ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ ತನ್ನ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಕೆಲವೆಡೆ ಬಂಡಾಯ ಎದ್ದಿದ್ದಾರೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಕ್ಷೇತ್ರವಾಗಿದ್ದ ಶಿಕಾರಿಪುರದಲ್ಲಿ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದು ಸ್ವತಃ ಕೈ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ. ವಿಜಯೇಂದ್ರ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕಾರ್ಯಕರ್ತರು ಸಿದ್ದರಾಮಯ್ಯ (Siddaramaiah) ಅವರ ನಿವಾಸಕ್ಕೆ ತೆರಳಿ ಗದ್ದಲ ಮಾಡಿದ್ದಲ್ಲದೆ, ನಾಗರಾಜುಗೌಡ (Nagaraj Gowda) ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕ ವಿಜಯೇಂದ್ರ ಗೆಲ್ಲಿಸಲು ಅವರ ವಿರುದ್ಧ ಕಾಂಗ್ರೆಸ್ ಸೂಕ್ತ ಅಭ್ಯರ್ಥಿ ಹಾಕುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ನಿವಾಸದ ಎದುರು ಗದ್ದಲ ಎಬ್ಬಿಸಿದ ಶಿಕಾರಿಪುರ ಕ್ಷೇತ್ರದ ಕೈ ಕಾರ್ಯಕರ್ತರು, ಗೋಣಿ ಮಹಾಂತೇಶ್ಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದಿಲ್ಲ. ನಾಗರಾಜುಗೌಡ ಅವರಿಗೆ ಶಿಕಾರಿಪುರದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹ ಮಾಡಿದ್ದಾರೆ. ವಿಜಯೇಂದ್ರ ಗೆಲ್ಲಿಸಲು ಹೋಗಬೇಡಿ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಪೊಲೀಸರ ಜೊತೆಯೂ ವಾಗ್ವಾದ ನಡೆಸಿದರು.
ಶಿಕಾರಿಪುರ ಕ್ಷೇತ್ರದ ಕಾಂಗ್ರಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಿದ್ದರಾಮಯ್ಯ ಮನೆ ಮನೆಗೆ ಆಗಮಿಸಿದ್ದ ವೇಳೆ ಭಿನ್ನಮತ ಸ್ಫೋಟಗೊಂಡಿದೆ. ಗೋಣಿ ಮಹಾಂತೇಶ್ ಅವರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಅವರ ಹಿಂದೆ ಹತ್ತು ಕಾರ್ಯಕರ್ತರೂ ಇಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಪ್ರಬಲ ಅಭ್ಯರ್ಥಿ ಬಿಟ್ಟು ಡಮ್ಮಿ ಅಭ್ಯರ್ಥಿ ಹಾಕುತ್ತಿದ್ದಾರೆ. ವಿಜಯೇಂದ್ರ ವಿರುದ್ಧ ಪ್ರಬಲ ನಾಯಕ ನಾಗರಾಜ್ ಗೌಡಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಎಲ್ಲ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಆಕ್ರೋಶ ಹೊರಹಾಕಿ ಧಿಕ್ಕಾರ ಕೂಗಲಾಗಿದೆ.
ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರವಾಗುತ್ತಿರುವ ಬಗ್ಗೆ ಘೋಷಣೆ ಮಾಡಿದಾಗಲೇ ಪುತ್ರ ಬಿವೈ ವಿಜಯೇಂದ್ರ ತಮ್ಮ ಉತ್ತರಾಧಿಕಾರಿಯಾಗುವ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸುವ ಸೂಚನೆ ನೀಡಿದ್ದರು. ಬಳಿಕ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆದಿದೆ. ಆದರೆ ಯಡಿಯೂರಪ್ಪ ಅವರ ಸೂಚನೆಯಂತೆ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸಲು ಮುಂದಾಗಿದ್ದಾರೆ. ವಿಜಯೇಂದ್ರಗೆ ವರುಣಾ ಕ್ಷೇತ್ರ ಬೇಡ, ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾನೆ ಎಂದು ಯಡಿಯೂರಪ್ಪ ಅವರು ಈ ಹಿಂದೆ ಹೇಳಿಕೆ ನೀಡಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Fri, 7 April 23