ಚಿಕ್ಕಮಗಳೂರು: ಟಿಕೆಟ್ ನೀಡುವುದಕ್ಕೂ ಮುಂಚೆ ಬೇರೆ ಕ್ಷೇತ್ರಗಳಲ್ಲಿ ನಡೆಸಿದ ಪ್ರಕ್ರಿಯೆ ನಮ್ಮಲ್ಲೂ ನಡೆಸಬಹುದಿತ್ತು. ಟಿಕೆಟ್ ಘೋಷಣೆಯಾದ ಬಳಿಕವೂ ನನ್ನನ್ನು ವರಿಷ್ಠರು ಸಂಪರ್ಕ ಮಾಡಬಹುದಿತ್ತು, ಆದರೆ ಮಾಡಲಿಲ್ಲ ಎಂದು ಮಾಜಿ ಶಾಸಕ ವೈಎಸ್ವಿ ದತ್ತಾ (YSV Dutta) ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಯಗಟಿಯ ಅವರ ನಿವಾಸದಲ್ಲಿ ಮಾತನಾಡಿದ ಅವರು, ನಾನು ಬಾಡಿಗೆ ಕಾರಿನಲ್ಲಿ ತಿರುಗುತ್ತೇನೆ, ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರವಾಸ ಮಾಡುತ್ತೇನೆ. ನನ್ನನ್ನ ಹೇಗೆ ಬೇಕಾದರೂ ಸಂಪರ್ಕ ಮಾಡಬಹುದಿತ್ತು. ದತ್ತನಶಕ್ತಿ ಭಾರಿ ಗೌಣ, ಏನು ತೊಂದರೆ ಆಗುವುದಿಲ್ಲ ಎಂದು ಭಾವಿಸಿರಬಹುದು. ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ನಿಮ್ಮನ್ನು ಕರೆಸಿ ಮಾತನಾಡದ ಕಾರಣ ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನು ಯಾವುದೇ ಶರತ್ತು ಹಾಕಿ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಹಾಗೂ ಜನ ಅಭಿಪ್ರಾಯದಲ್ಲಿ ನನ್ನ ಹೆಸರು ಬರಬಹುದು ಎಂದು ಭಾವಿಸಿದ್ದೆ. ಸಮೀಕ್ಷೆ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎಂದು ತಿಳಿದಿದ್ದೆ. ಸಮೀಕ್ಷೆ ಬಗ್ಗೆ ಪೂರ್ಣವಾಗಿ ನಂಬಿಕೆ ಇಟ್ಟಿದ್ದ ಎಂದರು.
ಇದನ್ನೂ ಓದಿ: ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ರಾಜೀನಾಮೆ ನೀಡಲು ಮುಂದಾದ ಡಿಬಿ ಇನಾಮದಾರ್ ಕುಟುಂಬಸ್ಥರು
ನಾನು ಸಾಮಾನ್ಯರಲ್ಲಿ ಸಾಮಾನ್ಯ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಹಣ ಬಲವಿಲ್ಲ. ನಾನು ನನ್ನ ಜನರನ್ನ ನಂಬಿ ಕೊಂಡಿದ್ದೇನೆ. ನನ್ನ ಅಭಿಮಾನಿಗಳು ಹಾಗೂ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಕುಟುಂಬದಲ್ಲಿ ಸೂತಕ ಆವರಿಸಿದ ರೀತಿ ವಾತಾವರಣ ನಿರ್ಮಾಣವಾಗಿದೆ. ಅವರ ಪ್ರೀತಿ ನನ್ನನ್ನು ಮಡ ಗಟ್ಟುವಂತೆ ಮಾಡಿದೆ. ನನ್ನನ್ನು ನಂಬಿದವರಿಗೆ ಅನ್ಯಾಯ ಮಾಡಲು ನಾನು ತಯಾರಿಲ್ಲ. ನನ್ನ ನಿರ್ಧಾರ ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಶಕ್ತಿ, ಪ್ರೀತಿ ಎಲ್ಲವನ್ನೂ ನನಗೆ ಜನತೆ ನೀಡಿದ್ದಾರೆ. ಟಿಕೆಟ್ ಬೇರೆಯವರಿಗೆ ಕೊಟ್ಟಿರುವ ಬಗ್ಗೆ ಆಕ್ಷೇಪಣೆ ಇಲ್ಲ. ಟಿಕೆಟ್ ಪಡೆದುಕೊಂಡಿರುವ ವ್ಯಕ್ತಿಯ ಬಗ್ಗೆ ಯಾವುದೇ ಅಸೂಯೆಯೂ ಇಲ್ಲ. ಆಕ್ರೋಶವೂ ಇಲ್ಲ, ಅವರಿಗೆ ಒಳ್ಳೆಯದಾಗಲಿ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ದತ್ತಾ, ಪರ್ಯಾವಾಗಿ ಮಾರ್ಗ ಕಂಡುಕೊಳ್ಳಲು ಬಹಿರಂಗ ಪತ್ರದ ಮೂಲಕ ಅಭಿಮಾನಿಗಳ ಸಭೆ ಕರೆದಿದ್ದಾರೆ. ನನ್ನ ಮತ್ತು ಬೆಂಬಲಿಗರ ಆತ್ಮಗೌರವ ಸ್ವಾಭಿಮಾನಕ್ಕೆ ಅಪಮಾನವಾಗಿದೆ. ಇದೇ ಭಾನುವಾರ(ಏಪ್ರಿಲ್ 09) ಬೆಳಗ್ಗೆ 11ಕ್ಕೆ ಅಭಿಮಾನಿಗಳ ಸಭೆ ಕರೆದಿದ್ದೇನೆ. ಹಣವಿಲ್ಲದ ಜಾತಿ ಇಲ್ಲದ ನನ್ನನ್ನು ದತ್ತಣ್ಣ ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿರುವ ಬೆಂಬಲಿಗರು ಬಂದು ನಿರ್ಧಾರ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ದತ್ತಾ ಅಭಿಮಾನಿಗಳಿಗೆ ಪತ್ರದ ಮೂಲಕ ಸಭೆಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ: YSV Datta: ವೈಎಸ್ವಿ ದತ್ತಾ ಅವರಿಂದ ಜೆಡಿಎಸ್ ಪಕ್ಷಕ್ಕೆ ದೋಖಾ: ಕುಮಾರಸ್ವಾಮಿ ವಾಗ್ದಾಳಿ
ದತ್ತಾ ಅವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಸಿದ್ದರಾಮಯ್ಯ ಸಲಹೆಯಂತೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಬಂದಿದ್ದರು. ಕಡೂರು ಕ್ಷೇತ್ರಕ್ಕೆ ಸಹಜವಾಗಿ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವೈಎಸ್ವಿ ದತ್ತಾ ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:41 pm, Fri, 7 April 23