ಧ್ರುವನಾರಾಯಣ ಹಠಾತ್ ನಿಧನ, ನಂಜನಗೂಡು ಕಾಂಗ್ರೆಸ್​ ಟಿಕೆಟ್ ಯಾರಿಗೆ? ವ್ಯಾಪಕ ಚರ್ಚೆ

|

Updated on: Mar 13, 2023 | 12:28 PM

ಧ್ರುವನಾರಾಯಣ ಹಠಾತ್ ನಿಧನದ ಕಾರಣ ಇದೀಗ ನಂಜನಗೂಡು ಕಾಂಗ್ರೆಸ ಟಿಕೆಟ್​​ ಯಾರಿಗೆ ಎಂಬ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.

ಧ್ರುವನಾರಾಯಣ ಹಠಾತ್ ನಿಧನ, ನಂಜನಗೂಡು ಕಾಂಗ್ರೆಸ್​ ಟಿಕೆಟ್ ಯಾರಿಗೆ? ವ್ಯಾಪಕ ಚರ್ಚೆ
ಆರ್. ಧ್ರುವನಾರಾಯಣ್​ , ಡಾ.ಎಚ್.ಸಿ.ಮಹದೇವಪ್ಪ
Follow us on

ಬೆಂಗಳೂರು: ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್ (R Dhruvanarayana) ಹಠಾತ್​​ ನಿಧನದ ಬೆನ್ನಲ್ಲೇ ಇದೀಗ ನಂಜನಗೂಡು(Nanjangud) ವಿಧಾನಸಭೆ ಕಾಂಗ್ರೆಸ್​ ಟಿಕೆಟ್ ಯಾರಿಗೆ ಎನ್ನುವ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಧ್ರುವನಾರಾಯಣ್​ ಅವರು ನಂಜನಗೂಡು ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದರು.​ ಇನ್ನು ಇದೇ ಕ್ಷೇತ್ರದ ಟಿಕೆಟ್​ಗಾಗಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಡಾ.ಎಚ್.ಸಿ.ಮಹದೇವಪ್ಪ ಕೂಡಾ ಲಾಬಿ ನಡೆಸಿದ್ದಾರೆ. ಧ್ರುವನಾರಾಯಣ ಮತ್ತು ಮಹಾದೇವಪ್ಪ ಇಬ್ಬರೂ ಹೈಕಮಾಂಡ್ ವಲಯದಲ್ಲಿ ವರ್ಚಸ್ಸು ಹೊಂದಿದ್ದರಿಂದ, ಟಿಕೆಟಿಗಾಗಿ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ತಮಗೆ ನಂಜನಗೂಡಿನಿಂದ ತಮ್ಮ ಮಗ ಸುನೀಲ್ ಬೋಸ್​ಗೆ ಟಿ.ನರಸೀಪುರ ಟಿಕೆಟ್ ನೀಡಬೇಕೆನ್ನುವುದು ಡಾ.ಮಹದೇವಪ್ಪನವರ ಒತ್ತಾಯವಾಗಿತ್ತು. ಆದ್ರೆ, ದುರದೃಷ್ಟವಶಾತ್ ಧ್ರುವನಾರಾಯಣ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕಾಂಗ್ರೆಸ್​ ಯಾರಿಗೆ ಎನ್ನುವ ಭಾರೀ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: R Dhruvanarayan: ಆರ್​​ ಧ್ರುವನಾರಾಯಣ ನಿಧನದ ಬೆನ್ನೆಲೆ ಭುಗಿಲೆದ್ದ ಆಕ್ರೋಶ: ಪುತ್ರನಿಗೆ ಟಿಕೆಟ್​ ನೀಡುವಂತೆ ಒತ್ತಾಯ

