ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ; ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬನ್ನಿ ಎಂದು ಆಹ್ವಾನ

|

Updated on: Apr 26, 2023 | 2:05 PM

ಡಬಲ್​ ಇಂಜಿನ್ ಸರ್ಕಾರ ಪಿಎಫ್​ಐ ನಿಷೇಧಿಸಿದೆ. ಕಾಂಗ್ರೆಸ್​ ತುಷ್ಟೀಕರಣಕ್ಕಾಗಿ ಪಿಎಫ್​ಐ ಸಂಘಟನೆ ಪೋಷಿಸುತ್ತಿತ್ತು. ಯಾವುದೇ ಅಭಿವೃದ್ಧಿ ಮಾಡದೇ ರೌಡಿಗಳಿಗೆ ಬೆಂಬಲ ನೀಡುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ; ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬನ್ನಿ ಎಂದು ಆಹ್ವಾನ
ಯೋಗಿ ಆದಿತ್ಯನಾಥ್
Follow us on

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023)ಕೆಲವೇ ದಿನಗಳು ಬಾಕಿ ಇದ್ದು ಪ್ರಚಾರ ಕಾರ್ಯ ರಂಗೇರುತ್ತಿದೆ. ಚುನಾವಣೆ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರ ಮಟ್ಟದ ಸ್ಟಾರ್ ಪ್ರಚಾರಕರು ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇಂದು (ಏಪ್ರಿಲ್ 26) ಸಕ್ಕರೆ ನಾಡು ಮಂಡ್ಯಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್( Yogi Adityanath) ಎಂಟ್ರಿ ಕೊಟ್ಟಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ನಾನಾ ತಂತ್ರ ಹೆಣೆಯುತ್ತಿದ್ದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚಿಸಿದ ಬುಲ್ಡೋಜರ್ ಬಾಬಾ ಎಂದೇ ಕರೆಯಲ್ಪಡುವ ಯೋಗಿ ಆದಿತ್ಯನಾಥ್ ಅವರು ಮಂಡ್ಯದಲ್ಲಿ ರೋಡ್ ಶೋ ನಡೆಸಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ 500 ಮೀಟರ್ ರೋಡ್ ಶೋ ನಡೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ಹೂವು ಎರಚಿ ಬಿಜೆಪಿ ಕಾರ್ಯಕರ್ತರು ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸಿದರು. ಬಳಿಕ ಯೋಗಿ ಆದಿತ್ಯನಾಥ್ ಜನರತ್ತ ಕೈ ಬೀಸುತ್ತಾ 500 ಮೀಟರ್ ರೋಡ್ ಶೋ ನಡೆಸಿದರು. ಇದಾದ ನಂತರ ಮಂಡ್ಯದ ಮಹಾವೀರ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿಯಾದ್ರು. ಸಮಾವೇಶದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಕಾಲಭೈರವ, ಕೆಂಪೇಗೌಡರ ಪಂಚ ಲೋಹದ ವಿಗ್ರಹ ಉಡುಗೊರೆ ನೀಡಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಷ್, ಸಚಿವರಾದ ಅಶ್ವತ್ಥ್ ನಾರಾಯಣ್, ಕೆ.ಸಿ.ನಾರಾಯಣಗೌಡ ಭಾಗಿಯಾಗಿದ್ರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೌಡಿಗಳನ್ನು ಮಟ್ಟ ಹಾಕಲಾಗಿದೆ

ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕಳೆದ 6 ವರ್ಷಗಳಿಂದ ಯುಪಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಈ ಹಿಂದಿನ ಸರ್ಕಾರಗಳು ರೌಡಿಗಳನ್ನು ಪೋಷಣೆ ಮಾಡುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೌಡಿಗಳನ್ನು ಮಟ್ಟ ಹಾಕಲಾಗಿದೆ. ರೌಡಿಗಳು ಬಾಲ ಬಿಚ್ಚಿದ್ರೆ ಅಂಥವರ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಡಬಲ್​ ಇಂಜಿನ್ ಸರ್ಕಾರ ಪಿಎಫ್​ಐ ನಿಷೇಧಿಸಿದೆ. ಕಾಂಗ್ರೆಸ್​ ತುಷ್ಟೀಕರಣಕ್ಕಾಗಿ ಪಿಎಫ್​ಐ ಸಂಘಟನೆ ಪೋಷಿಸುತ್ತಿತ್ತು. ಯಾವುದೇ ಅಭಿವೃದ್ಧಿ ಮಾಡದೇ ರೌಡಿಗಳಿಗೆ ಬೆಂಬಲ ನೀಡುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.

