು ಸಂರಕ್ಷಿಸುವುದು ಹೊಸ ಐಐಟಿ ಕ್ಯಾಂಪಸ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಕ್ಯಾಂಪಸ್ ಮಾಲಿನ್ಯ ಮುಕ್ತವಾಗಿಸಲು ಕ್ಯಾಂಪಸ್‌ನಲ್ಲಿ ಸೈಕಲ್‌ಗಳು ಮತ್ತು ಇ-ವಾಹನಗಳನ್ನು ಮಾತ್ರ ಬಳಸಲಾಗುವುದು. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪ್ರತಿರೂಪವಾದ ಕಲ್ಲಿನ ರಥದ ಪ್ರತಿಕೃತಿಯು ಆವರಣದ ಪ್ರವೇಶದ್ವಾರದಲ್ಲಿದೆ.


ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದ್ದಾರೆ.

ಧಾರವಾಡದಲ್ಲಿರುವ ಐಐಟಿಯ ಹೊಸ ಕ್ಯಾಂಪಸ್ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಇದು ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಬೇಕು.ಕಳೆದ ಒಂಬತ್ತು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ನಾವು ಏಮ್ಸ್ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಏಳು ದಶಕಗಳಲ್ಲಿ, ದೇಶವು ಕೇವಲ 380 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಕಳೆದ 9 ವರ್ಷಗಳಲ್ಲಿ 250 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಹೇಳಿದರು.


ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣವನ್ನು ಟೀಕಿಸಿದ ಮೋದಿ ಭಾರತವು ಕೇವಲ ಅತಿದೊಡ್ಡ ಪ್ರಜಾಪ್ರಭುತ್ವವಲ್ಲ, ಅದು ಪ್ರಜಾಪ್ರಭುತ್ವದ ತಾಯಿಯಾಗಿದೆ.ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ… ಕೆಲವರು ಭಾರತದ ಪ್ರಜಾಪ್ರಭುತ್ವವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿಯನ್ನು ಹೆಸರಿಸದೆ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಲ್ಲಿ “ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್” ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ದಾಖಲೆಯನ್ನು ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ. 1,507 ಮೀ ಉದ್ದದ ಫ್ಲಾಟ್ ಫಾರ್ಮ್ ಸುಮಾರು ರೂ. 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ

ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಮೇಲ್ದರ್ಜೆಗೇರಿಸಿರುವ ಹೊಸಪೇಟೆ ನಿಲ್ದಾಣವನ್ನೂ ಮೋದಿ ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ ಭದ್ರಕೋಟೆಯಲ್ಲಿ ಮೋದಿ ಮೋಡಿ, ರೋಡ್‌ಶೋನಲ್ಲಿ ಪ್ರಧಾನಿ ಮೇಲೆ ಕೇಸರಿ ಹೂ ಮಳೆ, ಫೋಟೋಗಳಲ್ಲಿ ನೋಡಿ

530 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುದ್ದೀಕರಣ ಯೋಜನೆಯು ವಿದ್ಯುತ್ ನಿಂದ  ತಡೆರಹಿತ ರೈಲು ಕಾರ್ಯಾಚರಣೆಯನ್ನು ಸ್ಥಾಪಿಸುತ್ತದೆ. ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಹಂಪಿ ಸ್ಮಾರಕಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ.

250 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ ಭಾಗದ ಜನರಿಗೆ ಹೃದ್ರೋಗ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ. ರೂ. 1,040 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಕೂಡ ಶಂಕು ಸ್ಥಾಪನೆ ಮಾಡಲಾಗಿದೆ.

ಸುಮಾರು 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:55 pm, Sun, 12 March 23