ಎರಡೂ ಕ್ಷೇತ್ರಗಳಲ್ಲಿ ವಿ ಸೋಮಣ್ಣ ಸೋಲು: ಕರೆ ಮಾಡಿ ಧೈರ್ಯ ಹೇಳಿದ ಅಮಿತ್​ ಶಾ, ಬಿಎಲ್​ ಸಂತೋಷ್​

|

Updated on: May 14, 2023 | 4:36 PM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ ವಿ. ಸೋಮಣ್ಣಗೆ ಸೋಲುಂಟಾಗಿದ್ದು, ಈ ಹಿನ್ನೆಲೆ ಅಮಿತ್ ಶಾ ಹಾಗೂ ಬಿಎಲ್​ ಸಂತೋಷ್ ಕರೆ ಮಾಡಿ ಮಾತನಾಡಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ವಿ ಸೋಮಣ್ಣ ಸೋಲು: ಕರೆ ಮಾಡಿ ಧೈರ್ಯ ಹೇಳಿದ ಅಮಿತ್​ ಶಾ, ಬಿಎಲ್​ ಸಂತೋಷ್​
ಅಮಿತ್​ ಶಾ, ವಿ.ಸೋಮಣ್ಣ, ಬಿ.ಎಲ್​.ಸಂತೋಷ್
Follow us on

ಬೆಂಗಳೂರು: ಹೈಕಮಾಂಡ್​ ಸೂಚನೆ ಮೇರೆಗೆ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ. ಸೋಮಣ್ಣ (V Somanna) ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವಿರುದ್ಧ ಸೋತರೇ, ಇತ್ತ ವರುಣದಲ್ಲಿ 46 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸಿದ್ಧರಾಮಯ್ಯ ಭರ್ಜರಿ ಜಯಗಳಿಸಿದ್ದು, ವಿ. ಸೋಮಣ್ಣಗೆ ಮತ್ತೆ ಸೋಲುಂಟಾಗಿದೆ. ಈ ಹಿನ್ನೆಲೆ ಫಲಿತಾಂಶ ಬಂದ ಬೆನ್ನಲ್ಲೇ ಸೋಮಣ್ಣಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಪ್​ ಕರೆ ಮಾಡಿದ್ದಾರೆ.

ನಿನ್ನೆ ಸಂಜೆ ಕರೆ ಮಾಡಿ ಮಾತನಾಡಿದ್ದ ಅಮಿತ್​​ ಶಾ ಹಾಗೂ ಬಿಎಲ್​ ಸಂತೋಷ್, ಈ ರೀತಿಯ ಫಲಿತಾಂಶ ಬರುತ್ತದೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಜತೆ ಪಕ್ಷ, ನಾವು ಇರುತ್ತೇವೆ ಎಂದು ಅಮಿತ್​​ ಶಾ ಧೈರ್ಯ ಹೇಳಿದ್ದಾರೆ.

ಹೈಕಮಾಂಡ್ ವಿರುದ್ಧ ವಿ. ಸೋಮಣ್ಣ ಅಸಮಾಧಾನ 

ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ವಿ.ಸೋಮಣ್ಣ, ಸೋತಾಗಿದೆ, ಏನು ಮಾತಾಡಲಿ? ಮಾತಾಡೋದು ಅಗತ್ಯ ಇಲ್ಲ. ಸೋತಿದ್ದೇನೆ ಅಷ್ಟೇ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದ್ದೆ. ಇದನ್ನ ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತೆಂದು ಹೋದೆ. ಇದೀಗ ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ನನ್ನ ಕ್ಷೇತ್ರ ಚಿನ್ನದಂತೆ ಇತ್ತು, ಹೈಕಮಾಂಡ್ ಹೇಳಿತೆಂದು ಹೋದೆ: ಅಸಮಾಧಾನ ಹೊರಹಾಕಿದ ಸೋಮಣ್ಣ

ಬಿಜೆಪಿ, ಯಡಿಯೂರಪ್ಪರನ್ನ ಮೂಲೆಗುಂಪು ಮಾಡಿದ್ದಾರಾ ಎಂಬ ಕುರಿತು ಮಾತನಾಡಿದ ಅವರು ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೀವಲ್ಲ? ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ. ಸೋತ ತಕ್ಷಣ ಎಲ್ಲವೂ ಮುಗಿದು ಹೋಯ್ತಾ? ಪಕ್ಷಕ್ಕೂ ಹಿನ್ನಡೆ ಆಗಿದ್ದು ನಮಗೆಲ್ಲ ಎಚ್ಚರಿಕೆ ಗಂಟೆ.

