ತುಮಕೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ತುಮಕೂರು ನಗರ (Tumkur) ಬಿಜೆಪಿಯಲ್ಲಿ (BJP) ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಸಿಗದೆ ನಿರಾಶರಾಗಿರುವ ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಬಿಜೆಪಿಗೆ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗತೊಡಗಿದೆ. ತುಮಕೂರಿನ ಮಾಕಂ ಕಲ್ಯಾಣ ಮಂಟಪದಲ್ಲಿ ಬುಧವಾರ ಬೆಂಬಲಿಗರ ಜತೆ ಸಭೆ ನಡೆಸಿರುವ ಶಿವಣ್ಣ, ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಬಳಿಕ ಮಾತನಾಡಿ, ನಾನು ಉಸಿರು ಇರೋವರೆಗೂ ನಿಮ್ಮ ಸೇವಕನಾಗಿರುತ್ತೇನೆ. ನಾನು ಟಿಕೆಟ್ ಕೊಡಿ ಎಂದು ಮನವಿ ಮಾಡಿದೆ. ಆದರೆ, ಅದಕ್ಕೆ ಬೆಲೆ ನೀಡಲಿಲ್ಲ. ಮುಂದೆ ಏನು ಮಾಡಲಿ ಎಂಬುದನ್ನು ನೀವೇ ತಿಳಿಸಿ ಎಂದು ಬೆಂಬಲಿಗರ ಬಳಿ ವಿನಂತಿಸಿದರು.
ಶಿವಣ್ಣ ಅಭಿಪ್ರಾಯ ಕೇಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಬೆಂಬಲಿಗರು, ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಆಗ್ರಹಿಸಿದರು.
ನನ್ನ ಮನೆಯೊಳಗೆ ಬಾವುಟಗಳಿವೆ. ಅವುಗಳನ್ನು ಮೊದಲು ಅದನ್ನ ಬೇರೆಡೆಗೆ ವರ್ಗಾವಣೆ ಮಾಡುತ್ತೇನೆ. ಆ ಬಳಿಕ ಮಾಧ್ಯಮಗಳನ್ನು ಕರೆಸಿ ರಾಜೀನಾಮೆ ನಿರ್ಧಾರ ಅಧಿಕೃತವಾಗಿ ಪ್ರಕಟಿಸುತ್ತೇನೆ ಎಂದು ಸೊಗಡು ಶಿವಣ್ಣ ಹೇಳಿದರು.
ಇದನ್ನೂ ಓದಿ: R Shankar: ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆರ್. ಶಂಕರ್ ರಾಜೀನಾಮೆ
ನಾಮಪತ್ರ ಸಲ್ಲಿಸಲು ದಿನಾಂಕ ತಿಳಿಸುತ್ತೇನೆ ಎಂದ ಅವರು, ಪರೋಕ್ಷವಾಗಿ ಜ್ಯೋತಿ ಗಣೇಶ್ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಜೆಪಿ ಟಿಕೆಟ್ ದೊರೆಯದ ಬಗ್ಗೆ ಅಸಮಾಧಾನಗೊಂಡಿರುವ ಆರ್. ಶಂಕರ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಲಕ್ಷ್ಮಣ ಸವದಿ ಕೂಡ ಘೋಷಿಸಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ ಬೆಂಬಲಿಸಿ 400ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಸೊಗಡು ಶಿವಣ್ಣಗೆ ತುಮಕೂರು ನಗರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:54 pm, Wed, 12 April 23