ಹುಬ್ಬಳ್ಳಿ: ನಾನು ಯಾವುದೇ ರಾಜ್ಯಕ್ಕೆ ರಾಜ್ಯಪಾಲನಾಗಿ ಹೋಗುವುದಿಲ್ಲ. ಮುಂದಿನ ಬಾರಿಯೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ತಮ್ಮ ಸ್ಪರ್ಧೆಯ ಕುರಿತು ಎದ್ದಿರುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆಲವರು ಬೇಕೆಂದೇ ಇಂಥ ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದರು. ಈ ಸ್ಪಷ್ಟನೆಯ ಮೂಲಕ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಗೊಂದಲಗಳಿಗೆ ಅವರು ತೆರೆ ಎಳೆದರು.
ಭ್ರಷ್ಟಾಚಾರದ ಸಮಗ್ರ ತನಿಖೆ ಆಗಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿಟ್ ಅಂಡ್ ರನ್ ಮಾಡಬಾರದು. ವಿರೋಧ ಪಕ್ಷದ ನಾಯಕರಾದ ಅವರು, ತಮ್ಮ ಬಳಿ ಇರುವ ದಾಖಲಾತಿಯನ್ನು ಒದಗಿಸಬೇಕು. ಸುಮ್ಮನೆ ಆರೋಪ ಮಾಡಿ ಓಡಿಹೋಗಬೇಡಿ. ಗುತ್ತಿಗೆದಾರರು ಬರೆದ ಪತ್ರವನ್ನು ಕೈಲಿಟ್ಟುಕೊಂಡು ಮಾತನಾಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ಅವರು ಲೋಕಾಯುಕ್ತಕ್ಕೆ ದೂರು ಕೊಡಲಿ, ಸಮರ್ಪಕ ತನಿಖೆ ಆಗಲಿ ಎಂದು ಸವಾಲು ಹಾಕಿದರು. ಕಮೀಷನ್ ವಿಚಾರಕ್ಕೆ ಗುತ್ತಿಗೆದಾರ ದಯಾಮರಣಕ್ಕೆ ಮನವಿ ಮಾಡಿದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಮುಖ್ಯಮಂತ್ರಿಗಳು ಎಂದು ವಿವರಿಸಿದರು.
ಪತ್ರಕರ್ತರಿಗೆ ಗಿಫ್ಟ್ ನೀಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ತಮಗೆ ನಗದು ನೀಡಲಾಗಿದೆ ಎಂದು ಯಾವುದೇ ಪತ್ರಕರ್ತರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆಯೇ? ನಾನು ಇದು ಸರಿ ಎಂದು ಹೇಳುತ್ತಿಲ್ಲ. ಪತ್ರಕರ್ತರ ಹೆಸರು ಪ್ರಸ್ತಾಪವಾದಾಗ ಅವರು ಎಚ್ಚರ ಆಗಬೇಕು. ಯಾರಾದರೂ ಹೊರಗೆ ಬನ್ನಿ. ಕೆಲವರು ಗಿಫ್ಟ್ ತೆಗೆದುಕೊಂಡಿರಬಹುದು. ಎಷ್ಟು ಜನ ತಗೆದುಕೊಂಡಿದ್ದಾರೆ, ನಿರಾಕರಿಸಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕಿದೆ. ಈ ಆರೋಪವನ್ನು ಮುಖ್ಯಮಂತ್ರಿ ತಳ್ಳಿಹಾಕಿದ್ದಾರೆ ಎಂದರು.
ಪತ್ರಕರ್ತರಿಗೆ ಲಂಚ ಕೊಟ್ಟ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಮುಖ್ಯಮಂತ್ರಿ ಕಚೇರಿಯಿಂದಲೇ ಪತ್ರಕರ್ತರಿಗೆ ನಗದು ರೂಪದಲ್ಲಿ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷವು ಮಾಡಿರುವ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ತಿರುಗೇಟು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಕಾಂಗ್ರೆಸ್ ಪಕ್ಷ ಸುಳ್ಳು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಪತ್ರಕರ್ತರಿಗೆ ಗಿಫ್ಟ್ ಕೊಡಿ ಎಂದು ನಾನು ಯಾರಿಗೂ ಸೂಚಿಸಿಲ್ಲ. ಇದು ಕಾಂಗ್ರೆಸ್ ಟೂಲ್ ಕಿಟ್ನ ಮುಂದುವರಿದ ಭಾಗ. ಕಾಂಗ್ರೆಸ್ ಅವಧಿಯಲ್ಲಿ ಐ ಫೋನ್, ಚಿನ್ನದ ನಾಣ್ಯ ನೀಡಿದ್ದರು. ಈಗ ಆರೋಪ ಮಾಡಲು ಕಾಂಗ್ರೆಸ್ಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ಪತ್ರಕರ್ತರಿಗೆ ಹಣ ನೀಡಿದ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಲೋಕಾಯುಕ್ತರ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೇವಾಲ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ನಾನು ಖಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.