AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜೆಪಿ ನಡ್ಡಾ ಜೊತೆ ಇಂಗಿತ ವ್ಯಕ್ತಪಡಿಸಿದ್ದೇನೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್​​ ತಪ್ಪುವ ಸಾಧ್ಯತೆ ಹಿನ್ನೆಲೆ ಪಕ್ಷದ ವಿರುದ್ಧ ಜಗದೀಶ್ ಶೆಟ್ಟರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಹೈಕಮಾಂಡ್ ದೆಹಲಿಗೆ ಆಹ್ವಾನಿಸಿತ್ತು. ಅದರಂತೆ ಇಂದು ದೆಹಲಿಗೆ ತೆರಳಿದ ಶೆಟ್ಟರ್, ಜೆಪಿ ನಡ್ಡಾ ಜೊತೆ ಮಾತುಕತೆ ನಡೆಸಿದ್ದಾರೆ.

ಹಾಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜೆಪಿ ನಡ್ಡಾ ಜೊತೆ ಇಂಗಿತ ವ್ಯಕ್ತಪಡಿಸಿದ್ದೇನೆ: ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ ಮತ್ತು ಜೆಪಿ ನಡ್ಡಾ
Rakesh Nayak Manchi
|

Updated on:Apr 12, 2023 | 7:23 PM

Share

ನವದೆಹಲಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ (Hubballi-Dharwad Central) ಟಿಕೆಟ್​ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagdish Shettar) ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದೆ. ಬಳಿಕ ಮಾತನಾಡಿದ ಶೆಟ್ಟರ್, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈ ಬಾರಿಗೂ ಸ್ಪರ್ಧಿಸಬೇಕು ಎಂದುಕೊಂಡಿದ್ದೇನೆ. ಹೀಗಾಗಿ ನನ್ನ ಮನಸ್ಸಿನಲ್ಲಿದ್ದ ಎಲ್ಲಾ ಅಭಿಪ್ರಾಯವನ್ನು ಜೆಪಿ ನಡ್ಡಾ (JP Nadda) ಬಳಿ ಹೇಳಿದ್ದೇನೆ. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದೇನೆ. ನನ್ನ ಭಾವನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಲಿಸಿದ್ದಾರೆ. ಹಿರಿಯರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ ಎಂದರು.

ಮಾತುಕತೆ ವೇಳೆ ನನ್ನ ಜೊತೆ ಪ್ರಲ್ಹಾದ್ ಜೋಶಿ ಇದ್ದರು. ಸ್ಥಳೀಯ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿಸಿದ್ದೇವೆ. ಅಕ್ಕಪಕ್ಕದ ಜಿಲ್ಲೆಗಳ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಚರ್ಚೆ ಮಾಡಿ ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದಿದ್ದಾರೆ. ಒಂದಷ್ಟು ವಿಚಾರಗಳನ್ನು ನಾವು ಕೂಡ ಅವರಿಗೆ ಹೇಳಬೇಕಾಗುತ್ತದೆ. ಅವರು ತೆಗೆದುಕೊಳ್ಳುವ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದರು.

ಮತ್ತೆ ಯಾರನ್ನು ಭೇಟಿಯಾಗುವುದಿಲ್ಲ: ಜಗದೀಶ್ ಶೆಟ್ಟರ್

ಜೆಪಿ ನಡ್ಡಾ ಅವರ ಜೊತೆ ಆಹ್ಲಾದಕರವಾದ ಚರ್ಚೆ ನಡೆದಿದೆ ಎಂದು ಹೇಳಿದ ಜಗದೀಶ್ ಶೆಟ್ಟರ್, ಎಲ್ಲ ಮನವಿಯನ್ನು ಕೇಳಿಸಿಕೊಂಡಿದ್ದಾರೆ. ಮತ್ತೆ ನಾನು ಯಾರನ್ನು ಭೇಟಿಯಾಗುವುದಿಲ್ಲ. ಇನ್ನೊಂದು ಎರಡು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಎಲ್ಲಿಯೂ ನಾನು ಸಿಟ್ಟು ಮಾಡಿಕೊಂಡಿಲ್ಲ. ಟಿಕೆಟ್ ಕೊಡುತ್ತಾರೋ ಬಿಡುತ್ತಾರೋ ಅದನ್ನು ನಾನು ಹೇಳುವುದಿಲ್ಲ. ಇವತ್ತಿನ ಭೇಟಿಯಿಂದ ನನಗೆ ಸಮಾಧಾನವಾಗಿದೆ. ಇವತ್ತು ಮಧ್ಯರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ಗೆ ಪಕ್ಷ ಟಿಕೆಟ್ ಕೊಟ್ಟೇ ಕೊಡುತ್ತದೆ: ಬಿಎಸ್​ ಯಡಿಯೂರಪ್ಪ

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರ ಹೆಸರು ಇರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶೆಟ್ಟರ್​ ಅವರನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ದಿಢೀರ್ ಬುಲಾವ್ ನೀಡಿತ್ತು. ಅದರಂತೆ ಇಂದು ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ್ದ ಶೆಟ್ಟರ್, ಮಂತ್ರಿ ಸ್ಥಾನ ಸಿಗದಿದ್ದರೂ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕೆಲಸ ಮಾಡುವುದಕ್ಕೆ ಮಂತ್ರಿ ಸ್ಥಾನವೇ ಬೇಕು ಅಂತೇನಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಯಕರಿಂದ ಪಾಸಿಟಿವ್ ರೆಸ್ಪಾನ್ಸ್ ಬರಬಹುದು ಎಂದು ಟಿಕೆಟ್​ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Wed, 12 April 23