ಬೆಂಗಳೂರಿನಲ್ಲಿಂದು ಮೋದಿ ಹವಾ: ಅಪ್ಪಿತಪ್ಪಿಯೂ ಈ ಮಾರ್ಗಗಳಲ್ಲಿ ಸಂಚರಿಸಬೇಡಿ, ರೋಡ್​ ಶೋ ಸಂಪೂರ್ಣ ವಿವರ ಹೀಗಿದೆ

|

Updated on: May 06, 2023 | 9:23 AM

ಇಡೀ ಬೆಂಗಳೂರು ಕೇಸರಿಮಯವಾಗಿದೆ. ಎಲ್ಲಾ ರೀತಿಯ ಸಿದ್ಧತೆಯೂ ಪೂರ್ಣಗೊಂಡಿದೆ. ಇಂದು ಪ್ರಧಾನಿ ಮೋದಿ ರೋಡ್​ ಶೋನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿಂದು ಮೋದಿ ಹವಾ: ಅಪ್ಪಿತಪ್ಪಿಯೂ ಈ ಮಾರ್ಗಗಳಲ್ಲಿ ಸಂಚರಿಸಬೇಡಿ, ರೋಡ್​ ಶೋ ಸಂಪೂರ್ಣ ವಿವರ ಹೀಗಿದೆ
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಬದಲಾವಣೆ: ಇಲ್ಲಿದೆ ರೂಟ್ ಮ್ಯಾಪ್​
Follow us on

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು(Karnataka Assembly Elections 2023), ಕೊನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ ಇಂದು(ಮೇ 06) ಮತ್ತು ನಾಳೆ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ಇಡೀ ಬೆಂಗಳೂರು ಕೇಸರಿಮಯವಾಗಿದೆ. ಎಲ್ಲಾ ರೀತಿಯ ಸಿದ್ಧತೆಯೂ ಪೂರ್ಣಗೊಂಡಿದೆ. ಇಂದು ಪ್ರಧಾನಿ ಮೋದಿ ರೋಡ್​ ಶೋನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ

ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ನೀಟ್ ಎಕ್ಸಾಂ ಇರೋ ಕಾರಣಕ್ಕೆ ರೋಡ್ ಶೋ ಪ್ಲ್ಯಾನ್​ ಅದಲು ಬದಲಾಗಿದೆ. ಭಾನುವಾರ ನಡೀಬೇಕಿದ್ದ ರೂಟ್​​ನಲ್ಲಿ ಶನಿವಾರ ರೋಡ್ ಶೋ ನಡೆಯಲಿದೆ. ಶನಿವಾರ ಪ್ರಧಾನಿ ಮೋದಿ ಬರೋಬ್ಬರಿ 26 ಕಿಲೋ ಮೀಟರ್ ರೋಡ್ ನಡೆಸಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆಯೂ ನಡೆದಿದೆ. ರೋಡ್ ಶೋ ನಡೆಯೋ ಮಾರ್ಗದ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಟ್ರಾಫಿಕ್ ಸಮಸ್ಯೆ ಆಗದಂತೆ ಪೊಲೀಸರೂ ಎಲ್ಲ ರೀತಿಯ ತಯಾರಿ ಮಾಡ್ಕೊಂಡಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ 1.30ರವರೆಗೆ ರೋಡ್ ಶೋ

ಇಂದು(ಮೇ 06) ಬೆಳಗ್ಗೆ 9.15ಕ್ಕೆ ರಾಜಭವನದಿಂದ ಪ್ರಧಾನಿ ಮೋದಿ ಹೊರಡಲಿದ್ದು ಬೆಳಗ್ಗೆ 9.25ಕ್ಕೆ ರಸ್ತೆ ಮಾರ್ಗವಾಗಿ ಮೇಖ್ರಿ ಸರ್ಕಲ್ ಬಳಿಯ HQTC ಹೆಲಿಪ್ಯಾಡ್ ತಲುಪಲಿದ್ದಾರೆ. ಬೆಳಗ್ಗೆ 9.30ಕ್ಕೆ HQTC ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ 9.50ಕ್ಕೆ ಲೊಯೊಲಾ ಕಾಲೇಜು ಹೆಲಿಪ್ಯಾಡ್ ತಲುಪಲಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಪ್ರಧಾನಿರನ್ನು ಸ್ವಾಗತಿಸಲು ಬಿಜೆಪಿ 6 ಮುಖಂಡರು ಹಾಜರಾಗಲಿದ್ದಾರೆ. ಬಳಿಕ ಲೊಯೊಲಾ ಕಾಲೇಜು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಯಾಣಿಸಿ ಬೆಳಗ್ಗೆ 10 ಗಂಟೆಗೆ ಸೋಮೇಶ್ವರ ಭವನ ತಲುಪಿ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಲಿದೆ. ಬಿಬಿಎಂಪಿ ಪೌರಕಾರ್ಮಿಕರು ಸಿರ್ಸಿ ಸರ್ಕಲ್‌ ಬಳಿ ಬೃಹತ್ ಸಂಖ್ಯೆಯಲ್ಲಿ ಪ್ರಧಾನಿಗೆ ಪುಷ್ಪವೃಷ್ಟಿ ಮಾಡಲಿದ್ದಾರೆ. ಸಿರ್ಸಿ ಸರ್ಕಲ್‌ನಲ್ಲಿ 1 ನಿಮಿಷ ರೋಡ್ ಶೋ ವಾಹನ ನಿಲುಗಡೆ ಸಾಧ್ಯತೆ ಇದೆ. ರೋಡ್ ಶೋದಲ್ಲಿ ಪ್ರಧಾನಿ ಜೊತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಾನಗರದ ಜನತೆಯ ಕಾಣುವುದನ್ನು ಎದುರುನೋಡುತ್ತಿದ್ದೇನೆ; ಮೋದಿ