ಜನರ ತೀರ್ಮಾನ ಇದು, ಬದ್ಧರಾಗಬೇಕು. ದೇಶಕ್ಕೆ ಮೋದಿ ಪ್ರಶ್ನಾತೀತ ನಾಯಕರು, ಅವರ ಕೆಲಸಗಳು ಅವಿಸ್ಮರಣೀಯವಾದದ್ದು, ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಸ್ಕೀಮ್​ಗಳೇ ಅವರ ಗೆಲುವಿಗೆ ಕಾರಣ ಎಂದರು.

ಕಮಲ ಅರಳಿಸಲು ಸಜ್ಜಾಗಿದ್ದ ವಿ ಸೋಮಣ್ಣ

ಗಡಿ ಜಿಲ್ಲೆ ಕಾರಣಕ್ಕೆ ಸಾಧಾರಣ ಕ್ಷೇತ್ರಗಳ ಪಟ್ಟಿಯಲ್ಲಿದ್ದ ಚಾಮರಾಜನಗರವು ರಾತ್ರೋರಾತ್ರಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊರಹೊಮ್ಮಿರುವುದು 2023ರ ಸಾರ್ವತ್ರಿಕ ಚುನಾವಣೆಯ ವಿಶೇಷತೆಗಳಲ್ಲಿ ಒಂದಾಗಿತ್ತು. ರಾಜಧಾನಿ ಹೃದಯ ಭಾಗದ ಸ್ವಕ್ಷೇತ್ರ ಗೋವಿಂದರಾಜನಗರವನ್ನು ಬಿಟ್ಟು ಚಾಮರಾಜನಗರ ಕ್ಷೇತ್ರದಲ್ಲಿ ಕಮಲ ಅರಳಿಸಲು ಸಚಿವ ವಿ ಸೋಮಣ್ಣ ಅಖಾಡಕ್ಕಿಳಿದಿರುವುದು ದಿಢೀರ್‌ ಪರಿವರ್ತನೆಯ ಕೇಂದ್ರ ಬಿಂದುವಾಗಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವವರಲ್ಲಿ ನಾನೂ ಒಬ್ಬ: ಮಾಜಿ ಶಾಸಕ ಬಸವರಾಜ ರಾಯರೆಡ್ಡಿ

ಚಾಮರಾಜನಗರದಿಂದ ಸೋಮಣ್ಣ ಸ್ಪರ್ಧೆ ಅಚ್ಚರಿಯ ಬೆಳವಣಿಗೆ ಏನಲ್ಲ. ಬಿಜೆಪಿ ಸೇರುವುದಕ್ಕೂ ಹಿಂದಿನಿಂದಲೂ ಸೋಮಣ್ಣನವರಿಗೆ ಚಾಮರಾಜನಗರದೊಂದಿಗೆ ಸಂಪರ್ಕವಿತ್ತು. ಹಾಗಾಗಿ ಅವರ ಆಪ್ತ ಬಳಗ, ಬೆಂಬಲಿಗರ ಪಡೆಯೂ ಇತ್ತು. ಇದೇ ಕಾರಣಕ್ಕೆ 2018ರಲ್ಲೂ ಚಾಮರಾಜನಗರ ಸೇರಿದಂತೆ ಆ ಜಿಲ್ಲೆಯ ಗುಂಡ್ಲುಪೇಟೆ ಇಲ್ಲವೇ ಹನೂರಿನಿಂದ ಸೋಮಣ್ಣ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗಿತ್ತು. ಕೊನೆಗೆ ಗೋವಿಂದರಾಜನಗರದಿಂದಲೇ ಸ್ಪರ್ಧಿಸಿದ್ದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