ಲಿಂಗಾಯತರ ಬಗ್ಗೆ ಹೇಳಿಕೆ; ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಕೆ

|

Updated on: Apr 25, 2023 | 7:43 PM

ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿತ್ತು. ಇದೀಗ ಮಾನನಷ್ಟ ಮೊಕದ್ದಮೆ ಕೂಡ ಹೂಡಲಾಗಿದೆ.

ಲಿಂಗಾಯತರ ಬಗ್ಗೆ ಹೇಳಿಕೆ; ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಕೆ
ಸಿದ್ದರಾಮಯ್ಯ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮಯದಲ್ಲೇ ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಚುನಾವಣೆ ಆಯೋಗಕ್ಕೆ (Election Commission) ದೂರು ನೀಡಲಾಗಿತ್ತು. ಇದೀಗ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ (Defamation case) ಕೂಡ ಹೂಡಲಾಗಿದೆ. ಶಂಕರ್ ಶೇಟ್ ಎಂಬುವರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ (Magistrate Court) ಇಂದು (ಏಪ್ರಿಲ್ 25) ಖಾಸಗಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು.

ಲಿಂಗಾಯತ ಸಿಎಂ ಭ್ರಷ್ಟಾಚಾರ ಎಸಗಿ, ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸದ್ಯ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಇನ್ನೊಂದೆಡೆ ಸಮುದಾಯದ ಜನರು ಕಿಡಿ ಕಾರುತ್ತಿದ್ದಾರೆ. ಹೇಳಿಕೆ ನೀಡಿದ ಬೆನ್ನಲ್ಲೇ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕವು ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಮಾನನಷ್ಟ ಮೊಕದ್ದಮೆ ಕೂಡ ದಾಖಲಾಗಿದೆ.

ಸಿದ್ದರಾಮಯ್ಯ ಇಡೀ ಲಿಂಗಾಯತ ಸಮುದಾಯವನ್ನು ನಿಂದಿಸಿದ್ದಾರೆ. ಇಡೀ ಲಿಂಗಾಯತ ಸಮುದಾಯವನ್ನ ತೇಜೋವಧೆ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ದೂರಿನಲ್ಲಿ ಆಗ್ರಹಿಸಲಾಗಿದೆ ಎಂದು ಘಟಕದ ಮುಖಂಡ ಬಸವರಾಜ್ ಹೇಳಿದ್ದರು. ನಾವು ಯಾವುದೇ ಪಕ್ಷದ ಪರವಾಗಿ ಆಯೋಗಕ್ಕೆ ದೂರು ನೀಡಿಲ್ಲ ಅಂತಾನೂ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Amit Shah: ಲಿಂಗಾಯತ ಸಮುದಾಯವೇ ಸಿದ್ದರಾಮಯ್ಯ ಟಾರ್ಗೆಟ್; ಅಮಿತ್ ಶಾ ವಾಗ್ದಾಳಿ

ಇದು ವೀರಶೈವ ಲಿಂಗಾಯತ ಸಮುದಾಯಕ್ಕೆ ಧಕ್ಕೆ ತರುವಂತಹ ಕೆಲಸ. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಭಾರೀ ಆಕ್ರೋಶ ಉಂಟು ಮಾಡಿದೆ. ಈ ಹಿಂದೆ ವೀರಶೈವ ಲಿಂಗಾಯತ ಸಮುದಾಯ ಒಡೆಯಲು ಯತ್ನಿಸಿದ್ದರು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆರೋಪಿಸಿದೆ. ಕ್ಷಮೆಯಾಚಿಸದಿದ್ದರೆ ನೀವು ತಕ್ಕ ಪಾಠ ಕಲಿಯಬೇಕಾಗುತ್ತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಲಾಗಿದೆ.

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕೂಡ ಮುಗಿಬೀಳುತ್ತಿದ್ದು, ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಹೇಳಿದೆ. ಲಿಂಗಾಯತ ಸಮುದಾಯವು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟಾರ್ಗೆಟ್ ಆಗಿದೆ. ಸಿದ್ದರಾಮಯ್ಯ ಯಾವಾಗಲೂ ಲಿಂಗಾಯತರನ್ನು ಅವಮಾನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಸ್ಪಷ್ಟನೆ 

ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Tue, 25 April 23