Karnataka Politics: ಕಾಂಗ್ರೆಸ್​ನಲ್ಲಿ ಮತ್ತೆ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರದ ಚರ್ಚೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 09, 2022 | 11:20 AM

ಮಗ ಡಾ ಯತೀಂದ್ರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Karnataka Politics: ಕಾಂಗ್ರೆಸ್​ನಲ್ಲಿ ಮತ್ತೆ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರದ ಚರ್ಚೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ (Siddaramaiah) ಕ್ಷೇತ್ರ ಬದಲಾವಣೆ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ, ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಅವರು ಬಾದಾಮಿ ಕ್ಷೇತ್ರದಲ್ಲಿಯೇ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಧಾನಪರಿಷತ್ ಚುನಾವಣೆಯ ಪ್ರಚಾರಕ್ಕೆಂದು ಕಳೆದ ಡಿಸೆಂಬರ್ ತಿಂಗಳಲ್ಲಿ ಬಾದಾಮಿಗೆ ಹೋಗಿದ್ದಾಗ ವೇದಿಕೆಯಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದ ಚಿಮ್ಮನಕಟ್ಟಿ, ‘ವರುಣ ಕ್ಷೇತ್ರ ಬಿಟ್ಟು ಬಾದಾಮಿಗೆ ಯಾಕೆ ಬಂದ್ರಿ? ನಿಮಗೆ ಮೈಸೂರಿನ ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆದರೆ ನನಗಿರುವುದು ಇದೊಂದೇ ಕ್ಷೇತ್ರ. ಅವರ ಕ್ಷೇತ್ರದಲ್ಲಿ ಅವರು ಗೆದ್ದರೆ ಯೋಗ್ಯತೆ ಇರುತ್ತದೆ’ ಎಂದು ನೇರವಾಗಿ ಹರಿಹಾಯ್ದಿದ್ದರು. ಈ ಬೆಳವಣಿಗೆ ಸಿದ್ದರಾಮಯ್ಯ ಅವರಿಗೆ ಇರಿಸುಮುರಿಸು ಉಂಟು ಮಾಡಿತ್ತು. ನಂತರದ ದಿನಗಳಲ್ಲಿ ಬಾದಾಮಿ ಕ್ಷೇತ್ರದಲ್ಲಿ ಅವರು ಮಾಡುತ್ತಿದ್ದ ಭಾಷಣಗಳು, ‘ಸಿದ್ದರಾಮಯ್ಯ ಕ್ಷೇತ್ರ ಬಿಡಬಹುದು’ ಎಂಬ ಮಾತುಗಳಿಗೆ ಪುಷ್ಟಿ ನೀಡುವಂತೆಯೇ ಇದ್ದವು.

ಈ ನಡುವೆ ಸಿದ್ದರಾಮಯ್ಯ ಅವರು ಕೋಲಾರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಹಲವು ಬಾರಿ ಜಮೀರ್ ಅಹ್ಮದ್ ಅವರು, ‘ಸಿದ್ದರಾಮಯ್ಯ ಇಷ್ಟಪಟ್ಟರೆ ಕ್ಷೇತ್ರತ್ಯಾಗಕ್ಕೆ ಸಿದ್ಧ’ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವಷ್ಟು ಜನಪ್ರಿಯತೆ, ಅಭಿಮಾನಿಗಳು ನಗರ ಪ್ರದೇಶದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿಸಲಿಲ್ಲ’ ಎಂದು ಹೇಳಲಾಗಿದೆ.

ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ದಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಟಿಕೊಡುವಂತೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಹ್ವಾನವನ್ನೂ ನೀಡಿದ್ದರು. ‘ನೀವು ಚುನಾವಣೆಗೆ ನಿಲ್ಲುವುದಾದರೆ ನಿಮ್ಮನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸುತ್ತೇವೆ’ ಎಂಬ ಭರವಸೆಯನ್ನೂ ನೀಡಿದ್ದರು.

ಶಾಸಕರಾದ ಕೆ. ಶ್ರೀನಿವಾಸ್, ಕೆ. ರಮೇಶ್ ಕುಮಾರ್‌, ಕೃಷ್ಣ ಬೈರೇಗೌಡ, ಎಂ.ಸಿ.ಸುಧಾಕರ್‌, ಕೊತ್ತನೂರು ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದಲ್ಲಿ ಇದ್ದರು. ಆದರೆ ಕೋಲಾರದಲ್ಲಿ ಸ್ಪರ್ಧಿಸುವ ಸಂಬಂಧ ಸಿದ್ದರಾಮಯ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ‘ಕೋಲಾರದ ಕಾಂಗ್ರೆಸ್ ನಾಯಕರಲ್ಲಿ ವೈಮನಸ್ಸು ಹೆಚ್ಚು. ಒಳಜಗಳಗಳು ಗೆಲುವಿನ ಮೇಲೆ ಪರಿಣಾಮ ಬೀರಬಹುದು’ ಎಂದು ಸಿದ್ದರಾಮಯ್ಯ ಆಪ್ತರು ಎಚ್ಚರಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೋಲಾರದ ಸ್ಪರ್ಧೆಗೆ ಒಲವು ತೋರಲಿಲ್ಲ ಎಂದು ಮೂಲಗಳು ಹೇಳಿವೆ.

ಮತ್ತೆ ತವರಿನತ್ತ ಸಿದ್ದರಾಮಯ್ಯ

ಬಿಜೆಪಿ ನಾಯಕ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಈ ಬೆಳವಣಿಗೆಯು ಸಿದ್ದರಾಮಯ್ಯ ಅವರ ಆಲೋಚನಾ ವೈಖರಿಯ ಮೇಲೆಯೂ ಪರಿಣಾಮ ಬೀರಿದೆ. ಮಗ ಡಾ ಯತೀಂದ್ರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಆಸಕ್ತಿ ತೋರುತ್ತಿದ್ದಾರೆ. ತಂದೆಗಾಗಿ ಕ್ಷೇತ್ರ ಬಿಡಲು ಸಿದ್ಧ ಎಂದು ಯತೀಂದ್ರ ಘೋಷಿಸಿದ್ದಾರೆ. ಇತರ ಕ್ಷೇತ್ರಗಳಿಗೆ ಹೋದರೆ ಬೆಂಬಲಿಗರ ಕಾರ್ಯವೈಖರಿಯು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಆದರೆ ವರುಣದಲ್ಲಿ ಸ್ಪರ್ಧಿಸಿದರೆ ಚುನಾವಣಾ ಹೊಣೆಗಾರಿಕೆ ಮಗನದ್ದೇ ಆಗಿರುತ್ತದೆ ಎನ್ನುವುದು ಈ ಲೆಕ್ಕಾಚಾರದ ಮೂಲ ಅಂಶ.

ಮಗ ಯತೀಂದ್ರ ಕ್ಷೇತ್ರದಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡರೆ ಸಿದ್ದರಾಮಯ್ಯ ನಿರ್ಭಿಡೆಯಿಂದ ರಾಜ್ಯ ಪ್ರವಾಸ ನಡೆಸಬಹುದು ಎಂದು ಕಾರ್ಯಕರ್ತರೂ ಧೈರ್ಯ ತುಂಬಿದ್ದಾರೆ. ಯತೀಂದ್ರ ಸಲಹೆ ಬಳಿಕ ವರುಣಾ ಕ್ಷೇತ್ರದಲ್ಲಿ ರೋಡ್ ಮಾಡಿರುವ ಸಿದ್ದರಾಮಯ್ಯ ಸಮುದಾಯದ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು

Published On - 11:20 am, Tue, 9 August 22