ಬೆಂಗಳೂರು: ನನ್ನ ಪ್ರಕಾರ ಕಾಂಗ್ರೆಸ್ನಲ್ಲಿ (Congress) ನಾಲ್ಕು ಜನರು ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ. ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramiah) ಇಬ್ಬರೇ ಇದ್ದರು. ಆದರೆ ಅವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ (MB Patil) ಕೂಡ ಸಿಎಂ ರೇಸ್ನಲ್ಲಿದ್ದಾರೆ ಅಂತ ಅನ್ನಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ನವರು 2 ಸಾವಿರ ರೂಪಾಯಿ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ, ಅದು ಕೇವಲ ಭರವಸೆ ಆಗಿರುತ್ತದೆ. ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟಿರುವ ಭರವಸೆಯ ಏನಾಯ್ತು? ಹಲವಾರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಭರವಸೆ ಈಡೇರಿಸಿಲ್ಲ. ನಾವು ಗ್ಯಾರಂಟಿ ಅಂತ ಹೇಳಿಲ್ಲ, ಭರವಸೆ ಕೊಡುತ್ತಿಲ್ಲ. ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಪಾಸಿಟಿವ್ ಪ್ರಚಾರದ ಮೇಲೆ ಹೋಗಲು ನಿರ್ಧರಿಸಿದೆ ಎಂದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿಯ ಅತಿರಥ ಲಕ್ಷಣ್ ಸವದಿಗೆ ಕಾಂಗ್ರೆಸ್ ಗಾಳ
ದೇಶ ಮೂಲಭೂತ ಸೌಕರ್ಯ, ಸಂಪರ್ಕ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿತ್ತು, ಇದರ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಹೆಜ್ಜೆ ಇಟ್ಟರು. ಸ್ವಚ್ಚತೆಯ ಮೂಲ ಆದ್ಯತೆ ಎನ್ನುತ್ತಿದ್ದರು, ಆದರೆ ಶೌಚಾಲಯವೇ ಇರಲಿಲ್ಲ. ಮಹಿಳೆಯರು ಶೌಚಕ್ಕೆ ಹೋಗಬೇಕಾದರೇ ಕತ್ತಲಾಗುವವರೆಗೆ ಕಾಯಬೇಕಿತ್ತು. ಉತ್ತರ ಕರ್ನಾಟಕದ ಹಲವು ಕಡೆ ಹಗಲು ಹೊತ್ತಲ್ಲಿ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇರಲಿಲ್ಲ. ಕಾರಿನ ಬೆಳಕು ಬಿದ್ದರೆ ಎದ್ದು ನಿಲ್ಲುವ ಪರಿಸ್ಥಿತಿ ಇತ್ತು ಎಂದು ಹೇಳಿದರು.
ಸ್ವಚ್ಚ ಭಾರತ್ ಕಾರ್ಯಕ್ರಮ ಮಾಡಲು ಮೋದಿ ಪೊರಕೆ ಹಿಡಿದರು. ಇದಕ್ಕೆ ವಿಪಕ್ಷಗಳು ನಕ್ಕಿದ್ದವು. ಸೌದೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಇತ್ತು, ಗ್ಯಾಸ್ ಇಲ್ಲದ ಮನೆಗೆ ಗ್ಯಾಸ್ ಕೊಡುವ ಕೆಲಸ ಮಾಡಲಾಗಿದೆ. ಮಹಿಳೆಯರ ದೃಷ್ಟಿಯಿಂದ ಚಿಂತನೆ ಮಾಡಿ ಉಜ್ವಲ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಘೋಷಣೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಎಂದು ತಿಳಸಿದರು.
CRPF ನೇಮಕಾತಿ ಪರೀಕ್ಷೆ ಬರೆಯಲು ಕನ್ನಡದಲ್ಲಿ ಅವಕಾಶ ನೀಡುವ ವಿಚಾರವಾಗಿ ಮಾತನಾಡಿದ ಅವರು ಈ ಸಂಬಂಧ ಕೇಂದ್ರ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಚರ್ಚಿಸುವೆ ಎಂದರು.
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:14 pm, Tue, 11 April 23