ಪುತ್ರನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ

ಧ್ರುವನಾರಾಯಣ ನಿಧನರಾಗಿದ್ದರಿಂದ ನಂಜನಗೂಡ ಟಿಕೆಟ್ ಅವರ ಪುತ್ರನಿಗೆ ನೀಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಧ್ರುವನಾರಾಯಣ ನಂಜನಗೂಡು ಟಿಕೆಟ್​ಗಾಗಿ ಅರ್ಜಿಸಲ್ಲಿಸಿದ್ದರು. ಮತ್ತೊಂದೆಡೆ ಸಿದ್ದರಾಮಯ್ಯನವರ ಆಪ್ತ ಮಹದೇವಪ್ಪ ಕೂಡ ಅದೇ ಕ್ಷೇತ್ರದ ಟಿಕೆಟ್​ಗೆ ಅರ್ಜಿ ಹಾಕಿದ್ದರು. ಅಲ್ಲದೇ ಟಿ ನರಸೀಪುರ ಕ್ಷೇತ್ರದ ಟಿಕೆಟ್​ಗಾಗಿ ಪುತ್ರನಿಂದ ಅರ್ಜಿ ಹಾಕಿಸಿದ್ದರು. ಆದ್ರೆ, ಎರಡು ಕ್ಷೇತ್ರಗಳಿಗೆ ತಂದೆ-ಮಗನಿಗೆ ಟಿಕೆಟ್​ ಕೊಡುವುದು ಕಷ್ಟಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೂಲಗಳ ಪ್ರಕಾರ ಧ್ರುವನಾರಾಯಣಗೆ ಟಿಕೆಟ್​ ಫೈನಲ್​ ಆಗಿತ್ತು. ಆದ್ರೆ, ಇದೀಗ ಅವರ ಹಠಾತ್​ ಮರಣ ಹೊಂದಿದ್ದು, ಅವರ ಪುತ್ರನಿಗೆ ಟಿಕೆಟ್​ ನೀಡಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿವೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಿನ್ನೆ (ಮಾ.12) ಧ್ರುವನಾರಾಯಣ ಅಂತ್ಯಕ್ರಿಯೆ ನಡೆಯುವ ವೇಳೆ ಅಭಿಮಾನಿಗಳು ದೊಡ್ಡ ಹೈಡ್ರಾಮವನ್ನೇ ಸೃಷ್ಟಿ ಮಾಡಿದ್ದರು. ಧ್ರುವನಾರಾಯಣ ಅವರ ಹಿರಿಯ ಪುತ್ರ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರ ಮುಂದೆ ಘೋಷಣೆಗಳನ್ನು ಕೂಗಿದ್ದರು. ಧ್ರುವನಾರಾಯಣ ಮತ್ತು ಮಹಾದೇವಪ್ಪ ಜೊತೆಗೆಕಳಲೆ ಕೇಶವಮೂರ್ತಿಯವರೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳಲೆಯವರು ಕೂಡಾ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಾಗಾಗಿ, ನಂಜನಗೂಡು ಟಿಕೆಟಿಗೆ ಭಾರೀ ಪೈಪೋಟಿಯಿತ್ತು. ಇದೀಗ ಧ್ರುವನಾರಾಯಣ ಪುತ್ರ ಟಿಕೆಟ್​ ಅಖಾಡಕ್ಕಿಳಿದಿದ್ದು, ನಂಜನಗೂಡು ಟಿಕೆಟ್​ ಬಗ್ಗೆ ಹೈಕಮಾಂಡ್​ ನಾಯಕರಲ್ಲಿ ಚರ್ಚೆಯಾಗುತ್ತಿದ್ದು, ಅಂತಿಮವಾಗಿ ಯಾರ ಪಾಲಾಗುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karnataka Assembly Election: ಇವಿಎಂ ದುರುಪಯೋಗ ಸಾಧ್ಯವಿಲ್ಲ, ಬದಲಾವಣೆಯೂ ಇಲ್ಲ; ಚುನಾವಣಾ ಆಯೋಗ

ಸಿದ್ದರಾಮಯ್ಯ ಜೊತೆ ಮಹದೇವಪ್ಪ ಚರ್ಚೆ

ಇನ್ನು ಧ್ರುವನಾರಾಯಣ ಪುತ್ರನಿಗೆ ಟಿಕೆಟ್​ ನೀಡಬೇಕೆಂಬ ಕೂಗು ಹೆಚ್ಚಾಗುತ್ತಿದ್ದಂತೆಯೇ ಇತ್ತ ಮಹದೇವಪ್ಪ ಇಂದು(ಮಾ.13) ಮೈಸೂರಿನಲ್ಲಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ ಧ್ರುವನಾರಾಯಣ ಮಗನಿಗೆ ಟಿಕೆಟ್ ನೀಡಬೇಕೆಂದು ಗಲಾಟೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರದ ಅಂತಸ್ತಿಗಿಂತ ಜೀವ ಮುಖ್ಯ. ಆಘಾತಕಾರಿ ಘಟನೆ ನಡೆದು ಧ್ರುವನಾರಾಯಣ ತೀರಿ ಹೋಗಿದ್ದಾರೆ. ನನ್ನನ್ನೂ ಸೇರಿದಂತೆ ಎಲ್ಲರಿಗೂ ಆ ನೋವು ಇದೆ. ಜೀವದ ಮುಂದೆ ಪೊಲಿಟಿಕಲ್ ಪವರ್, ಟಿಕೆಟ್ ಮುಖ್ಯ ಅಲ್ಲ ಎಂದರು.

ಒಟ್ಟಿನಲ್ಲಿ ಧ್ರವನಾರಾಯಣ ಪಾಲಾಹಬೇಕಿದ್ದ ನಂಜಗೂಡು ಟಿಕೆಟ್​ ಈಗ ಯಾರಿಗೆ ಸಿಗುತ್ತೆ ಎಂದು ಚರ್ಚೆಯಾಗಿತ್ತಿದ್ದು, ಅಂತಿಮವಾಗಿ ಯಾರ ಪಾಲಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:10 pm, Mon, 13 March 23