ಮೇ 6 ರಂದು ಎಲ್ಲೆಲ್ಲಿ ಪ್ರಧಾನಿ ಮೋದಿ ರೋಡ್​ ಶೋ

  • 10:00 AM – ಶ್ರೀ ಸೋಮೇಶ್ವರ ಸಭಾ ಭವನ
  • 10.10 AM – ಜೆಪಿ ನಗರ 5ನೇ ಹಂತ
  • 10:20AM – ಜಯನಗರ 5ನೇ ಬ್ಲಾಕ್
  • 10:30 AM – ಜಯನಗರ 4ನೇ ಬ್ಲಾಕ್
  • 10:40 AM – ಸೌತ್ ಎಂಡ್ ಸರ್ಕಲ್
  • 10:45 AM – ಮಾಧವರಾವ್ ವೃತ್ತ
  • 11:00 AM – ರಾಮಕೃಷ್ಣ ಆಶ್ರಮ
  • 11:05 AM – ಉಮಾ ಥಿಯೇಟರ್ ಸಿಗ್ನಲ್
  • 11:15 AM – ಮೈಸೂರು ರಸ್ತೆ ಸಿಗ್ನಲ್
  • 11:25 AM – ಟೋಲ್ ಗೇಟ್ ಸಿಗ್ನಲ್
  • 11:35 AM – ಗೋವಿಂದರಾಜನಗರ
  • 11:45 AM – ಮಾಗಡಿ ರೋಡ್ ಜಂಕ್ಷನ್
  • 12:00 AM – ಶಂಕರ್ ಮಠ ಚೌಕ್
  • 12:20 PM – ಮಲ್ಲೇಶ್ವರಂ ವೃತ್ತ
  • 12:30 PM – 18ನೇ ಅಡ್ಡ ರಸ್ತೆ ಜಂಕ್ಷನ್ ಸಂಪಿಗೆ ರಸ್ತೆ

ಬೆಂಗಳೂರಲ್ಲಿ 34 ರಸ್ತೆಗಳು ಕಂಪ್ಲೀಟ್ ಬಂದ್

ಬೆಳಗ್ಗೆ 10 ಗಂಟೆಗೆ ರೋಡ್ ಶೋ ನಡೆಯೋದ್ರಿಂದ ಬೆಳಗ್ಗೆ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ತಿದ್ದಾರೆ. ಮೋದಿ ರೋಡ್ ಶೋ ನಡೆಯುವ ಸ್ಥಳಗಳ ಒಟ್ಟು 34 ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಬೆಂಗಳೂರಿಗರೂ ಮಧ್ಯಾಹ್ನ 1.30ರವರೆಗೂ ಈ ರಸ್ತೆ ಬಳಸದೇ ಇದ್ರೆ ಸೂಕ್ತ.

ಮೇ 6ರಂದು ಈ ರಸ್ತೆಗಳನ್ನ ಬಳಸಬೇಡಿ!

ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ ನಗರ & ಶಿರ್ಸಿ ಸರ್ಕಲ್ ರಸ್ತೆಗಳಲ್ಲಿ ನಿರ್ಬಂಧ ಇರಲಿದೆ. ಹಾಗೇನೆ, ಜೆ.ಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಬುಲ್ ಟೆಂಪಲ್ ರೋಡ್, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಚಾಮರಾಜಪೇಟೆ ರಸ್ತೆ, ಬಾಳೆಕಾಯಿ ಮಂಡಿ ರಸ್ತೆಗಳಲ್ಲೂ ಸಂಚಾರ ಮಾಡದೇ ಪರ್ಯಾಯ ಮಾರ್ಗ ಹುಡುಕಿಕೊಂಡ್ರೆ ಒಳ್ಳೇದು. ಇನ್ನು ಮೋದಿ ಅಸ್ಪತ್ರೆ ರೋಡ್, ನವರಂಗ ರಸ್ತೆ, ಎಂಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆಯನ್ನ ಬಳಸೋರು ಈ ಕಡೆ ಬರದೇ ಬೇರೆ ದಾರಿಯಲ್ಲಿ ಹೋಗಬೇಕಾಗಿ ಸೂಚಿಸಲಾಗಿದೆ.

ಪ್ರಧಾನಮಂತ್ರಿ ಮೋದಿ ರೋಡ್​ ಶೋಗೆ ಪೊಲೀಸ್ ಬಂದೋಬಸ್ತ್‌

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ನಗರಾದ್ಯಂತ 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್‌ನಲ್ಲಿ ಭಾಗಿಯಾಗಲಿದ್ದಾರೆ. ಸಂಚಾರಿ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಹತ್ತು ಡಿಸಿಪಿಗಳು ಸೇರಿ ಭದ್ರತೆಗಾಗಿ 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸುಮಾರು 150 ಕೆಎಸ್ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:03 am, Sat, 6 May 23