ನಾನು ಸ್ಪರ್ಧಿಸುವುದಿಲ್ಲ, ಕುಟುಂಬದವರಿಗೂ ಟಿಕೆಟ್ ಬೇಡ; ಪಕ್ಷನಿಷ್ಠೆ ಮೆರೆದ ಬಿಜೆಪಿಯ ಎಸ್​ಎ ರವೀಂದ್ರನಾಥ್

|

Updated on: Apr 10, 2023 | 3:57 PM

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗೆ ಘೋಷಿಸಿದ್ದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್​ಎ ರವೀಂದ್ರನಾಥ್, ಕುಟುಂಬದವರಿಗೂ ಟಿಕೆಟ್ ನೀಡುವಂತೆ ಆಗ್ರಹಿಸದೆ ಪಕ್ಷ ನಿಷ್ಠೆ ಮೆರೆದಿದ್ದಾರೆ.

ನಾನು ಸ್ಪರ್ಧಿಸುವುದಿಲ್ಲ, ಕುಟುಂಬದವರಿಗೂ ಟಿಕೆಟ್ ಬೇಡ; ಪಕ್ಷನಿಷ್ಠೆ ಮೆರೆದ ಬಿಜೆಪಿಯ ಎಸ್​ಎ ರವೀಂದ್ರನಾಥ್
ಎಸ್​ಎ ರವೀಂದ್ರನಾಥ್
Image Credit source: Facebook
Follow us on

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗೆ ಘೋಷಿಸಿದ್ದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್​ಎ ರವೀಂದ್ರನಾಥ್ (SA Ravindranath), ಕುಟುಂಬದವರಿಗೂ ಟಿಕೆಟ್ ನೀಡುವಂತೆ ಆಗ್ರಹಿಸದೆ ಪಕ್ಷ ನಿಷ್ಠೆ ಮೆರೆದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬೆಂಬಲಿಗರು ರವೀಂದ್ರನಾಥ್ ಮೇಲೆ ಭಾರೀ ಒತ್ತಡ ಹಾಕಿದ್ದರು. ಆದಾಗ್ಯೂ ಅವರು ಚುನಾವಣಾ ಕಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಸ್ವ ಇಚ್ಛೆಯಿಂದ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

‘ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ’

ರವೀಂದ್ರನಾಥ್ ಅವರ ಪುತ್ರ ಎಸ್​​ಆರ್ ಬಸವರಾಜ್ ಶಿಗಮಗೊಂಡನಹಳ್ಳಿ ಗ್ರಾಪಂ ಸದಸ್ಯರಾಗಿದ್ದಾರೆ. ರವೀಂದ್ರನಾಥ್ ಅವರಿಗೆ ಇಬ್ಬರು ಪುತ್ರಿಯರೂ ಇದ್ದು, ಈ ಪೈಕಿ ಒಬ್ಬರು ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಹಾಗೂ ಇನ್ನೊಬ್ಬರು ಹಾಲಿ ಮಹಾನಗರ ಪಾಲಿಕೆ ಸದಸ್ಯೆ. ಕುಟುಂಬದವರಿಗೆ, ಮಕ್ಕಳಿಗೆ ಟಿಕೆಟ್ ನೀಡುವಂತೆಯೂ ರವೀಂದ್ರನಾಥ್ ವರಿಷ್ಠರಿಗೆ ಮವನಿ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರ ಪರ ಪ್ರಚಾರ ಮಾಡುವೆ ಎಂದು ಹೇಳಿದ್ದಾರೆ. ಆ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ ಎಂದು ಸ್ಥಳೀಯ ಕಾರ್ಯಕರ್ತರು ಹೇಳಿದ್ದಾರೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 1994, 1999 ಹಾಗೂ 2004 ಮೂರು ಸಲ ಶಾಸಕ ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ 2008 ಹಾಗೂ 2018 ಹೀಗೆ ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದ ರವೀಂದ್ರನಾಥ್, ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿ ಮನೆಗೆ ಬರುತ್ತಿರುವ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಖಡಾಖಂಡಿತವಾಗಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬೆನ್ನಲ್ಲೇ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮತ್ತೋರ್ವ ಬಿಜೆಪಿ ಶಾಸಕ

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಉತ್ತರಕ್ಕೆ ಎಸ್​​ಎ ರವೀಂದ್ರನಾಥ್​ ಅಭ್ಯರ್ಥಿ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಅವರು, ನನಗೆ ಟಿಕೆಟ್​ ಬೇಡ, ಹೊಸಬರಿಗೆ ಅವಕಾಶ ಕೊಡಿ ಎಂದು ಹೇಳಿದ್ದರು. ಯಡಿಯೂರಪ್ಪ ಅವರು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅವರಾದ ಬಳಿಕ ಹಿರಿಯ ಅಂದರೆ ನಾನೇ ಇರೋದು. ಹಾಗಾಗಿ ನಾನು ಕೂಡ ನಿವೃತ್ತಿ ಘೋಷಣ ಮಾಡಿಕೊಂಡಿದ್ದೇನೆ. ಪಕ್ಷ ಯಾರಿಗೆ ಟಿಕೆಟ್​ ನೀಡುತ್ತದೆ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಇತ್ತೀಚೆಗೆ ತೀರ್ಮಾನ ಮಾಡಿದ್ದು, ಮುಂದೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