ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಇದೀಗ ಅಧಿಕೃತಗೊಂಡಿದೆ. ಬೆಂಗಳೂರು ನಗರದ ಕ್ವೀನ್ಸ್ ರೋಡ್ನಲ್ಲಿರುವ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಸಭಾ ಭವನದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸಿಎಲ್ಪಿ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ನಿರ್ಣಯ ಮಂಡನೆ ಮಾಡಿದರು. ಈ ನಿರ್ಣಯಕ್ಕೆ ಶಾಸಕರೆಲ್ಲರೂ ಅನುಮೋದಿಸಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರಿಗೆ ನಾಯಕರು ಹೂಗುಚ್ಛ ನೀಡಿ ಅಭಿನಂದಿಸಿದರು.
ಶಾಸಕಾಂಗ ಪಕ್ಷದ ಸಭೆಯು ಕೇವಲ 25 ನಿಮಿಷಗಳ ಕಾಲ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ಶಾಸಕರಾದ ಆರ್ ವಿ ದೇಶಾಪಂಡೆ, ಶಿವಾನಂದ ಪಾಟೀಲ್, ತನ್ವೀರ್ ಸೇಠ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ, ನಾಗೇಂದ್ರ, ಶಿವರಾಜ್ ತಂಗಡಗಿ, ಎಂ ಕೃಷ್ಣಪ್ಪ, ನಯನ ಮೋಟಮ್ಮ, ಎಚ್ ಡಿ ತಮ್ಮಯ್ಯ ಸೇರಿದಂತೆ ಹಲವು ಶಾಸಕರು ಹಾಜರಿದ್ದರು.
ಇದನ್ನೂ ಓದಿ: ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸ್ವಾಗತಕ್ಕೆ ಸಿದ್ಧತೆ: ಹೇಗಿದೆ ನೋಡಿ ಪೊಲೀಸ್ ಬಂದೋಬಸ್ತ್
#Karnataka | Congress Legislative Party (CLP) meeting was held at the party office in Bengaluru today.
The CLP approved the name of Siddaramaiah as the CLP leader.
(Pictures: Karnataka Pradesh Congress Committee) pic.twitter.com/mmKBGTXz8W
— ANI (@ANI) May 18, 2023
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಪ್ರತ್ಯೇಕ ದ್ವಾರಗಳ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ವಾಸ್ತು ಪ್ರಕಾರ ಕೆಪಿಸಿಸಿ ಕಛೇರಿಯ ಎಡಬಾಗದಲ್ಲಿ ಪ್ರತ್ಯೇಕ ದ್ವಾರದಲ್ಲಿ ಡಿಕೆ ಶಿವಕುಮಾರ್ ಅವರು ಎಂಟ್ರಿಕೊಟ್ಟರೆ, ಎಲ್ಲಾ ಶಾಸಕರು ಬಂದ ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಕಚೇರಿ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಶಾಸಕಾಂಗ ಪಕ್ಷದ ಸಭೆ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತಿತರರು ರಾಜಭವನಕ್ಕೆ ತೆರಳಿದರು.
ಸಭೆಯಲ್ಲಿ ಮಾತನಾಡಿದ ಎಐಸಿಸಿ ವೀಕ್ಷಕ ಸುಶೀಲ್‌ಕುಮಾರ್ ಶಿಂಧೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತ್ಯಾಗವನ್ನು ಪಕ್ಷ ಮರೆಯಲ್ಲ. ಅವರ ತ್ಯಾಗಕ್ಕೆ ದೊಡ್ಡ ಹುದ್ದೆ ಕೂಡ ಸಿಗಲಿದೆ ಎಂದರು. ಮಹಾರಾಷ್ಟ್ರದಲ್ಲಿ ನಾನು ಪಿಸಿಸಿ ಅಧ್ಯಕ್ಷರಾಗಿದ್ದಾಗ ಅಧಿಕಾರಕ್ಕೆ ಬಂದಿದ್ದೇವೆ. ಆಗ ನನಗೆ ಸಿಎಂ ಸ್ಥಾನ ಕೊಟ್ಟಿರಲಿಲ್ಲ, ಬಳಿಕ ರಾಜ್ಯಪಾಲರ ಹುದ್ದೆ ನೀಡಿದ್ದರು ಎಂದು ನೆನಪಿಸಿಕೊಂಡರು.
ಇದೇ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಮ್ಮ ಗೆಲುವಿಗೆ ನಾವು ಕಾರ್ಯಕರ್ತರಿಗೆ ಅಭಿನಂದನೆಗಳು ತಿಳಿಸಬೇಕು. ಇದು ಕಾಂಗ್ರೆಸ್ಗೆ ಐತಿಹಾಸಿಕ ಗೆಲುವಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರಿಗೂ ಅಭಿನಂದನೆಗಳು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Thu, 18 May 23