ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರಮಾಣವಚನ ಸಮಾರಂಭ: ಕೈ ಆಡಳಿತ ರಾಜ್ಯಗಳ ಸಿಎಂಗಳು ಭಾಗಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುವ ಸಾಧ್ಯತೆ ಇದೆ.
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಇದಕ್ಕಾಗಿ ಬೆಂಗಳೂರು ನಗರದಲ್ಲಿರುವ ಕಂಠೀರವಣ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಸಮಾರಂಭ ಕಾರ್ಯಕ್ರಮಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ನೂತನ ಸಿಎಂ, ಡಿಸಿಎಂ ಪ್ರಮಾಣವಚನ ಸಮಾರಂಭಕ್ಕೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸೇತರ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಶರದ್ ಪವಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಹ್ವಾನ ನೀಡಿದ್ದಾರೆ. ಅದೇ ರೀತಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು, ಛತ್ತೀಸಗಢ ಸಿಎಂ ಭೂಪೇಶ್ ಬಾಘೆಲ್, ಬಿಹಾರ್ ಸಿಎಂ ನಿತೀಶ್ ಕುಮಾರ್, ತಮಿಳು ನಾಡು ಸಿಎಂ ಎಂ.ಕೆ ಸ್ಟಾಲಿನ್ ಸೇರಿದಂತೆ ನೆರೆಹೊರೆಯ ರಾಜ್ಯಗಳ ಕಾಂಗ್ರೆಸ್ ಮತ್ತಿತರ ಪಕ್ಷಗಳ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಎಂ ಆಯ್ಕೆ ಬಳಿಕ ಖಾತೆ ಕ್ಯಾತೆ ಶುರು: ಮತ್ತೆ ದಿಲ್ಲಿಗೆ ಡಿಕೆ ಶಿವಕುಮಾರ್-ಸಿದ್ದರಾಮಯ್ಯ
ಕಳೆದ ನಾಲ್ಕೈದು ದಿನಗಳಿಂದ ಕಗ್ಗಂಟಾಗಿದ್ದ ಸಿಎಂ ಆಯ್ಕೆ ಸಂಬಂಧ ಕೊನೆಗೂ ಹೈಕಮಾಂಡ್ ಬಗೆಹರಿಸಿದೆ. ಬುಧವಾರ ತಡರಾತ್ರಿ ವರೆಗೆ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾಜುರ್ನ ಖರ್ಗೆ ಸುದೀರ್ಘ ರ್ಚೆ, ಸಭೆಗಳನ್ನು ಮಾಡಿ ಡಿಕೆ ಶಿವಕುಮಾರ್ ಅವರ ಮನವೊಲಿಸಿದ್ದಾರೆ. ಮೇ 20ರಂದು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಿದ್ಧತೆ ಗುರುವಾರ ಮತ್ತೆ ಆರಂಭವಾಗಿದೆ. ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಸಮಾರಂಭಕ್ಕೆ ಶಾಸಕರು, ವಿಐಪಿಗಳು ಸೇರಿದಂತೆ 50,000 ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Thu, 18 May 23