ಮಂಡ್ಯದ ಕುಂಭಮೇಳದ ಸಮಯದಲ್ಲಿ ನಾನು ಭಾಗಿ ಆಗ್ಬೇಕಿತ್ತು. ಆದರೆ ತೀವ್ರ ಅತಿವೃಷ್ಠಿಯಿಂದ ಬರಲು ಸಾದ್ಯವಾಗಲಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದ್ರು ಭಾರತೀಯರನ್ನ ಗಣ್ಯತ ಭಾವದಿಂದ ಕಾಣ್ತಾರೆ. ವಿಶ್ವದ ಅತಿ ಶಕ್ತಿಯುತ ದೇಶಗಳ ಪೈಕಿ ಭಾರತ 5 ನೇ ಸ್ಥಾನದಲ್ಲಿದೆ. ಭಾಷಣದ ವೇಳೆ ರಾಜಧಾನಿ ಬೆಂಗಳೂರನ್ನ ನೆನೆದ ಯೋಗಿ, ಬೆಂಗಳೂರು ಏಟಿ ಹಬ್ ಆಗಿ ಬೆಳೆಯುತ್ತಿದೆ. ಕಾಂಗ್ರೆಸ್ ಅಭಿವೃದ್ದಿ ಅಂತಾರೆ ಆದರೆ ಅವರು ಏನು ಮಾಡಿದ್ದಾರೆ. ಪ್ರತಿಯೊಂದು ಸೆಕ್ಟರ್ ನಲ್ಲಿ ಅಭಿವೃದ್ಧಿ ಪತದತ್ತ ಈಗ ಭಾರತ ಸಾಗುತ್ತಿದೆ. ಮೋದಿ ಸರ್ಕಾರ ಬಂದ ಬಳಿಕ ಅಭಿವೃದ್ಧಿಗಳು ನಡೆಯುತ್ತಿದೆ. ರೈತರು ಬಡವರ್ಗದವರು ಮೋದಿ ಸರ್ಕಾರದಿಂದ ಅನುಕೂಲವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಆತ್ಮಹತ್ಯೆ ನಿಂತಿದೆ. ನನಗೆ ಕೇಳ್ತಾರೆ ಯುಪಿ ಅಭಿವೃದ್ಧಿ ಹೇಗೆ ಸಾಧ್ಯ ಅಂತ
ಇದಕ್ಕೆ ಡಬಲ್ ಇಂಜಿನ್ ಸರ್ಕಾರವೇ ಕಾರಣ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಂಚಾರ ದಟ್ಟಣೆ ಸಾಧ್ಯತೆ

ಆಯೋಧ್ಯೆಯಲ್ಲಿ ಕರ್ನಾಟಕದ ಜನರಿಗೆ ಗೆಸ್ಟ್ ಹೌಸ್ ನಿರ್ಮಾಣ

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. 2024ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ. ಆಯೋಧ್ಯೆಯಲ್ಲಿ ಕರ್ನಾಟಕದ ಜನರಿಗೆ ಗೆಸ್ಟ್ ಹೌಸ್ ನಿರ್ಮಾಣ ಮಾಡುತ್ತೇವೆ. ರಾಮಮಂದಿರ ಉದ್ಘಾಟನೆಗೆ ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತೇನೆ ಎಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಕರ್ನಾಟಕ, ಉತ್ತರ ಪ್ರದೇಶ ನಡುವೆ ಅವಿನಾಭಾವ ಸಂಬಂಧ ಇದೆ

ತ್ರೇತಾಯುಗದಿಂದಲೂ ಯುಪಿ-ಕರ್ನಾಟಕ ನಡುವೆ ಸಂಬಂಧವಿದೆ. ಮಂಡ್ಯದಲ್ಲಿ ಶ್ರೀರಾಮ, ಆಂಜನೇಯ ವನವಾಸದ ಕುರುಹುಗಳಿವೆ. ಕರ್ನಾಟಕದ ಅಂಜನಾದ್ರಿ ಹನುಮ ಹುಟ್ಟಿದ ಜನ್ಮಸ್ಥಳ. ಜಿ-20 ರಾಷ್ಟ್ರಗಳ ನೇತೃತ್ವವನ್ನು ಇಂದು ಭಾರತಕ್ಕೆ ಒದಗಿ ಬಂದಿದೆ. ಐಟಿ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆ ಮಾಡಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಬಹಳಷ್ಟು ಬದಲಾವಣೆಯಾಗಿದೆ. ಭಾರತದಲ್ಲಿ ಇಂದು ಅನೇಕ ಕ್ಷೇತ್ರಗಳಲ್ಲಿ ಬದಲಾವಣೆ ಆಗಿದೆ. ಭಾರತದ ಸಾಮರ್ಥ್ಯ ಏನೆಂಬುದು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಡಬಲ್​ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.

ಕಾಂಗ್ರೆಸ್ ದು ಪೇ ಇಂಜಿನ್ ಸರ್ಕಾರ

ಡಬಲ್ ಇಂಜಿನ್ ಸರ್ಕಾರದಿಂದಲೇ ಆಭಿವೃದ್ದಿ ಸಾಧ್ಯ. ದೇಶದ ಉಜ್ವಲ ಭವಿಷ್ಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಅವಶ್ಯಕತೆಯಿದೆ. ನಾವು ಟೀಂ ಇಂಡಿಯಾ ತರ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ದು ಪೇ ಇಂಜಿನ್ ಸರ್ಕಾರವಾಗಿದೆ. ಮಂಡ್ಯದಲ್ಲಿ ಕಮಲವನ್ನ ಅರಳಿಸಿ ಶಕ್ತಿ ತುಂಬಿ. ಇಲ್ಲಿ ಡಬಲ್ ಇಂಜಿನ್ ಸರ್ಕಾರ ಬರಲು ಸಹಕರಿಸಿ ಎಂದರು. ಕನ್ನಡದಲ್ಲಿ ನಾಡ ಗೀತೆಯ ಸಾಲುಗಳನ್ನ ನುಡಿದ ಯೋಗಿ, ನಾನು ಇಲ್ಲಿನ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸೋಕೆ ಬಂದಿದ್ದೇನೆ ಎಂದು ಕನ್ನಡದಲ್ಲೇ ಮಾತನಾಡಿದರು. ಯೋಗಿ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಯೋಗಿ ಯೋಗಿ ಎಂದು ಘೋಷಣೆ ಕೂಗಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:04 pm, Wed, 26 April 23