ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಬಳಿಕ ಮತ ಕ್ರೋಡೀಕರಣಕ್ಕಾಗಿ ಕರ್ನಾಟಕದ ಬಿಜೆಪಿ ಸರ್ಕಾರವು ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈಗಾಗಲೇ ಎಸ್ಸಿ ಒಳ ಮೀಸಲಾತಿ ವಿಚಾರವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗವು ವರದಿ ಸಲ್ಲಿಸಿದ್ದು, ಆಯೋಗದ ವರದಿ ಜಾರಿಗೊಳಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ವರದಿಯ ಪ್ರಕಾರ ಎಸ್ಸಿ ಬಲಗೈ ಸಮುದಾಯಗಳಿಗೆ ಶೇ 5, ಎಸ್ಸಿ ಎಡಗೈ ಸಮುದಾಯಗಳಿಗೆ ಶೇ 6ರ ಮೀಸಲಾತಿ ನಿಗದಿಪಡಿಸಲಾಗಿದೆ. ಬೋವಿ ಮತ್ತು ಬಂಜಾರಾ ಸಮುದಾಯಗಳಿಗೆ ಶೇ 1 ಹಾಗೂ ಇತರರಿಗೆ ಶೇ 3ರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ವರದಿಯು ಶಿಫಾರಸು ಮಾಡಿದೆ. ಹೆಚ್ಚುವರಿ ಮೀಸಲಾತಿಗೆ ಅನುಗುಣವಾಗಿ ಒಳಮೀಸಲಾತಿ ಪರಿಷ್ಕರಣೆ ಮಾಡಲು ಸರ್ಕಾರವು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಇನ್ನೂ ಮಂಡನೆಯಾಗಿಲ್ಲ. ಆದರೆ ಈ ವರದಿಯಲ್ಲಿ ಪ್ರಸ್ತಾಪಿಸಿರುವ ಎಸ್ಸಿ ಒಳ ಮೀಸಲಾತಿಯ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ. ಒಳ ಮೀಸಲಾತಿ ಅನುಷ್ಠಾನದ ಮೂಲಕ ಎಸ್ಸಿ ಸಮುದಾಯದ ಮನಗೆಲ್ಲುವ ಬಗ್ಗೆಯೂ ರಾಜ್ಯ ಸರ್ಕಾರವು ಚುನಾವಣಾ ತಂತ್ರ ಹೆಣೆದಿದೆ. ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೀಸಲಾತಿ ಬಗ್ಗೆ ಆಗಾಗ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿದೆ. ಈ ಮೂಲಕ ಮತಗಳನ್ನು ತನ್ನ ಪರವಾಗಿ ಕ್ರೋಡೀಕರಿಸಿಕೊಳ್ಳಲು ಬಿಜೆಪಿಯು ಯತ್ನಿಸುತ್ತಿದೆ ಎಂದು ವಿಶ್ಲೇಷಿಲಾಗುತ್ತಿದೆ.
ಬಿಜೆಪಿ ಹಿಂದೇಟು ಹಾಕದು: ನಾರಾಯಣಸ್ವಾಮಿ
ಒಳ ಮೀಸಲಾತಿ ಜಾರಿ ವಿಷಯದಲ್ಲಿ ಬಿಜೆಪಿಯು ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮೈಸೂರಿನಲ್ಲಿ ಹೇಳಿದ್ದರು. ‘ಬಿಜೆಪಿಯಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಬಹುಶಃ ಕಾಂಗ್ರೆಸ್ನ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದವರೆಲ್ಲರೂ ಒಳಮೀಸಲಾತಿ ಪರವಾಗಿಯೇ ಇದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.
‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ಶಿಫಾರಸುಗಳ ಜಾರಿಗೆ ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿದೆ. ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯ ಶಿಫಾರಸನ್ನೂ ಶೀಘ್ರ ಜಾರಿಗೊಳಿಸಲಾಗುವುದು. ಈ ಮೂಲಕ ಎಲ್ಲ ಸಮುದಾಯಗಳಿಗೂ ಮುಕ್ತ ಅವಕಾಶ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: 4 ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿದ್ದ ವಿಕಾಸ್ ಬನ್ಸೋಡೆ ಸಿಟಿ ರವಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ
Published On - 11:46 am, Tue, 15 November 22